ADVERTISEMENT

ರಂಭಾಪುರಿ ಶ್ರೀ ಪೀಠಾರೋಹಣ ರಜತ ಮಹೋತ್ಸವ

ಬಾಳೆಹೊನ್ನೂರು: ಜ.16ರಿಂದ 51 ದಿನ ವೈವಿಧ್ಯಮಯ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 5:13 IST
Last Updated 3 ಫೆಬ್ರುವರಿ 2017, 5:13 IST
ರಂಭಾಪುರಿ ಶ್ರೀ ಪೀಠಾರೋಹಣ ರಜತ ಮಹೋತ್ಸವ
ರಂಭಾಪುರಿ ಶ್ರೀ ಪೀಠಾರೋಹಣ ರಜತ ಮಹೋತ್ಸವ   

ಶಿವಮೊಗ್ಗ: ಪೀಠಾರೋಹಣ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಜ.16ರಿಂದ ಮಾರ್ಚ್ 14ರವರೆಗೆ ವೈವಿಧ್ಯಮಯ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಮಾಹಿತಿ ನೀಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ರಂಭಾಪುರಿ ಶ್ರೀಗಳ ಪೀಠಾರೋಹಣ ರಜತ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಭಕ್ತರು ಪೀಠದ ಮೇಲೆ ಇರಿಸಿರುವ ನಂಬಿಕೆ, ಗೌರವ ಅಪಾರ. ಜ. 7ರಂದು ಷಷ್ಟ್ಯಬ್ದಿಪೂರ್ತಿ ಸಮಾರಂಭ ಹಾಗೂ ಜ. 30ರಂದು ಪೀಠಾರೋಹಣ ರಜತ ಮಹೋತ್ಸವ ಆಚರಿಸಲು ಈ ಹಿಂದೆ ನಿರ್ಧರಿಸಿದ್ದೆವು. ಆದರೆ, ಭಕ್ತರ ಒತ್ತಾಯದ ಮೇರೆಗೆ ಜ.16ರಿಂದ ಮಾರ್ಚ್ 14ರವರೆಗೆ 51 ದಿನ, ವೈವಿಧ್ಯಮಯ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಭಕ್ತರ ಭಾವನೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದರು.

ಉಸ್ತುವಾರಿ ಸಮಿತಿ ನಿರ್ಧಾರದಂತೆ ಪೀಠದಲ್ಲಿ ಮಹಾರುದ್ರ ಯಜ್ಞ, ಅತಿರುದ್ರ ಯಜ್ಞ, ಜಗದ್ಗುರು ರೇಣುಕಾ ಚಾರ್ಯ ಹಾಗೂ ಕ್ಷೇತ್ರನಾಥ ವೀರಭದ್ರ ಸ್ವಾಮಿಗೆ ತ್ರಿಕೋಟಿ ಬಿಲ್ವಾರ್ಚನೆ, 3 ಕೋಟಿ ಶಿವನಾಮ ಜಪ, 7 ದಿನ ನಿರಂತರ ಶಿವನಾಮ ಸಪ್ತಾಹ, ಶಕ್ತಿ ಮಾತೆ ಚೌಡೇಶ್ವರಿಗೆ ಕುಂಕುಮಾರ್ಚನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಾರ್ಚ್ 8ರಿಂದ 14ರವರೆಗೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಸಂದರ್ಭದಲ್ಲಿ ಷಷ್ಟ್ಯಬ್ದಿಪೂರ್ತಿ ಸಮಾರಂಭ ಹಾಗೂ ಪೀಠಾರೋಹಣ ರಜತ ಮಹೋತ್ಸವ ಆಚರಿಸಲಾ ಗುವುದು. ಮಾರ್ಚ್‌ 10ರಂದು ಪ್ರಮುಖ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿ ಗಳಾಗಿದ್ದ ಅವಧಿಯಲ್ಲಿ ನೀಡಿದ ಅನುದಾನ ಹಾಗೂ ಭಕ್ತರ ಸಹಾಯ ದಿಂದ ನಿರ್ಮಿಸುತ್ತಿರುವ ಮೂಲ ಸೋಮೇಶ್ವರ ಶಿಲಾ ದೇಗುಲ ಮತ್ತು ರಂಭಾಪುರೀಶ ನಿವಾಸ ಕಟ್ಟಡ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಶೀಘ್ರ ಉದ್ಘಾಟನಾ ಸಮಾರಂಭ ಆಯೋಜಿಸಲಾಗುವುದು ಎಂದು ವಿವರ ನೀಡಿದರು.

ಈಗಾಗಲೇ ಪೀಠದಲ್ಲಿ 15 ಪೂರ್ವ ಆಚಾರ್ಯರ ಗದ್ದುಗೆಗಳಿವೆ. ಉಳಿದ 105 ಲಿಂಗೈಕ್ಯ ರಂಭಾಪುರಿ ಜಗದ್ಗುರುಗಳ ಗದ್ದುಗೆ ಹಾಗೂ ಶಿವಲಿಂಗ ಪ್ರತಿಷ್ಠಾಪಿಸಲಾಗುವುದು. ಭವಿಷ್ಯದ ದಿನಗಳಲ್ಲಿ ವೀರಶೈವ 36 ತತ್ವ ಆಧಾರಿಸಿ ಜಗದ್ಗುರು ರೇಣುಕಾ ಚಾರ್ಯರ 36 ಅಡಿಯ ಮೂರ್ತಿ ಸ್ಥಾಪಿಸಲಾಗುವುದು ಎಂದರು.

ಬಡವರಿಗೆ ಉತ್ತಮ ಚಿಕಿತ್ಸೆ ಒದಗಿಸಿಕೊಡಲು ಜಗದ್ಗುರು ರೇಣುಕಾಚಾರ್ಯರ ಹೆಸರಲ್ಲಿ ಆಯುರ್ವೇದ ಆಸ್ಪತ್ರೆ ಪ್ರಾರಂಭಿಸುವ ಯೋಜನೆ ಇದೆ. ನಾಡಿನ ಜನತೆಗೆ ಸುಖ ಸಮೃದ್ಧಿ ದೊರಕುಲು ಪೀಠದಲ್ಲಿ 51 ದಿನ ಹೋಮ–ಹವನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯಡಿಯೂರ ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಸ್ವಾಮೀಜಿ, ತಾವರೆಕೆರೆ ಅಭಿನವ ಸಿದ್ದಲಿಂಗ ಸ್ವಾಮೀಜಿ, ಶಾಂತಪುರ, ಹಾರನಹಳ್ಳಿ ಮತ್ತು ದುಗ್ಗಲಿ -ಕಡೆನಂದಿಹಳ್ಳಿ ಸ್ವಾಮೀಜಿ ಉಪಸ್ಥಿತರಿದ್ದರು.
ಬಸವೇಶ್ವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಜೆ. ರಾಜಶೇಖರ ಪ್ರಾಸ್ತಾವಿಕ ಮಾತನಾಡಿದರು. ವೀರಶೈವ ಸಮಾಜದ ಟಿ.ವಿ. ಈಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಮಾಜಿ ಸದಸ್ಯ ಆಯನೂರು ಮಂಜುನಾಥ್‌, ವೀರಶೈವ ಕಲ್ಯಾಣ ಮಂದಿರದ ಅಧ್ಯಕ್ಷ ರುದ್ರಸ್ವಾಮಿ ಉಪಸ್ಥಿತರಿದ್ದರು.
ಮಹಾಲಿಂಗಶಾಸ್ತ್ರಿ ಸ್ವಾಗತಿಸಿದರು. ಸಿ.ಎಂ. ಪಂಚಾಕ್ಷರಿ ವಂದಿಸಿದರು. ಶಾಂತಾ ಆನಂದ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.