ADVERTISEMENT

ನೀರಿನ ಘಟಕ ಸ್ಥಾಪಿಸಲು ಖಾಸಗಿ ವ್ಯಕ್ತಿಗೆ ಸ್ಥಳ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 5:19 IST
Last Updated 21 ಏಪ್ರಿಲ್ 2017, 5:19 IST

ಶಿಕಾರಿಪುರ: ಬಸ್‌ನಿಲ್ದಾಣದಲ್ಲಿ ಖಾಸಗಿ ವ್ಯಕ್ತಿಗೆ ನೀರು ಸರಬರಾಜು ಘಟಕ ಸ್ಥಾಪಿಸಲು ಸ್ಥಳ ನೀಡುವ ನಿರ್ಣಯವನ್ನು ಗುರುವಾರ ನಡೆದ ಪುರಸಭೆ ತುರ್ತು ಸಭೆಯಲ್ಲಿ ಸದಸ್ಯರು ಕೈಗೊಂಡರು.ಸಭೆಯಲ್ಲಿ ಮುಖ್ಯಾಧಿಕಾರಿ ಬಾಲಾಜಿರಾವ್‌ ಮಾತನಾಡಿ, ‘ಖಾಸಗಿ ವ್ಯಕ್ತಿಯೊಬ್ಬರು ಬಸ್‌ನಿಲ್ದಾಣದಲ್ಲಿ ಕುಡಿಯುವ ನೀರು ಘಟಕ ಸ್ಥಾಪಿಸಲು ಅರ್ಜಿ ನೀಡಿದ್ದು, ಅದಕ್ಕಾಗಿ ಸ್ಥಳ ನೀಡಬೇಕಾಗಿದೆ’ ಎಂದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಸದಸ್ಯ ಪಾರಿವಾಳ ಶಿವರಾಮ್‌, ‘ರಾಜ್ಯ ಸರ್ಕಾರ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಮಾಡುತ್ತಿದೆ. ಆದ್ದರಿಂದ ಖಾಸಗಿ ವ್ಯಕ್ತಿಗೆ ಜಾಗ ನೀಡುವ ಬದಲು ಸರ್ಕಾರದ ವೆಚ್ಚದಲ್ಲಿಯೇ ಘಟಕ ಸ್ಥಾಪಿಸಬಹುದು’ ಎಂದು ಸಲಹೆ ನೀಡಿದರು.ಪುರಸಭೆ ಸದಸ್ಯ ಎಂ.ಬಿ. ನಿಜಲಿಂಗಪ್ಪ ಮಾತನಾಡಿ, ‘ಪುರಸಭೆ ನೀಡುವ ಸ್ಥಳಕ್ಕೆ ನೆಲ ಬಾಡಿಗೆ ರೂಪದಲ್ಲಿ ಖಾಸಗಿ ವ್ಯಕ್ತಿಯಿಂದ ಹಣ ಪಡೆಯಬೇಕು. ವರ್ಷಕ್ಕೊಮ್ಮೆ ಈ ಘಟಕದ ಪರವಾನಗಿಯನ್ನು ನವೀಕರಿಸಬೇಕು’ ಎಂದುಅವರು ಸಲಹೆ ನೀಡಿದರು.

ಸದಸ್ಯರ ಸಲಹೆಯಂತೆ ಖಾಸಗಿ ವ್ಯಕ್ತಿಗೆ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅನುಮತಿ ಹಾಗೂ ಘಟಕಕ್ಕೆ ಬಸ್‌ನಿಲ್ದಾಣದಲ್ಲಿ ಸ್ಥಳ ನೀಡುವ ನಿರ್ಣಯ ಕೈಗೊಳ್ಳಲಾಯಿತು.
ನೂತನ ಸಂತೆ ಮೈದಾನದ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಯ ₹ 94 ಲಕ್ಷ  ಕ್ರಿಯಾ ಯೋಜನೆಗೆ ಮಂಜೂರಾತಿ ನೀಡುವ ವಿಷಯವನ್ನು ಮುಖ್ಯಾಧಿಕಾರಿ ಬಾಲಾಜಿ ರಾವ್‌ ಪ್ರಸ್ತಾಪಿಸಿದರು. 

ADVERTISEMENT

‘ಈ ವಿಷಯವನ್ನು ತುರ್ತು ಸಭೆಯ ಬದಲು ಸಾಮಾನ್ಯ ಸಭೆಯಲ್ಲಿ ತಂದು ಚರ್ಚಿಸಬೇಕು’ ಎಂದು ಸದಸ್ಯ ಮಧುಸೂದನ್‌ ಸಲಹೆ ನೀಡಿದರು.ಬೀದಿ ದೀಪ ಅಳವಡಿಕೆ, ಕುಡಿಯುವ ನೀರಿನ ಸಮರ್ಪಕ ಸರಬರಾಜಿನ ಕುರಿತು ಸಭೆಯಲ್ಲಿ ಸದಸ್ಯರು ಚರ್ಚಿಸಿದರು. ಪುರಸಭೆ ಉಪಾಧ್ಯಕ್ಷೆ ಫೈರೋಜಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಗೌಡ, ಸದಸ್ಯರಾದ ಟಿ.ಎಸ್‌. ಮೋಹನ್‌, ಚಾರಗಲ್ಲಿ ಪರಶುರಾಮ್‌, ಹುಲ್ಮಾರ್‌ ಮಹೇಶ್‌, ಕೆ.ಜಿ. ವಸಂತ ಗೌಡ, ಎಂ.ಎಚ್‌. ರವೀಂದ್ರ, ಪಾರ್ವತಮ್ಮ, ಪದ್ಮಾಗಜೇಂದ್ರ, ಜಬೀನಾ ರಹಮತ್‌ ಉಲ್ಲಾ ಪಟೇಗಾರ್‌, ಶಬನಾಬಾನು ಸಾದಿಕ್‌, ಆರೋಗ್ಯ ನಿರೀಕ್ಷಕ ರಾಜ್‌ಕುಮಾರ್‌, ಎಂಜಿನಿಯರ್‌ ಪ್ರಸಾದ್‌, ಹಾಲೇಶಪ್ಪ, ಸಿಬ್ಬಂದಿ ಪಿಳ್ಳೆ, ಸಂತೋಷ್‌, ಅಂಬಿಕಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.