ADVERTISEMENT

ಮುಖ್ಯಮಂತ್ರಿಗೆ ಮನವಿಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:38 IST
Last Updated 21 ಜನವರಿ 2017, 5:38 IST
ಮುಖ್ಯಮಂತ್ರಿಗೆ ಮನವಿಗಳ ಮಹಾಪೂರ
ಮುಖ್ಯಮಂತ್ರಿಗೆ ಮನವಿಗಳ ಮಹಾಪೂರ   

ಶಿವಮೊಗ್ಗ: ನಗರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದವು.

ಎಬಿವಿಪಿ:   ಎಬಿವಿಪಿ ಕಾರ್ಯಕರ್ತ ಅಭಿಷೇಕ್ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕದ ಸದಸ್ಯರು ಶುಕ್ರವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

‘ಎಬಿವಿಪಿ ಚಿಕ್ಕಮಗಳೂರು ಘಟಕದ ಪ್ರಮುಖ ಅಭಿಷೇಕ್ ಸಾವಿಗೆ ನ್ಯಾಯ ಕ್ಕಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಶೃಂಗೇರಿ ಹಾಗೂ ಚಿಕ್ಕಮಗಳೂರಿನ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಅಧಿಕಾರಿ ಅಣ್ಣಾಮಲೈ ದೌರ್ಜನ್ಯ ನಡೆಸಿದ್ದಾರೆ. ಪೊಲೀಸ್ ಇಲಾಖೆ ಜಾಣ ಕುರುಡು ಪ್ರದರ್ಶಿಸಿದೆ. ಕೂಡಲೇ ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. ಎಬಿವಿಪಿ ಮುಖಂಡರಾದ ಎನ್. ಅಭಿಷೇಕ್, ಚರಣ್, ಧೃವ, ಮಲ್ಲಿಕಾರ್ಜುನ್, ಅಭಿಷೇಕ್ ಎಚ್.ವಿ., ಸಂದೀಪ್ ಕಾರ್ತಿಕ್ ಇತರರು ಇದ್ದರು. 

ಮೀಸಲಾತಿ ಸಂರಕ್ಷಣಾ ಒಕ್ಕೂಟ: ನ್ಯಾ.ಸದಾಶಿವ ಆಯೋಗದ ವರದಿ ತಿರಸ್ಕರಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಮನವಿ ಸಲ್ಲಿಸಿದರು.ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ, ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಯಾಗಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ನಾನ್ಯಾನಾಯ್ಕ, ಹನುಮಂತಪ್ಪ, ಧೀರರಾಜು ಹೊನ್ನವಿಲೆ ಇತರರು ಮನವಿ ನೀಡಿದರು.

ನವ ಕರ್ನಾಟಕ ನಿರ್ಮಾಣ ವೇದಿಕೆ: ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಏಕರೂಪ ಪಠ್ಯಕ್ರಮ ಜಾರಿಗೆ ಒತ್ತಾಯಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯು ಮನವಿ ಸಲ್ಲಿಸಿತು. ರಾಜ್ಯದಲ್ಲಿ ಖಾಸಗಿ ಶಾಲೆಗಳು ಪೋಷಕರನ್ನು ಆಕರ್ಷಿಸಲು ತಮಗಿಷ್ಟ ಬಂದ ಮಾದರಿಯ ಪಠ್ಯಪುಸ್ತಕವನ್ನು ಮಕ್ಕಳಿಗೆ ವಿತರಿಸಿ ಲಾಭ ಮಾಡುವ ದಂಧೆಯಲ್ಲಿ ತೊಡಗಿವೆ. ಇದರಿಂದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಪಠ್ಯಕ್ರಮ ಅಳವಡಿಸಿ, ಏಕರೂಪ ಶಿಕ್ಷಣ ನೀತಿ ಮತ್ತು ಏಕರೂಪ ಪಠ್ಯಕ್ರಮ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವೇದಿಕೆಯ ಪ್ರಮುಖರಾದ ಗೊ. ರಮೇಶ್ ಗೌಡ, ಮಂಜುನಾಥ್, ರವಿ, ಇಮ್ತಿಯಾಜ್, ನಾಗರಾಜ್, ಲೋಕೇಶ್ ಇತರರು ಮನವಿ ನೀಡಿದರು.

ಹಮಾಲಿ ಕಾರ್ಮಿಕರ ಸಂಘ: ಉಗ್ರಾಣ ನಿಗಮದ ಗೋದಾಮುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾರ್ಮಿಕ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಕೆಎಫ್‌ಸಿಎಸ್‌ಸಿ ಗೋದಾಮು ಹಮಾಲಿ ಕಾರ್ಮಿಕರ ಸಂಘ ಮನವಿ ಸಲ್ಲಿಸಿತು.

ಇಎಸ್ಐ, ಪಿಎಫ್ ಸೌಲಭ್ಯ ಪಡೆಯುವಲ್ಲಿ ಅನ್ಯಾಯವಾಗಿದೆ. ತಮಗೆ ಕೆಲಸದ ಭದ್ರತೆ ಒದಗಿಸಬೇಕು. ಸರ್ಕಾರದಿಂದ ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಮುಖಂಡರಾದ ಬೋರೆಗೌಡ, ಸಿದ್ದಪ್ಪ, ವೀರೇಶ್, ನೇತ್ರಾವತಿ ಇತರರು ಮನವಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.