ADVERTISEMENT

ಪ್ರತಿ ಕಡತದಲ್ಲೂ ಅಡಗಿದೆ ಬಡವರ ಕಣ್ಣೀರು

ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:18 IST
Last Updated 21 ಜನವರಿ 2017, 5:18 IST
ಪ್ರತಿ ಕಡತದಲ್ಲೂ ಅಡಗಿದೆ ಬಡವರ ಕಣ್ಣೀರು
ಪ್ರತಿ ಕಡತದಲ್ಲೂ ಅಡಗಿದೆ ಬಡವರ ಕಣ್ಣೀರು   

ಶಿವಮೊಗ್ಗ: ‘ಸರ್ಕಾರಿ ಇಲಾಖೆಗಳ ಪ್ರತಿ ಕಡತದಲ್ಲೂ ಬಡವರ ಕಣ್ಣೀರು ಅಡಗಿರುತ್ತದೆ. ಬೇಡಿಕೆಗೆ ಸ್ಪಂದಿಸುವ ಮೂಲಕ ಅಧಿಕಾರಿಗಳು ಕಣ್ಣೀರು ಒರೆಸುವ ಪ್ರಯತ್ನ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕ್ರೀಡಾ ಇಲಾಖೆ, ಸರ್ಕಾರಿ ನೌಕರರ ಸಂಘ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನೌಕರರು ಸರ್ಕಾರದ ರಾಯಭಾರಿಗಳು. ಸಾಮಾಜಿಕ ಹೊಣೆಗಾರಿಕೆ ಇರುವವರು. ಬಡವರ ನೋವಿಗೆ ಸ್ಪಂದಿಸಿದರೆ ಬದುಕಿಗೊಂದು ಸಾರ್ಥಕತೆ ದೊರೆಯುತ್ತದೆ’ ಎಂದು ನೌಕರರಿಗೆ ಕಿವಿಮಾತು ಹೇಳಿದರು.

‘ನಿತ್ಯ ಕಡತಗಳಲ್ಲೇ ಮುಳುಗಿ ಹೋಗುವ ನೌಕರರಿಗೆ ಕ್ರೀಡಾಕೂಟ ನಿಜಕ್ಕೂ ಉತ್ಸಾಹ ಮೂಡಿಸುತ್ತದೆ. ಪ್ರತಿ ವರ್ಷ ನಡೆಯುವ ಕ್ರೀಡಾ ಚಟುವಟಿಕೆ
ಗಳಲ್ಲಿ ಭಾಗವಹಿಸಬೇಕು. ಕಡತಗಳ ಒಳಗಿಂದ ಹೊರಬರಬೇಕು’ ಎಂದು ಕರೆ ನೀಡಿದರು.

‘ಈ ಬಾರಿ 12ನೇ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದೇನೆ. ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡುತ್ತೇನೆ. ಆದರಲ್ಲಿ ಯಾವುದೇ ಅನುಮಾನ ಬೇಡ. ಕೆಲವರು ಸಿದ್ದರಾಮಯ್ಯ ಸರ್ಕಾರಿ ನೌಕರರ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಕಿವಿಕೊಡಬಾರದು’ ಎಂದರು.

‘ಸರ್ಕಾರದ ಯೋಜನೆಗಳನ್ನು  ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ನೌಕರರ ಪಾತ್ರ ಮಹತ್ವದ್ದು. ಸರ್ಕಾರದ ಜೀವಾಳವಾಗಿರುವ ನೌಕರರು ಉತ್ತಮ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಉತ್ತಮ ಹೆಸರು ತರಬೇಕು’ ಎಂದು ಸಲಹೆ ನೀಡಿದರು.

‘ಆರೋಗ್ಯಯುತ ಜೀವನ ನಡೆಸಲು ಕ್ರೀಡೆ ಮುಖ್ಯ. ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ನೌಕರರು ನಿತ್ಯ ನಿಯಮಿತ ವ್ಯಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ,  ಸಂಕಷ್ಟದಲ್ಲಿರುವ ಜನರಿಗೆ ನೌಕರ ವರ್ಗ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ನೌಕರರು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡರೆ ಹೆಚ್ಚಿನ ಅನುಕೂಲವಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಪ್ರಾಸ್ತಾವಿಕ ಮಾತನಾಡಿ,  ಕ್ರೀಡಾಕೂಟ ಆಯೋಜನೆಗೆ ಮುಂದಿನ ವರ್ಷದಿಂದ ₹ 1 ಕೋಟಿ ನೀಡಬೇಕು ಎಂದು ಬೇಡಿಕೆ ಮಂಡಿಸಿದರು.

ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ಕೆ.ಬಿ. ಪ್ರಸನ್ನ ಕುಮಾರ್, ಶಾರದಾ ಪೂರ್‍ಯಾನಾಯ್ಕ, ಮಧುಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿವನ ಖರೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಸಿಇಒ ಕೆ.ರಾಕೇಶ್ ಕುಮಾರ್, ‘ಸೂಡಾ’ ಅಧ್ಯಕ್ಷ ಕೆ.ಎಂ. ಉಸ್ಮಾನ್  ಸೇರಿದಂತೆ ಇತರರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.