ADVERTISEMENT

ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿ ಜಯಂತ್

​ಪ್ರಜಾವಾಣಿ ವಾರ್ತೆ
Published 31 ಮೇ 2016, 9:56 IST
Last Updated 31 ಮೇ 2016, 9:56 IST

ಸಾಗರ: ತಾಲ್ಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್.ಜಯಂತ್ ಹಾಗೂ ಸದಸ್ಯರಾಗಿ ಚಂದ್ರಕಾಂತ್ ನೇಮಕಗೊಂಡಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಕಾಗೋಡು ಅಣ್ಣಪ್ಪ ಅವರ ರಾಜಿನಾಮೆಯಿಂದ ಈ ಸ್ಥಾನ ತೆರವಾಗಿತ್ತು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬಿ.ಆರ್.ಜಯಂತ್ ಅವರನ್ನು ಅಭಿನಂದಿಸಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಭೂಮಿಯ ಹಕ್ಕನ್ನು ಫಲಾನುಭವಿಗಳಿಗೆ ನೀಡುವುದು ಅತ್ಯಂತ ಪುಣ್ಯದ ಕೆಲಸ. ಹೀಗೆ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳ ಬೇಕು ಎಂದರು.

ತಾಲ್ಲೂಕಿನಲ್ಲಿ ಮೂರು ವರ್ಷಗಳ ಹಿಂದೆ ಬಗರ್‌ಹುಕುಂ ಸಮಿತಿ ರಚನೆ ಯಾಗಿದ್ದು ಈವರೆಗೆ 1,600 ಹಕ್ಕುಪತ್ರ ಗಳನ್ನು ವಿತರಿಸಲಾಗಿದೆ. ಇನ್ನೂ ಎರಡು ಸಾವಿರ ಅರ್ಜಿಗಳು ವಿಲೇ ಆಗಬೇಕಿದೆ. ಬರುವ ಡಿಸೆಂಬರ್ ಅಂತ್ಯದೊಳಗೆ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇ ಮಾಡುವತ್ತ ನೂತನ ಅಧ್ಯಕ್ಷರು ಗಮನ ಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಈ ಹಿಂದಿನ ರಾಜ್ಯ ಸರ್ಕಾರ ಭೂ ಕಂದಾಯ ಅಧಿನಿಯಮಕ್ಕೆ ತಂದ ಹಲವು ತಿದ್ದುಪಡಿಗಳಿಂದ ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಕಾನೂನಿನ ತೊಡಕು ಎದುರಾಗಿದೆ. ಇವುಗಳ ಜೊತೆಗೆ ಕಾನು, ಸೊಪ್ಪಿನಬೆಟ್ಟ ಇವುಗಳು ಪರಿಭಾವಿತ ಅರಣ್ಯದ ವ್ಯಾಪ್ತಿಗೆ ಸೇರಿರುವುದು ಕೂಡಾ ಸಮಸ್ಯೆಯಾಗಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಈ ತೊಡಕುಗಳನ್ನು ನಿವಾರಿಸುವ ಸಂಬಂಧ ಚರ್ಚಿಸಿ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ ಎಂದರು.

ಬಗರ್‌ಹುಕುಂ ಸಮಿತಿ ನೂತನ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ‘ರಾಜ್ಯದಲ್ಲಿ ಭೂ ಸುಧಾರಣೆ ಕಾನೂನು ಜಾರಿಯಾದ ದಿನದಿಂದಲೂ ಭೂ ರಹಿತರಿಗೆ ಭೂಮಿಯ ಹಕ್ಕು ಕೊಡಿಸಲು ಕಾಗೋಡು ತಿಮ್ಮಪ್ಪ ಅವರು ಕರ್ಮ ಯೋಗಿಯಂತೆ ಕೆಲಸ ಮಾಡುತ್ತಿದ್ದಾರೆ. ಬಗರ್‌ಹುಕುಂ ಸಮಿತಿ ಅಧ್ಯಕ್ಷನಾಗಿ ಅವರ ಆಶಯಗಳನ್ನು ಸಾಕಾರ ಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ’ ಎಂದು ತಿಳಿಸಿದರು.

ಬಗರ್‌ಹುಕುಂ ಸಮಿತಿ ನೂತನ ಸದಸ್ಯ ಚಂದ್ರಕಾಂತ್, ಲಿಂಗರಾಜ್, ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.