ADVERTISEMENT

ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನ?

ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಯ ಸೌಹಾರ್ದ ಧಾರ್ಮಿಕ ಕೇಂದ್ರದಲ್ಲಿ ಭಕ್ತರಿಗೆ ಬೇಕು ಭದ್ರತೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:25 IST
Last Updated 18 ಜನವರಿ 2017, 5:25 IST
ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನ?
ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನ?   

ತೀರ್ಥಹಳ್ಳಿ: ತಾಲ್ಲೂಕಿನ ಹಣಗೆರೆ ಸೌಹಾರ್ದ ಧಾರ್ಮಿಕ ಕೇಂದ್ರ ಈಗ ಸುರಕ್ಷಿತವಲ್ಲ ಎಂಬುದಕ್ಕೆ ಪುಷ್ಟಿ ನೀಡುವ ಘಟನೆ ನಡೆದಿದೆ. ಸೋಮವಾರ ರಾತ್ರಿ ಸಾರ್ವಜನಿಕರ ಎದುರಿನಲ್ಲಿಯೇ ಯುವಕರಿಬ್ಬರು, ಇಬ್ಬರು ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಸುದ್ದಿ ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗ ನಗರದ ಇಬ್ಬರು ಯುವತಿಯರ ಬೆನ್ನಿಗೆ ಬಿದ್ದ ಈ ಸ್ಥಳೀಯ ಯುವಕರು, ಅವರನ್ನು ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಸಂಬಂಧ ಮಾಳೂರು ಪೊಲೀಸರು ಯುವಕರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತ ಯುವತಿಯರು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಯುವತಿಯರ ಮೊಬೈಲ್‌ ಸಂಖ್ಯೆ ಲಭ್ಯವಾಗಿದೆ. ಆದರೆ ಅವು ಸ್ವಿಚ್‌ ಆಫ್‌ ಆಗಿವೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ನಾಡಿನ ಸೌಹಾರ್ದ ಕೇಂದ್ರವಾದ ಹಣಗೆರೆಯ ಹಜರತ್‌ ಸೈಯದ್‌ ಸಾದತ್‌ ದರ್ಗಾ ಹಾಗೂ ಭೂತರಾಯ, ಚೌಡೇಶ್ವರಿ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ವಿಶೇಷವಾಗಿ ಹುಣ್ಣಿಮೆ, ಅಮಾವಾಸ್ಯೆ ದಿನಗಳಂದು ಸುಮಾರು 25 ಸಾವಿರ ಭಕ್ತರು ದರ್ಶನ ಪಡೆಯುತ್ತಾರೆ. ಇಷ್ಟು ಜನದಟ್ಟಣೆ ಇರುವಲ್ಲಿ ಭದ್ರತಾ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ಮಾತುಗಳು ಕೆಲವು ವರ್ಷಗಳಿಂದ ಕೇಳಿಬಂದಿವೆ.

ಹಣಗೆರೆಕಟ್ಟೆಯಲ್ಲಿ ಪೊಲೀಸ್‌ ಉಪ ಠಾಣೆ ಸ್ಥಾಪಿಸುವಂತೆ ಒತ್ತಡ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಸ್ಥಳೀಯರಲ್ಲಿದೆ.
ಮುಜರಾಯಿ ಇಲಾಖೆಗೆ ಸೇರಿರುವ ಈ ಧಾರ್ಮಿಕ ಕೇಂದ್ರ ಹೆಚ್ಚಿನ ಆದಾಯ ಗಳಿಸುತ್ತಿದೆ. ಮೂರು ತಿಂಗಳಿಗೆ ಒಮ್ಮೆ ಹುಂಡಿ ಎಣಿಕೆ ನಡೆದಾಗ ₹ 37 ಲಕ್ಷದಿಂದ  40 ಲಕ್ಷ ಸಂಗ್ರಹವಾಗುತ್ತಿದೆ. ವರ್ಷಕ್ಕೆ ಸುಮಾರು ₹ 1.5 ಕೋಟಿ ಸಂಗ್ರಹವಾಗುತ್ತಿದ್ದರೂ ಈ ಪ್ರದೇಶದ ಅಭಿವೃದ್ಧಿಗೆ ಹಣ ವಿನಿಯೋಗವಾಗುತ್ತಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಬರುವುದರಿಂದ ಶುಚಿತ್ವ ಕಾಪಾಡುವುದೂ ಕಷ್ಟವಾಗಿದೆ. ದೇವಸ್ಥಾನದ ಆವರಣದಲ್ಲಿ ಹರಕೆ ಒಪ್ಪಿಸಿದ ಭಕ್ತರು ಅಲ್ಲಿಯೇ ಅಡುಗೆ ಮಾಡಿ ದೇವರಿಗೆ ಎಡೆ ಸಮರ್ಪಿಸುತ್ತಾರೆ. ಇದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ ಎಂದು ದೂರುತ್ತಾರೆ.

ದೇವಸ್ಥಾನದಿಂದ ಸುಮಾರು 3 ಕಿ.ಮೀ ವ್ಯಾಪ್ತಿಯ ಕಾಡಿನಲ್ಲಿ ಭಕ್ತರು, ಪ್ರವಾಸಿಗರು ಉಳಿದು ಕೊಳ್ಳುವುದರಿಂದಾಗಿ ಅನೈತಿಕ ಚಟುವಟಿಕೆಗೆ ಆಸ್ಪದ ನೀಡಿದಂತಾಗಿದೆ. ಈ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದಿನದಿಂದ ದಿನಕ್ಕೆ ಹೆಚ್ಚು ಜನರು ಹಣಗೆರೆಗೆ ಬರುತ್ತಿರುವುದರಿಂದ ಮಹಿಳೆಯರ, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನಕ್ಕೆ ಸಂಬಂಧಿಸಿದಂತೆ ಯುವಕರಿ ಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಂತ್ರಸ್ತ ಯುವತಿಯರಿಗಾಗಿ
ಹುಡುಕಾಟ ನಡೆಸಿದ್ದೇವೆ’ ಎಂದು ಎಂದು ಮಾಳೂರು ಪಿಎಸ್‌ಐ ಗುರುರಾಜ್‌ ತಿಳಿಸಿದ್ದಾರೆ.
– ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.