ADVERTISEMENT

ಯಡಿಯೂರಪ್ಪ ಕುತಂತ್ರಕ್ಕೆ ಮತದಾರರು ಬಲಿಯಾಗದಿರಿ

ಶಿಕಾರಿಪುರ: ಕಾಂಗ್ರೆಸ್‌ ಬಹಿರಂಗ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಆರ್. ಪ್ರಸನ್ನಕುಮಾರ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 12:10 IST
Last Updated 24 ಏಪ್ರಿಲ್ 2018, 12:10 IST

ಶಿಕಾರಿಪುರ: ‘ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕುತಂತ್ರಕ್ಕೆ ಕ್ಷೇತ್ರದ ಮತದಾರರು ಬಲಿಯಾಗಬಾರದು’ ಎಂದು ವಿಧಾನ ಪರಿಷತ್‌ ಸದಸ್ಯ ಆರ್. ಪ್ರಸನ್ನಕುಮಾರ್‌ ಕಿವಿಮಾತು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಗೋಣಿ ಮಾಲತೇಶ್‌ ನಾಮಪತ್ರ ಸಲ್ಲಿಕೆ ಹಿನ್ನೆಲೆ ಸೋಮವಾರ  ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದ ಮುಖ್ಯಮಂತ್ರಿಯಾದರೂ ತಾಲ್ಲೂಕಿನ ಜನತೆಗೆ ಪೂರಕವಾಗುವ ನೀರಾವರಿ ಯೋಜನೆ ಅನುಷ್ಠಾನ ಗೊಳಿಸದೇ ಸಂಸದ ಯಡಿಯೂರಪ್ಪ ತಾಲ್ಲೂಕಿನ ಜನತೆಗೆ ಮೋಸ ಮಾಡಿದ್ದಾರೆ ಅಂಬೇಡ್ಕರ್‌ ನೀಡಿದ ಸಂವಿಧಾನವನ್ನು ಬದಲಾವಣೆ ಮಾಡುವ ಕುತಂತ್ರವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ’ ಎಂದರು.

ADVERTISEMENT

ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ‘ಸುಳ್ಳು ಹೇಳುವ ಮೂಲಕ ಬಿಜೆಪಿ ಕೇಂದ್ರದಲ್ಲಿ ಆಡಳಿತ ಪಡೆದಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್‌ ಸಾಮಾನ್ಯ ಕಾರ್ಯಕರ್ತ ಗೋಣಿ ಮಾಲತೇಶ್‌ ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಬಲ ಪಡಿಸಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕ ಅಧ್ಯಕ್ಷ ತೀ.ನಾ. ಶ್ರೀನಿವಾಸ್‌, ‘ ನರೇಂದ್ರ ಮೋದಿ ಹೇಳಿದ ಅಚ್ಛೇ ದಿನ್‌ ಸಂಸದ ಬಿ.ಎಸ್‌. ಯಡಿಯೂರಪ್ಪ ಹಾಗೂ ಶಾಸಕ ರಾಘವೇಂದ್ರ ಮಾತ್ರ ಬಂದಿದೆ. ರಾಜ್ಯದಲ್ಲಿ ಅಧಿಕಾರ ದೊರೆತ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಿ ಯಡಿಯೂರಪ್ಪ ಜೈಲಿಗೆ ಹೋಗುವ ಮೂಲಕ ತಾಲ್ಲೂಕಿನ ಜನತೆಗೆ ಅವಮಾನ ಮಾಡಿದ್ದಾರೆ’ ಎಂದು ಟೀಕಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್‌ ಮಾತನಾಡಿ, ‘ಈ ಚುನಾವಣೆ ಶ್ರೀಮಂತ ಯಡಿಯೂರಪ್ಪ ಹಾಗೂ ಬಡವನಾದ ನನ್ನ ಮಧ್ಯೆ ನಡೆಯುವ ಸಂಪತ್ತಿಗೆ ಸವಾಲು ಆಗಿದೆ. ನಾನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಗರಡಿಯಲ್ಲಿ ಬೆಳೆದಿದ್ದು, ನನಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಮಾತನಾಡಿ, ‘ಜಿಲ್ಲೆಯಲ್ಲಿ ಮತ್ತೊಬ್ಬ ಬಂಗಾರಪ್ಪ ಹುಟ್ಟುತ್ತಾನೆ ಎಂದು ನನಗೆ ಯಡಿಯೂರಪ್ಪ ಟಿಕೆಟ್‌ ತಪ್ಪಿಸಿದರು’ ಎಂದು ಆರೋಪಿಸಿದರು.

ಪಶ್ಚಿಮಘಟ್ಟ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಎಸ್‌. ಶಾಂತವೀರಪ್ಪಗೌಡ್ರು, ‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್‌.ಪಿ. ನರಸಿಂಗನಾಯ್ಕ, ಮುಖಂಡರಾದ ದೇವೇಂದ್ರಪ್ಪ, ಮಲ್ಲೇನಹಳ್ಳಿ ಹನುಮಂತಪ್ಪ, ಕುಸ್ಕೂರು ಜಯಪ್ಪ, ರಾಮಲಿಂಗಪ್ಪ, ಖಾಸೀಂಸಾಬ್‌, ಪಕ್ಕೀರಪ್ಪ, ಪುಷ್ಪ ಮಂಜಪ್ಪ, ಫಯಾಜ್‌ ಅಹಮದ್‌, ಅನಿಲ್‌ ಯಂಕಟಪ್ಪ, ಪಾರಿವಾಳ ಶಿವರಾಮ್‌, ಹುಲ್ಮಾರ್‌ ಮಹೇಶ್‌, ಭಂಡಾರಿ ಮಾಲತೇಶ್‌, ಶಿವುನಾಯ್ಕ, ನಗರದ ರವಿಕಿರಣ್‌, ಉಳ್ಳಿ ದರ್ಶನ್‌, ಬಡಗಿ ಫಾಲಾಕ್ಷ, ಜೈಸು ಸುರೇಶ್‌, ಸುಧೀರ್‌, ಸುರೇಶ್‌ ಧಾರಾವಾಡ ಅವರೂ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.