ADVERTISEMENT

ನಮ್ಮ ಪಕ್ಷಕ್ಕೆ ನಾವೇ ನಾಯಕರು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 9:46 IST
Last Updated 13 ನವೆಂಬರ್ 2017, 9:46 IST

ಭದ್ರಾವತಿ: ‘ರಾಜ್ಯದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಕೀಲಿಕೈ ದೆಹಲಿಯಲ್ಲಿದ್ದರೆ, ನಮ್ಮ ಪಕ್ಷಕ್ಕೆ ಚುನಾಯಿತ ಪ್ರತಿನಿಧಿಗಳೇ ನಾಯಕರು. ಈ ಸತ್ಯವನ್ನು ಮತದಾರರಿಗೆ ತಿಳಿಸಿ’ ಎಂದು ಜೆಡಿಎಸ್‌ ಮುಖಂಡ ಮಧು ಬಂಗಾರಪ್ಪ ತಿಳಿಸಿದರು. ತಾಲ್ಲೂಕಿನ ಶ್ರೀರಾಮನಗರದಲ್ಲಿ ಭಾನುವಾರ ಕೂಡ್ಲಿಗೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಾದೇಶಿಕ ಪಕ್ಷ ಜೆಡಿಎಸ್ ನಾಡಿನ ಜಲ, ಗಡಿ, ಸಂಸ್ಕೃತಿಯ ರಕ್ಷಣೆಗೆ ಬದ್ಧವಾಗಿದೆ. ಈ ರೀತಿಯ ಕೆಲಸ ಮಾಡುವ ನೈತಿಕತೆ ರಾಷ್ಟ್ರೀಯ ಪಕ್ಷದ ಚುನಾಯಿತ ಪ್ರತಿನಿಧಿಗಳಿಗೆ ಇರುವುದಿಲ್ಲ. ಹಾಗಾಗಿ ಸಮಸ್ಯೆಗಳು ಹಾಗೆ ಉಳಿದು ನಾಡಿನ ಹಿತಕ್ಕೆ ಧಕ್ಕೆಯಾಗಲಿದೆ’ ಎಂದು ಟೀಕಿಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮ ಶಾಸಕ ಬಿ.ವೈ. ರಾಘವೇಂದ್ರ ಇಲ್ಲಿನ ಕಾರ್ಖಾನೆ ಸಮಸ್ಯೆಗಳ ಬಗ್ಗೆ ಮೌನವಾಗಿದ್ದರು, ಈಗ ಎರಡು ಕಾರ್ಖಾನೆಗಳ ಪುನಶ್ಚೇತನ ಕುರಿತು ಮಾತನಾಡುವ ಮೂಲಕ ಮೊಸಳೆ ಕಣ್ಣೀರು ಸುರಿಸುವ ನಾಟಕ ನಡೆಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಮಲತಾಯಿ ಧೋರಣೆ: ‘ಇಲ್ಲಿನ ಎರಡು ಕಾರ್ಖಾನೆಗಳ ಸಮಸ್ಯೆ ನಿವಾರಣೆ ಮಾಡುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸಿವೆ’ ಎಂದು ಶಾಸಕ ಎಂ.ಜೆ. ಅಪ್ಪಾಜಿ ಬೇಸರ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಂಪಿಎಂ ಕಾರ್ಖಾನೆಗೆ ಬಂಡವಾಳ ಹೂಡುವ ಕೆಲಸ ಮಾಡಲಿಲ್ಲ, ವಿಐಎಸ್ಎಲ್ ಕಾರ್ಖಾನೆಗೆ ಗಣಿ ಮಂಜೂರು ಮಾಡಲಿಲ್ಲ, ಬದಲಾಗಿ ಜಿಲ್ಲೆಯ ಅಭಿವೃದ್ಧಿ ನೆಪದಲ್ಲಿ ಶಿಕಾರಿಪುರವನ್ನು ಅಭಿವೃದ್ಧಿ ಮಾಡಿದರು’ ಎಂದು ಟೀಕಿಸಿದರು.

‘ವಿಐಎಸ್ಎಲ್ ಉಕ್ಕು ಪ್ರಾಧಿಕಾರಕ್ಕೆ ಸೇರುವಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪಾತ್ರ ಹಿರಿದು. 20 ತಿಂಗಳು ಅಧಿಕಾರ ನಡೆಸಿದ ಕುಮಾರಸ್ವಾಮಿ ಅವಧಿಯಲ್ಲಿ 143 ಹೆಕ್ಟೇರ್ ಗಣಿ ಮಂಜೂರಾಗಿದ್ದು, ಖಾಸಗಿಯವರು ಅದರ ವಿರುದ್ಧ ದಾವೆ ಹೂಡಿದ್ದರಿಂದ ಅದು ನನೆಗುದಿಗೆ ಬಿದ್ದಿದೆ. ಎರಡು ಕಾರ್ಖಾನೆಗಳ ಹಿತ ಕಾಪಾಡುವಲ್ಲಿ ನಮ್ಮ ಪಕ್ಷದ ಪಾತ್ರ ಹಿರಿದು’ ಎಂದರು.

‘10 ವರ್ಷ ಎಂಎಲ್ಎ ಆಗಿದ್ದ ಏನೂ ಮಾಡದೆ, ಐದು ತಿಂಗಳಿಂದ ಎಲ್ಲವನ್ನು ನಾನೇ ಮಾಡಿಸಿದ್ದೇನೆ ಎಂದು ಹೇಳಿಕೊಂಡು ಓಡಾಟ ನಡೆಸಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಪರೋಕ್ಷವಾಗಿ ಬಿ.ಕೆ. ಸಂಗಮೇಶ್ವರ ಅವರನ್ನು ಟೀಕಿಸಿದರು. ಅಧ್ಯಕ್ಷತೆಯನ್ನು ಆರ್. ಕರುಣಾಮೂರ್ತಿ ವಹಿಸಿದ್ದರು.  ಎಂ. ಶ್ರೀಕಾಂತ್, ಎಸ್. ಮಣಿಶೇಖರ್, ಕರಿಯಪ್ಪ ಮಾತನಾಡಿದರು.

ಜಿ.ಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಜೆ.ಪಿ. ಯೋಗೀಶ್, ಎಸ್. ಕುಮಾರ್, ಡಿ.ಟಿ. ಶ್ರೀಧರ್, ಎಚ್.ಆರ್. ಲೋಕೇಶ್ವರರಾವ್, ಪೀರ್ ಷರೀಫ್, ಸುಕನ್ಯ, ಹಾಲಮ್ಮ, ಯಶೋದಮ್ಮ, ಜಯರಾಂ, ಮಹಾದೇವಿ, ಧರ್ಮೇಗೌಡ, ಗೀತಾ, ಸುಜಾತ, ಸಿ.ಎಂ. ರತ್ನಮ್ಮ, ಜಗದೀಶ ಗೌಡ, ರಮೇಶ್, ರಾಜು, ಮದರಸಾಬ್, ಧರ್ಮಣ್ಣ, ದಾದೇಗೌಡ ಉಪಸ್ಥಿತರಿದ್ದರು. ಸೌಮ್ಯ ನಿರೂಪಿಸಿದರು, ಎಂ.ಎನ್. ಯಶೋಧರ ಪ್ರಾರ್ಥಿಸಿದರು, ಧರ್ಮರಾಜ್ ಸ್ವಾಗತಿಸಿದರು, ಎಸ್. ಮಣಿಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.