ADVERTISEMENT

ಮತ್ತೆ ಕಣಕ್ಕೆ ಇಳಿಯಲು ಸಜ್ಜಾದ ಕಾಗೋಡು ತಿಮ್ಮಪ್ಪ

ಬಿಜೆಪಿಯಲ್ಲಿ ಮುಂದುವರಿದ ಪೈಪೋಟಿ* ಬಂಡಾಳ ಏಳದಂತೆ ಮಾಡುವ ಉಸಾಬರಿಯಲ್ಲಿ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 11:09 IST
Last Updated 10 ಏಪ್ರಿಲ್ 2018, 11:09 IST

ಸಾಗರ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಇದರೊಂದಿಗೆ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಗೊಂದಲಗಳಿಗೆ ತೆರೆಬಿದ್ದಿದೆ.

ಸೋಮವಾರ ಇಲ್ಲಿನ ಹಲವು ಕಾಂಗ್ರೆಸ್ ಮುಖಂಡರ ಮನೆಗಳಿಗೆ ಭೇಟಿ ನೀಡುವ ಮೂಲಕ ಕಾಗೋಡು ತಿಮ್ಮಪ್ಪ ಒಂದು ಹಂತದ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಮಧ್ಯಾಹ್ನ ಇಲ್ಲಿನ ವಕೀಲರ ಸಂಘಕ್ಕೆ ಭೇಟಿ ನೀಡಿದ್ದ ಅವರು, ಅಲ್ಲಿ ನಡೆದ ಸಭೆಯಲ್ಲಿ ತಾವು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಖಚಿತಪಡಿಸಿದರು.

ಈ ಮೊದಲು ಕಾಗೋಡು ತಿಮ್ಮಪ್ಪ ಅವರು ಚುನಾವಣೆಗೆ ಸ್ಪರ್ಧಿಸಬೇಕೆ, ಬೇಡವೆ ಎನ್ನುವ ಕುರಿತು ಸ್ಪಷ್ಟ ನಿಲುವು ತಳೆದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅವರ ಪುತ್ರಿ ಡಾ.ರಾಜನಂದಿನಿ ಕಾಗೋಡು ಸ್ಥಳೀಯ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಅವರೇ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.

ADVERTISEMENT

ಕಳೆದ ವಾರ ತಾಲ್ಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್‌ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಾಗುವಂತೆ ಕಾಗೋಡು ತಿಮ್ಮಪ್ಪ ಅವರೇ ಸೂಚನೆ ನೀಡಿದ್ದು ಕಾಂಗ್ರೆಸ್ ವಲಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗೆ ಕಾರಣವಾಗಿತ್ತು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲವಾದ ಸ್ಪರ್ಧೆ ನೀಡಬೇಕಾದರೆ ಕಾಂಗ್ರೆಸ್‌ನಿಂದ ಕಾಗೋಡು ತಿಮ್ಮಪ್ಪ ಸ್ಪರ್ಧಿಸಿದರೆ ಮಾತ್ರ ಸಾಧ್ಯ ಎಂಬ ಎರಡನೇ ಹಂತದ ಕಾಂಗ್ರೆಸ್ ನಾಯಕರ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿದೆ ಎನ್ನಲಾಗಿದೆ.

ಮತ್ತೊಂದೆಡೆ ಬಿಜೆಪಿಯಲ್ಲಿ ಗೋಪಾಲಕೃಷ್ಣ ಬೇಳೂರು ಹಾಗೂ ಹರತಾಳು ಹಾಲಪ್ಪ ಅವರ ನಡುವೆ ಟಿಕೆಟ್‌ಗಾಗಿ ನಡೆಯುತ್ತಿರುವ ಪೈಪೋಟಿ
ಮುಂದುವರೆದಿದೆ.

ಈ ಕ್ಷೇತ್ರದಿಂದ ತಮಗೆ ಟಿಕೆಟ್ ಖಚಿತ ಎಂಬ ವಿಶ್ವಾಸದ ಹಿನ್ನೆಲೆಯಲ್ಲಿ ಹಾಲಪ್ಪ ಅವರು ಮೂರು ವಾರಗಳ ಹಿಂದೆಯೇ ಕೆಳದಿ ರಸ್ತೆಯ ಚನ್ನಮ್ಮ ಸರ್ಕಲ್ ಬಳಿ ಮನೆ ಮಾಡಿದ್ದರು.

ಈಗ ಗೋಪಾಲಕೃಷ್ಣ ಬೇಳೂರು ಕೂಡ ವಿಜಯನಗರ ಬಡಾವಣೆಯಲ್ಲಿ ಮನೆ ಮಾಡಿದ್ದು, ಸೋಮವಾರ ತಮ್ಮ ಪತ್ನಿಯೊಂದಿಗೆ ಪೂಜಾ ಕಾರ್ಯ ನಡೆಸಿ ಗೃಹಪ್ರವೇಶ ಮಾಡಿದ್ದಾರೆ.

ಹಾಲಪ್ಪ ಹಾಗೂ  ಬೇಳೂರು ಇಬ್ಬರಲ್ಲಿ ಯಾರು ಟಿಕೆಟ್‌ ವಂಚಿತ ರಾಗುತ್ತಾರೋ ಅವರು ಪಕ್ಷದ ವಿರುದ್ಧ ಬಂಡಾಯ ಏಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಈ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬುದನ್ನು ಇನ್ನೂ ಅಂತಿಮಗೊಳಿಸಿಲ್ಲ ಎನ್ನಲಾಗಿದೆ.

ಕ್ಷೇತ್ರಕ್ಕೆ ಬಂಡಾಯದ ಬಿಸಿ ತಟ್ಟದೆ ಇರುವಂತೆ ನೋಡಿಕೊಳ್ಳಲು ಬಿಜೆಪಿ ವರಿಷ್ಠರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಬುಧವಾರದ ಹೊತ್ತಿಗೆ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಅಧಿಕೃತವಾಗಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ

ಆಕಾಂಕ್ಷಿಗಳಿಂದ ಒತ್ತಾಯ

ಕಾಗೋಡು ತಿಮ್ಮಪ್ಪ ಅವರೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಕಾರಣಕ್ಕೆ ಉಳಿದ ಆಕಾಂಕ್ಷಿಗಳು ಮೌನವಾಗಿದ್ದರು. ಜಯಂತ್ ಅವರಿಗೆ ಸೂಚನೆ ನೀಡಿದ ನಂತರ ಹಲವು ಆಕಾಂಕ್ಷಿಗಳು ಕಾಗೋಡು ಅವರನ್ನು ಸಂಪರ್ಕಿಸಿ, ‘ನೀವೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು’ ಎಂದು ಒತ್ತಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

**

ನನ್ನ ಇಲ್ಲಿನ ಭೇಟಿ ಆಕಸ್ಮಿಕ. ಚುನಾವಣೆ ನನ್ನ ಬೆನ್ನುಹತ್ತಿದೆ. ಹಿಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ ಇನ್ನೂ ಸಾಕಷ್ಟು ಕೆಲಸ ಬಾಕಿ ಉಳಿದಿರುವುದರಿಂದ ಮತ್ತೆ ಸ್ಪರ್ಧಿಸಬೇಕಾಗಿದೆ – ಕಾಗೋಡು ತಿಮ್ಮಪ್ಪ, ಸಚಿವ

**

ಎಂ.ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.