ADVERTISEMENT

ಬೇಸಿಗೆ ನೀರಿನ ಸಮಸ್ಯೆ ಎದುರಿಸಲು ತಾಲೀಮು

ಸಮಸ್ಯಾತ್ಮಕ ಗ್ರಾಮಗಳಿಗೆ ಮೊದಲ ಆದ್ಯತೆ, ಭವಿಷ್ಯದ ಕೊರತೆ ನೀಗಿಸಲೂ ಸಿದ್ಧತೆ

ಚಂದ್ರಹಾಸ ಹಿರೇಮಳಲಿ
Published 10 ಜನವರಿ 2017, 8:41 IST
Last Updated 10 ಜನವರಿ 2017, 8:41 IST
ಶಿವಮೊಗ್ಗ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದ ಮಧ್ಯೆ ಇರುವ ಮಲ್ಲಂದೂರು ಗ್ರಾಮದಲ್ಲಿ ತೆರದ ಬಾವಿಯ ನೀರು ಪಾತಾಳ ತಲುಪಿದೆ.
ಶಿವಮೊಗ್ಗ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದ ಮಧ್ಯೆ ಇರುವ ಮಲ್ಲಂದೂರು ಗ್ರಾಮದಲ್ಲಿ ತೆರದ ಬಾವಿಯ ನೀರು ಪಾತಾಳ ತಲುಪಿದೆ.   
ಶಿವಮೊಗ್ಗ: ಮಳೆ ಕೊರತೆಯ ಕಾರಣ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ಮಲೆನಾಡಿನ ಹಲವು ಗ್ರಾಮಗಳಲ್ಲಿ ಈ ಬಾರಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.
 
ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 2,237 ಮಿ.ಮೀ. ಆದರೆ, 2016ರಲ್ಲಿ ಬಿದ್ದ ಮಳೆ ಪ್ರಮಾಣ 1,660 ಮಿ.ಮೀ. ಮಾತ್ರ. 557 ಮಿ.ಮೀ. ಮಳೆ ಕೊರತೆಯಾಗಿದೆ. ಭದ್ರಾ ಸೇರಿದಂತೆ ನೀರಾವರಿ ಉದ್ದೇಶದ ಜಲಾಶಯಗಳು, ಬಹುತೇಕ ಕೆರೆಕಟ್ಟೆ ಗಳು ಬರಿದಾಗಿವೆ. ಇದು ಅಂತರ್ಜಲದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
 
ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಈಗಾಗಲೇ ಜಿಲ್ಲೆಯ 201 ಗ್ರಾಮಗಳನ್ನು ಕುಡಿಯುವ ನೀರಿನ ಅತಿ ಸಮಸ್ಯೆ ಇರುವ ಗ್ರಾಮಗಳು ಎಂದು ಗುರುತಿಸಿದ್ದಾರೆ. ಈ ಸಂಖ್ಯೆ ಬೇಸಿಗೆ ಆರಂಭದ ನಂತರ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. 
 
ಶಿವಮೊಗ್ಗ ತಾಲ್ಲೂಕಿನಲ್ಲಿ 26, ಭದ್ರಾವತಿ 8, ಸಾಗರ 24, ತೀರ್ಥಹಳ್ಳಿ 32, ಹೊಸನಗರ 6, ಶಿಕಾರಿಪುರ 40 ಹಾಗೂ ಸೊರಬ ತಾಲ್ಲೂಕು ವ್ಯಾಪ್ತಿಯಲ್ಲಿ 65 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳು ಎಂದು ಪಟ್ಟಿ ಮಾಡಲಾಗಿದೆ.
 
ಸಮಸ್ಯೆ ಇರುವ ಗ್ರಾಮಗಳಲ್ಲಿ ತುರ್ತಾಗಿ ತಲಾ ಒಂದು ಕೊಳವೆಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ₹ 4.30 ಕೋಟಿ ವೆಚ್ಚದ  ಕ್ರಿಯಾ ಯೋಜನೆ ರೂಪಿಸಲಾಗಿದೆ.
 
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಮೇಲೂ ನಿಗಾ ಇರಿಸಲಾಗಿದೆ. ಮುಂಜಾ ಗ್ರತಾ ಕ್ರಮವಾಗಿ ಅಂತಹ 1,634 ಗ್ರಾಮಗಳನ್ನು ಗ್ರಾಮ ಪಂಚಾಯ್ತಿಗಳ ಸಹಕಾರ ಪಡೆದು ಪಟ್ಟಿ ಮಾಡಲಾಗಿದೆ. 
 
ಶಿವಮೊಗ್ಗ ತಾಲ್ಲೂಕಿನ 148, ಭದ್ರಾವತಿ 228, ಸಾಗರ 195, ತೀರ್ಥಹಳ್ಳಿ 161, ಹೊಸನಗರ 423, ಶಿಕಾರಿಪುರ 176, ಸೊರಬ ತಾಲ್ಲೂಕು ವ್ಯಾಪ್ತಿಯ 303 ಗ್ರಾಮಗಳು ಪಟ್ಟಿಯಲ್ಲಿವೆ. ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಲವು ಯೋಜನೆ ಕೈಗೊಳ್ಳಲು ₹ 40 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೊಳವೆಬಾವಿ ಕೊರೆಸುವುದು, ಕೈಪಂಪು ಅಳವಡಿಸು ವುದು, ವಿದ್ಯುತ್‌ ಸಂಪರ್ಕ ಕಲ್ಪಿಸು ವುದು, ಪೈಪ್‌ಲೈನ್‌ ನಿರ್ಮಿಸುವುದು ಸೇರಿದಂತೆ ಹಲವು ಕಾರ್ಯಗಳಿಗೆ ಮಂಜೂರಾತಿ ನೀಡಲಾಗಿದೆ.
 
ಪ್ರತಿ ತಾಲ್ಲೂಕಿಗೂ ₹ 60 ಲಕ್ಷ: ಬರ ಪರಿಸ್ಥಿತಿ ಕಾರಣ ಸರ್ಕಾರ ಕುಡಿಯುವ ನೀರಿನ ತುರ್ತು ಕಾಮಗಾರಿ ಕೈಗೊಳ್ಳಲು  ಪ್ರತಿ ತಾಲ್ಲೂಕಿಗೆ ₹ 60 ಲಕ್ಷ ಬಿಡುಗಡೆ ಮಾಡಿದೆ. ಈ ಹಣದಲ್ಲೂ ಹಲವು ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧವಾಗಿದೆ.
 
1,825 ಕಾಮಗಾರಿ ಪೂರ್ಣ: 2016–17ನೇ ಸಾಲಿನಲ್ಲಿ ಟಾಸ್ಕ್‌ ಫೋರ್ಸ್‌ ಅಡಿ ತೆಗೆದುಕೊಂಡ ₹ 3 ಕೋಟಿ ವೆಚ್ಚದ 228 ಕಾಮಗಾರಿಗಳು, ಸಿಆರ್‌ಎಫ್‌ ಅಡಿ ತೆಗೆದುಕೊಂಡ ₹ 1.75 ಕೋಟಿ ವೆಚ್ಚದ 260 ಕಾಮಗಾರಿ, ಬರ ಪರಿಹಾರ ಕಾಮಗಾರಿಯಲ್ಲಿ ಸೊರಬ ತಾಲ್ಲೂಕಿನಲ್ಲಿ ಕೈಗೊಂಡ ₹ 1 ಕೋಟಿ ವೆಚ್ಚದ 59 ಕಾಮಗಾರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಡಿ ತೆಗೆದು ಕೊಂಡ ₹ 18.46 ಕೋಟಿ ವೆಚ್ಚದ 1288 ಕಾಮಗಾರಿ ಪೂರ್ಣಗೊಂಡಿವೆ. 
 
ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೆ ಸಾರ್ವಜನಿಕರು ನೇರವಾಗಿ ಮಾಹಿತಿ ನೀಡಲು ಜಿಲ್ಲಾ ಹಾಗೂ ತಾಲ್ಲೂಕುಮಟ್ಟದಲ್ಲಿ ದಿನದ 24 ಗಂಟೆಯೂ ಸಹಕರಿಸಲು ಸಹಾಯವಾಣಿ ಸ್ಥಾಪಿಸಲಾಗಿದೆ. ಪ್ರತಿ ಗ್ರಾಮ ಪಂಚಾಯ್ತಿಗಳೂ 4ನೇ ರಾಜ್ಯ ಹಣಕಾಸು ನಿಧಿಯಲ್ಲಿ ಶೇ 20ರಷ್ಟು ಹಣ ಕುಡಿಯುವ ನೀರಿಗೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ.
 
**
ಟ್ಯಾಂಕರ್‌ ಮೂಲಕ ನೀರು ಪೂರೈಸುವಂತಹ ಸ್ಥಿತಿ ಎಲ್ಲೂ ಇಲ್ಲ. ಪಂಪ್‌ ಕೆಟ್ಟುಹೋದರೆ, ವಿದ್ಯುತ್‌ ಸಮಸ್ಯೆಯಾದರೆ  ತಕ್ಷಣವೇ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಸೂಚಿಸಲಾಗಿದೆ.
–ಡಾ.ರಾಕೇಶ್ ಕುಮಾರ್,  ಜಿಲ್ಲಾ ಪಂಚಾಯ್ತಿ ಸಿಇಒ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.