ADVERTISEMENT

‘ಮಠಾಧೀಶರ ವಿರುದ್ಧ ಅವಹೇಳನ ಸಲ್ಲ’

ಸಾಣೆಹಳ್ಳಿ ಶ್ರೀಗಳ ಪರ ಧ್ವನಿ ಎತ್ತಿದ ವಿವಿಧ ಸಂಘಟನೆಗಳು

​ಪ್ರಜಾವಾಣಿ ವಾರ್ತೆ
Published 26 ಮೇ 2018, 11:26 IST
Last Updated 26 ಮೇ 2018, 11:26 IST

ಭದ್ರಾವತಿ: ‘ಜನರ ಭಾವನೆಗಳಿಗೆ ನೋವುಂಟು ಮಾಡುವ ರೀತಿ ಯಲ್ಲಿ ಮಠಾಧೀಶರು, ಮಠಗಳ ವಿರುದ್ಧ ಅವಹೇಳನಕಾರಿ ಮಾತುಗಳ ನ್ನಾಡುವುದು ಸಲ್ಲದು’ ಎಂದು ವೀರಶೈವ ಸಮಾಜದ ವಿವಿಧ ಸಂಘಟನೆ ಗಳ ಮುಖಂಡರು ಎಚ್ಚರಿಕೆ ನೀಡಿದರು.

ಸಾಣೆಹಳ್ಳಿ ಶ್ರೀಗಳ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವಹೇಳನಕಾರಿ ಮಾತುಗಳನ್ನಾಡಿದ ಹಿನ್ನೆಲೆಯಲ್ಲಿ ನಗರದ ವೀರಶೈವ ಸೇವಾ ಸಮಿತಿ, ಜಂಗಮ ಸಮಾಜ, ಸಾಧು ವೀರಶೈವ ಸಮಾಜ, ಶರಣ ಸಾಹಿತ್ಯ ಪರಿಷತ್ತು ಸೇರಿ ಹಲವು ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸಮಾಜದ ಮುಖಂಡರು ಖಂಡಿಸಿದರು.

ರಾಜ್ಯದ ಚುಕ್ಕಾಣಿ ಹಿಡಿದ ಗೌರವಾನ್ವಿತ ವ್ಯಕ್ತಿ ಮಠ, ಮಾನ್ಯಗಳು, ಗುರುಪೀಠದ ಸಾರಥ್ಯ ವಹಿಸಿರುವ ಸ್ವಾಮೀಜಿಯನ್ನು ಗೌರವದಿಂದ ಕಾಣಬೇಕು. ಅದನ್ನು ಬಿಟ್ಟು ಶ್ರೀಗಳ ವೈಯಕ್ತಿಕ ನಿಂದನೆ ಮಾಡುವ ಮೂಲಕ ಭಕ್ತರಿಗೆ ನೋವುಂಟು ಮಾಡಿರುವುದು ಸರಿಯಾದ ಕ್ರಮವಲ್ಲ’ ಎಂದರು.

ADVERTISEMENT

ನಾಡಿನ ಏಳ್ಗೆಗೆ, ಜನರ ಹಿತಕ್ಕಾಗಿ ಸಾಧು–ಸಂತರು ಹೇಳುವ ಕೆಲವು ಮಾತುಗಳನ್ನು ಕೇಳಿಕೊಂಡು ಅದಕ್ಕೆ ತಕ್ಕಂತೆ ಆಡಳಿತ ನೀಡುವುದು ಸರ್ಕಾರದ ಜವಾಬ್ದಾರಿ. ಅದನ್ನು ಬಿಟ್ಟು ಅವರಿಗೇ ಸಲಹೆ ನೀಡುವ ಚಟವನ್ನು ಬೆಳೆಸಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ ಎಂದರು.

ಬಿಜೆಪಿ ಮುಖಂಡ ಜಿ. ಧರ್ಮ ಪ್ರಸಾದ್, ವೀರಶೈವ ಸಮಾಜದ ಮುಖಂಡರಾದ ವೀರಭದ್ರಪ್ಪ, ಜಗದೀಶ, ಅಡವೀಶಯ್ಯ, ಹೆಬ್ಬಂಡಿ ಲೋಕೇಶಪ್ಪ, ರಾಮಚಂದ್ರ, ಆರ್. ಮಹೇಶಕುಮಾರ್, ಸಂಜೀವ, ಆರ್.ಎಸ್. ಶೋಭಾ ಹಾಗೂ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಮಾತನಾಡಿದರು.

ಇದಕ್ಕೂ ಮೊದಲು ರಂಗಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.