ADVERTISEMENT

ಪುಸ್ತಕ ಸಂಗ್ರಹಿಸಿದವರ ಮನೆಬಾಗಿಲಿಗೆ ಸಾಹಿತಿಗಳು

ಶಿವಮೊಗ್ಗದ ವಿದ್ಯಾರ್ಥಿಗಳ ಮನೆಯಲ್ಲಿ ನಾ.ಡಿಸೋಜ, ವಸುಧೇಂದ್ರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2014, 6:25 IST
Last Updated 4 ಅಕ್ಟೋಬರ್ 2014, 6:25 IST

ಶಿವಮೊಗ್ಗ: ಪುಸ್ತಕ ಓದುವ ಹವ್ಯಾಸದಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚುತ್ತದೆ. ಓದಿನ ಜತೆ ಪುಸ್ತಕ ಸಂಗ್ರಹದ ಹವ್ಯಾಸವನ್ನೂ ಬೆಳೆಸಿ ಕೊಂಡರೆ? ಹೆಸರಾಂತ ಸಾಹಿತಿ ನಾ.ಡಿಸೋಜ, ಕಥೆಗಾರ ವಸುಧೇಂದ್ರ ಅವರು ನಿಮ್ಮ ಮನೆ ಬಾಗಿಲಿಗೇ ಬರುತ್ತಾರೆ. ನಿಮ್ಮೊಂದಿಗೆ ಹರಟುತ್ತಾರೆ. ಭವಿಷ್ಯದ ನಿಮ್ಮ ಕನಸಿಗೆ ನೀರೆರೆಯುತ್ತಾರೆ.

–ಹೌದು ಇತಂಹ ಅಪರೂಪದ ಅವಕಾಶ ಬುಧವಾರ ನಗರದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೊರೆಯಿತು. ಅದು ಅವರು ಪುಸ್ತಕ ಸಂಗ್ರಹ ಹವ್ಯಾಸ ಬೆಳೆಸಿಕೊಂಡ ಕಾರಣಕ್ಕಾಗಿ.

ಆಧುನಿಕ ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಮಕ್ಕಳಲ್ಲಿನ ಓದುವ ಅಭಿರುಚಿ ಕ್ಷೀಣಿಸುತ್ತಿದ್ದು, ಮೊಬೈಲ್‌, ಟಿ.ವಿ. ಮತ್ತಿತರ ದೃಶ್ಯ ವೀಕ್ಷಣೆಗೆ ಆಸಕ್ತಿ ತೋರುತ್ತಿದ್ದಾರೆ. ಮಕ್ಕಳಲ್ಲಿನ ಇಂತಹ ಮನೋಸ್ಥಿತಿ ಬದಲಿಸಿ ಅವರಲ್ಲಿ ಪುಸ್ತಕದ ರುಚಿ ಹತ್ತಿಸಬೇಕು ಎನ್ನುವ ಉದ್ದೇಶದಿಂದ ನಗರದ ರಾಷ್ಟ್ರೋತ್ಥಾನ ಬಳಗ ಇಂತಹ ಒಂದು ಪ್ರಯತ್ನಕ್ಕೆ ಚಾಲನೆ ನೀಡಿದೆ.

ಒಂದು ತಿಂಗಳ ಮೊದಲು ನಗರ ವ್ಯಾಪ್ತಿಯಲ್ಲಿ ಬರುವ 52 ಪ್ರೌಢಶಾಲೆಗಳಿಗೆ ಪತ್ರ ಬರೆದು ಪುಸ್ತಕ ಸಂಗ್ರಹದ ಹವ್ಯಾಸ ಇರುವ ಮಕ್ಕಳ ಪಟ್ಟಿ ಸಲ್ಲಿಸಲು ಕೋರಲಾಗಿತ್ತು. ಅದರಂತೆ 174 ಮಕ್ಕಳ ಪಟ್ಟಿ ಸಿದ್ಧವಾಗಿತ್ತು. ಪುಸ್ತಕ, ಸಾಹಿತ್ಯದ ಬಗ್ಗೆ ಆಸಕ್ತಿ ಇರುವ ವಿಭಿನ್ನ ಕ್ಷೇತ್ರಗಳ 15 ತಂಡ ಮಾಡಿ, ಎಲ್ಲ 174 ಮಕ್ಕಳ ಮನೆಗೆ ಭೇಟಿ ನೀಡಲಾಗಿತ್ತು. ಅವರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಮನೆಗೆ ಬುಧವಾರ ನಾ.ಡಿಸೋಜ ಹಾಗೂ ವಸುಧೇಂದ್ರ ಭೇಟಿ ನೀಡಿ,  ಪುಸ್ತಕ ಸಂಗ್ರಹ ವೀಕ್ಷಿಸಿ, ಪ್ರತಿಯೊಬ್ಬರ ಜತೆಯೂ 15–20 ನಿಮಿಷ ಪ್ರತ್ಯೇಕವಾಗಿ ಹರಟಿದರು. ಅವರನ್ನು ಇತ್ತಷ್ಟು ಉತ್ತೇಜಿಸಿದರು.

ಬೆಳಿಗ್ಗೆ 7ಕ್ಕೆ ಆರಂಭವಾದ ಈ ಭೇಟಿ ಕಾರ್ಯ ಮಧ್ಯಾಹ್ನ 2ಕ್ಕೆ ಮುಕ್ತಾಯವಾಯಿತು. ಪ್ರತಿಯೊಬ್ಬ ವಿದ್ಯಾರ್ಥಿ ಸಂಗ್ರಹಿಸಿದ ಪುಸ್ತಕ, ಕನ್ನಡ ಪ್ರೀತಿ, ಜೋಡಿಸಿಟ್ಟ ಕ್ರಮ, ಪುಸ್ತಕಗಳ ಬಗೆಗಿನ ಅವರ ಜ್ಞಾನ, ಪುಸ್ತಕ ವೈವಿಧ್ಯತೆ, ನೀತಿಕಥೆ, ವಿಜ್ಞಾನ, ಆಧ್ಯಾತ್ಮಿಕತೆ ಬಗ್ಗೆ ಇರುವ ಅಭಿರುಚಿ ಮತ್ತಿತರ ಅಂಶಗಳನ್ನು ಪರಿಶೀಲಿಸಿ, ಆ ಆಧಾರದ ಮೇಲೆ ಪ್ರಥಮ ಮೂವರನ್ನು ಆಯ್ಕೆ ಮಾಡಿದರು.

ಹಬ್ಬದ ಸಂಭ್ರಮ:  80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜಾ ಹಾಗೂ ಕಥೆಗಾರ ವಸುಧೇಂದ್ರ ಅವರು ವಿದ್ಯಾರ್ಥಿಗಳ ಮನೆ ಬಾಗಿಲಿಗೇ ಭೇಟಿ ನೀಡಿದ ಕಾರಣ ಪ್ರತಿ ಮನೆಯ ಅಂಗಳದಲ್ಲೂ ರಂಗೋಲಿ ಹಾಕಿ, ತಳಿರುತೋರಣ ಕಟ್ಟಿ ಶೃಂಗರಿಸಲಾಗಿತ್ತು. ಮನೆಯಲ್ಲಿ ಸಿಹಿ ಮಾಡಿ ಹಂಚಿದರು. ನೆರೆಹೊರೆಯವರೂ ಸಂಭ್ರಮಕ್ಕೆ ಸಾಕ್ಷಿಯಾದರು.

‘ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ, ಸಂಗ್ರಹಿಸುವ ಹವ್ಯಾಸ ಮೂಡಿಸಲು ಇಂತಹ ಒಂದು ಪುಟ್ಟ ಪ್ರಯತ್ನಕ್ಕೆ ಕೈಹಾಕಿದೆವು. ಇಂತಹ ಪ್ರಯತ್ನ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿದರೆ ಶ್ರಮ ಸಾರ್ಥಕವಾಗುತ್ತದೆ’ ಎನ್ನುತ್ತಾರೆ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಡಾ.ಪಿ.ಆರ್‌.ಸುಧೀಂದ್ರ.

ಪುಸ್ತಕ ಸಂಗ್ರಹ: ಮೊದಲ 10 ವಿದ್ಯಾರ್ಥಿಗಳು
ಅಂಜನಾರಾಣಿ, ವಿಕಾಸ ಶಾಲೆ (ಪ್ರಥಮ) ಎಚ್‌.ಜಿ.ಲಕ್ಷ್ಮಿ, ಮೇರಿ ಇಮ್ಯೂಕ್ಯೂಲೇಟ್‌ ಶಾಲೆ (ದ್ವಿತೀಯ) ಪರಿಪೂರ್ಣ ಭಟ್‌, ಭಾರತೀಯ ವಿದ್ಯಾಭವನ ಶಾಲೆ (ತೃತೀಯ) ಎಂ.ಗೌತಮ ಶರ್ಮ, ಸಾಂದೀಪನ ಶಾಲೆ (ತೃತೀಯ) ಡಿ.ಸಿ.ಗೌರೀಶ, ರಾಮಕೃಷ್ಣ ವಿದ್ಯಾಶಾಲೆ (ಸಮಾಧಾನಕರ) ನಾಗಶ್ರೀ, ಆರಗ, ಮೇರಿ ಇಮ್ಯೂಕ್ಯೂಲೇಟ್‌ ಶಾಲೆ ಸಿ.ಎಸ್.ವಿಭಾ, ಮೇರಿ ಇಮ್ಯೂಕ್ಯೂಲೇಟ್‌ ಶಾಲೆ ಎಂ.ರಶ್ಮಿ, ಮೇರಿ ಇಮ್ಯೂಕ್ಯೂಲೇಟ್‌ ಶಾಲೆ ಜಿ.ಎಂ.ಶ್ರಾವ್ಯಾ, ವಿಕಾಸ ಶಾಲೆ ಧನುಷ್‌ ನಾವಡ, ಸಾಂದೀಪನ ಶಾಲೆ

ಸೂಕ್ತ ಮಾರ್ಗದರ್ಶನದ ಅಗತ್ಯವಿದೆ
ಈಗಿನ ಮಕ್ಕಳಲ್ಲಿ ಪುಸ್ತಕ ಸಂಗ್ರಹದ ಕಲ್ಪನೆಯೇ ಇಲ್ಲ. ಪುಸ್ತಕ ಜೋಡಿಸಿಡುವ ಕ್ರಮ ಬದ್ಧತೆಯೂ ಗೊತ್ತಿಲ್ಲ. ಪುಸ್ತಕ ಪಟ್ಟಿ ಮಾಡಿಲ್ಲ. ದೊಡ್ಡವರಿಗೆ ಬರೆದ, ಬಹು ಗಂಬೀರ ಪುಸ್ತಕ ಓದುತ್ತಾರೆ. ಯಾವ ಪುಸ್ತಕ ಓದಬೇಕು ಎನ್ನುವ ಮಾಹಿತಿ ಇಲ್ಲ. ಶಿಶು ಪ್ರಾಸ ಗೊತ್ತಿಲ್ಲ. ಮಕ್ಕಳ ಕಥೆ, ಕವಿತೆ ಬರೆದವರ ಪರಿಚಯವಿಲ್ಲ. ಪೋಷಕರು, ಶಿಕ್ಷಕರು ಅವರಲ್ಲಿ ಇಂತಹ ಅಭಿರುಚಿ ಮೂಡಿಸುವ ಪ್ರಯತ್ನ ಮಾಡಿಲ್ಲ. ‘ಅಪ್ಪ–ಅಮ್ಮ ಓದುತ್ತಾರೆ ಅದಕ್ಕೆ ನಾವೂ ಓದುತ್ತಿದ್ದೇವೆ’ ಎನ್ನುವ ಉತ್ತರ ಇತ್ತು. ಪುಸ್ತಕ ವಿಷಯ ಹೊರತುಪಡಿಸಿದರೆ ನಿಜಕ್ಕೂ ಮಕ್ಕಳು ಬಹಳ ಬುದ್ಧಿವಂತರು. ಸರಳವಾಗಿ, ನೇರವಾಗಿ ಉತ್ತರಿಸುತ್ತಾರೆ
–ನಾ.ಡಿಸೋಜ, ಸಾಹಿತಿ.

ಶಾಲಾ ಹಂತದಿಂದಲೇ ಅಭಿರುಚಿ ಸಾಮಾನ್ಯ ಜನರ ಮಕ್ಕಳಲ್ಲೂ ಪುಸ್ತಕ ಓದುವ ಅಭಿರುಚಿ ಇದೆ. ಇದೊಂದು ಯಶಸ್ವಿ ಪ್ರಯೋಗ. ಮಕ್ಕಳಲ್ಲಿ ಓದಿನ ರುಚಿ ಹತ್ತಿಸಿದರೆ ಮುಂದೆ ಉತ್ತಮ ಜ್ಞಾನ ಸಂಪಾದಿಸುತ್ತಾರೆ. ಇಂತಹ ಪ್ರಯೋಗ ಶಾಲೆಯ ಹಂತದಿಂದಲೇ ಪ್ರಾರಂಭವಾಗಬೇಕು.
–ವಸುಧೇಂದ್ರ, ಕಥೆಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT