ADVERTISEMENT

ಬಾಲ್ಯವಿವಾಹ ತಡೆಗೆ ಜೂನ್ 1ರಿಂದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 18 ಮೇ 2017, 9:54 IST
Last Updated 18 ಮೇ 2017, 9:54 IST

ಶಿವಮೊಗ್ಗ: ರಾಜ್ಯ ಮಕ್ಕಳಹಕ್ಕುಗಳ ರಕ್ಷಣಾ ಆಯೋಗ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಜೂನ್ 1ರಿಂದ 7ರವರೆಗೆ ‘ಬಾಲ್ಯವಿವಾಹ ತಡೆ’ ಮತ್ತು ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವ ‘ಶಾಲೆ ಕಡೆ ನನ್ನ ನಡೆ’ ಎಂಬ ಬೃಹತ್ ಜಾಗೃತಿ  ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಆಂದೋಲನದ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಹೋಬಳಿ ಕೇಂದ್ರಗಳಿಗೆ ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕರ್ತರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭೇಟಿ ನೀಡಿ, ಬಾಲ್ಯವಿವಾಹ ತಡೆ ಮತ್ತು ಮಕ್ಕಳ ದಾಖಲಾತಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಗ್ರಾಮದ ಬೀದಿಗಳಲ್ಲಿ ಪಥಸಂಚಲನ ಹಾಗೂ ಕಿರುಸಾಕ್ಷ್ಯ ಚಿತ್ರ ಪ್ರದರ್ಶಿಸಲಾಗುವುದು ಎಂದರು.

ವಿಶೇಷ ವಾಹನ: ಆಂದೋಲನಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನವು ಜೂನ್ 1ರಂದು ಶಿವಮೊಗ್ಗ, 2ಕ್ಕೆ ಭದ್ರಾವತಿ, 3ಕ್ಕೆ ಶಿಕಾರಿಪುರ, 4ಕ್ಕೆ ಸೊರಬ, 5ಕ್ಕೆ ಸಾಗರ, 6ಕ್ಕೆ ತೀರ್ಥಹಳ್ಳಿ ಮತ್ತು 7ಕ್ಕೆ ಹೊಸನಗರ ತಾಲ್ಲೂಕಿನಲ್ಲಿ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಬಾಲ್ಯವಿವಾಹ ಪ್ರೋತ್ಸಾಹಿಸುವ ಕಲ್ಯಾಣ ಮಂಟಪಗಳ ಮುಖ್ಯಸ್ಥರು, ಪುರೋಹಿತರು, ಪೋಷಕರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಾಲ್ಯವಿವಾಹ ನಿಯಂತ್ರಣಕ್ಕೆ ಮುಂದಾಗುವ ಅಧಿಕಾರಿಗಳ  ವಿರುದ್ಧ ಹಲ್ಲೆಗೆ ಮುಂದಾಗುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಂದು ವೇಳೆ ಕಲ್ಯಾಣ ಮಂಟಪ ಮುಖ್ಯಸ್ಥರು ಬಾಲ್ಯವಿವಾಹಕ್ಕೆ ಪ್ರೋತ್ಸಾಹ ನೀಡಿದಲ್ಲಿ ಎಚ್ಚರಿಕೆಯ ನೋಟಿಸ್ ಜಾರಿಗೊಳಿಸಲು, ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ ಮಾತನಾಡಿ, ಬಾಲ್ಯವಿವಾಹ ತಡೆಗೆ ಸಂಬಂಧ ದಾಖಲಾಗುವ ಪ್ರಕರಣಗಳಿಗೆ ರಾಜಕಾರಣಿಗಳ ಒತ್ತಡ ಹೆಚ್ಚಾಗುತ್ತಿದೆ. ಯಾರೇ ಆಗಿರಲಿ, ಬಾಲ್ಯವಿವಾಹಕ್ಕೆ ಪ್ರೋತ್ಸಾಹಿಸುವ ಪ್ರತಿಯೊಬ್ಬರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾತನಾಡಿ, ಶಾಲಾ ದಾಖಲಾತಿ ಆಂದೋಲನ ಯಶಸ್ವಿಯಾಗಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮಕ್ಕಳನ್ನು ಶಾಲೆಗೆ ಸೇರಿಸಲು ಆಸಕ್ತಿ ತೋರದೇ ಇರುವ ಪೋಷಕರಿಗೆ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಕಿಶೋರಿಯರ ವಯಸ್ಸಿನ ವಿವರ ಸಂಗ್ರಹಿಸಲಾಗಿದೆ. ಹೋಬಳಿ ಮತ್ತು ತಾಲ್ಲೂಕು ಮಟ್ಟದಲ್ಲಿ ಈ ರೀತಿಯ ವಿವರ ಸಂಗ್ರಹಿಸಿಟ್ಟುಕೊಳ್ಳುವುದು ಉಪಯುಕ್ತ. ಇದು ಬಾಲ್ಯವಿವಾಹ ತಡೆಯುವಲ್ಲಿ ಸಹಕಾರಿಯಾಗುತ್ತದೆ ಎಂದು  ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುರೇಶ್ , ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಮಚ್ಛಾದೋ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

**

64 ಬಾಲ್ಯವಿವಾಹ ಪ್ರಕರಣ ದಾಖಲು

2016ರ ಏಪ್ರಿಲ್‌ನಿಂದ 2017ರ ಏಪ್ರಿಲ್ ಅಂತ್ಯದವರೆಗೆ 64 ಬಾಲ್ಯವಿವಾಹ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದರಲ್ಲಿ 57 ವಿವಾಹ ಪ್ರಕರಣ ತಡೆಹಿಡಿಯಲಾಗಿದ್ದು, 7 ಪ್ರಕರಣಗಳಲ್ಲಿ ದೂರು ದಾಖಲಾಗಿದೆ. ಇನ್ನು 47 ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿ ಎದುರು ವಿಚಾರಣೆಯ ಹಂತದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.