ADVERTISEMENT

ಭಾಷೆಗೆ ಅಪಾಯ ಬಂದರೆ ಸಂಸ್ಕೃತಿಗೂ ಧಕ್ಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:22 IST
Last Updated 15 ನವೆಂಬರ್ 2017, 10:22 IST

ಸಾಗರ: ‘ಯಾವುದೇ ಒಂದು ಪ್ರದೇಶದ ಭಾಷೆ ಹಾಗೂ ಅಲ್ಲಿನ ನೆಲದ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಭಾಷೆಗೆ ಅಪಾಯ ಬಂದಿದೆ ಎಂದರೆ ಅದು ಸಂಸ್ಕೃತಿಗೂ ಆತಂಕ ತರುವ ವಿಷಯ’ ಎಂದು ಸಾಹಿತಿ ನಾ.ಡಿಸೋಜ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿನ ಗಾಂಧಿ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

‘ಜಗತ್ತಿನ ಭಾಷೆ ಎಂದು ಕರೆಸಿಕೊಳ್ಳುತ್ತಿರುವ ಇಂಗ್ಲಿಷ್‌ನ ಪದಕೋಶಕ್ಕೆ ಕನ್ನಡ ಸೇರಿ ಹಲವು ಭಾರತೀಯ ಭಾಷೆಗಳ ಪದಗಳು ಸೇರುತ್ತಿವೆ. ಇಂಗ್ಲಿಷ್‌ನಲ್ಲಿ ಸಂಬಂಧ ಸೂಚಕ ಪದಗಳ ಕೊರತೆ ಇರುವುದರಿಂದ ಭಾರತೀಯ ಭಾಷೆಗಳ ಪದಗಳನ್ನು ಅವರು ಎರವಲು ಪಡೆಯುತ್ತಿದ್ದಾರೆ. ಇಷ್ಟಾದರೂ ನಾವು ಕನ್ನಡ ಭಾಷೆಯ ಮಹತ್ವವನ್ನು ಅರಿಯದೆ ಇರುವುದು ವಿಷಾದದ ಸಂಗತಿ’ ಎಂದರು.

ADVERTISEMENT

‘ಈ ಹಿಂದೆ ತಮ್ಮ ಜಾತಿಯ ಬಗ್ಗೆ ಬಹಿರಂಗವಾಗಿ ಹೆಚ್ಚಿನವರು ಹೇಳಿಕೊಳ್ಳುತ್ತಿರಲಿಲ್ಲ. ಇಂದು ನಾನು ಈ ದೇಶದ ಪ್ರಜೆ ಎಂದು ಹೇಳಿಕೊಳ್ಳುವುದಕ್ಕಿಂತ ಇಂತಹ ಧರ್ಮ, ಜಾತಿಗೆ ಸೇರಿದ ವ್ಯಕ್ತಿ ಎಂದು ಹೇಳಿಕೊಳ್ಳುವುದರಲ್ಲಿ ಹೆಚ್ಚುಗಾರಿಕೆ ತೋರುತ್ತಿದ್ದಾರೆ. ಈ ಮನೋಭಾವ ಅಪಾಯಕಾರಿಯಾಗಿದೆ’ ಎಂದು ಹೇಳಿದರು.

‘ಸಹನೆ, ಸಹಿಷ್ಣುತೆ, ಪ್ರೀತಿಯ ಸ್ಥಾನದಲ್ಲಿ ಅಸಹನೆ, ಅಸಹಿಷ್ಣುತೆ, ಮತ್ತಷ್ಟು ಬೇಕು ಬೇಕು ಎಂಬ ಹಪಾಹಪಿತನ ಎಲ್ಲೆಡೆ ವ್ಯಾಪಿಸುತ್ತಿದೆ. ಇಂತಹ ಪ್ರಮುಖ ವಿದ್ಯಮಾನಗಳ ಕುರಿತು ಸಮ್ಮೇಳನದ ಅಧ್ಯಕ್ಷ ವಿಲಿಯಂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರುವುದು ಸಕಾಲಿಕವಾಗಿದೆ. ಅರ್ಥಪೂರ್ಣ ಗೋಷ್ಠಿಗಳಿಂದ ಸಮ್ಮೇಳನ ಸಾರ್ಥಕತೆ ಪಡೆದಿದೆ’ ಎಂದು ಅವರು ತಿಳಿಸಿದರು.

ಸಮ್ಮೇಳನದ ಅಧ್ಯಕ್ಷ ವಿಲಿಯಂ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಎಲ್‌.ಟಿ.ತಿಮ್ಮಪ್ಪ ಹೆಗಡೆ, ಜಿಲ್ಲಾ ಪಂಚಾಯ್ತಿ ಸದಸ್ಯ ಕಾಗೋಡು ಅಣ್ಣಪ್ಪ, ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ, ನಾಟಕ ಅಕಾಡೆಮಿ ಸದಸ್ಯೆ ಎಂ.ವಿ.ಪ್ರತಿಭಾ, ನಗರಸಭೆ ಅಧ್ಯಕ್ಷೆ ಬೀಬಿ ಫಸಿಯಾ, ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ಸಂತೋಷ್‌ ಆರ್‌.ಶೇಟ್‌, ನಿತ್ಯಾನಂದ ಶೆಟ್ಟಿ, ಶಂಕರ ಅಳ್ವೆಕೋಡಿ, ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ವಿ.ಹಿತಕರ ಜೈನ್, ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನಕುಳಿ, ಎಂ.ಎನ್‌.ಸುಂದರ್‌ರಾಜ್‌ ಹಾಜರಿದ್ದರು. ದೀಪಕ್‌ ಸಾಗರ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.