ADVERTISEMENT

ಶಿಕಾರಿಪುರ ತಲುಪಿದ ಡೇವಿಡ್‌ ಅತೊವ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 8:48 IST
Last Updated 6 ಸೆಪ್ಟೆಂಬರ್ 2017, 8:48 IST

ಶಿಕಾರಿಪುರ: ‘ವಾಕ್‌ ಆಫ್‌ ಜಾಯ್‌’ ಶೀರ್ಷಿಕೆ ಅಡಿ ದೇಶದಲ್ಲಿ ಪಾದಯಾತ್ರೆ ನಡೆಸುತ್ತಿರುವ ನೊಮ್ಯಾಡಿಕ್‌ ಸಂಸ್ಥೆ ಸಂಸ್ಥಾಪಕ ಬ್ರಿಟನ್‌ನ ಡೇವಿಡ್‌ ಅತೊವ್‌ ಮಂಗಳವಾರ ಪಟ್ಟಣಕ್ಕೆ ಬಂದರು. ಅವರನ್ನು ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ನಾಗರಿಕರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡೇವಿಡ್‌ ಅತೊವ್‌, ‘2014ರಲ್ಲಿ ಮಲೇಷ್ಯಾದಲ್ಲಿ ಮಳೆ ಕಾಡುಗಳ ಬಗ್ಗೆ ಜಾಗೃತಿ ಮೂಡಿಸಲು ನಡಿಗೆ ಮಾಡಿದ್ದೆ. ಪ್ರಸ್ತುತ ಭಾರತದಲ್ಲಿ ಪಾದಯಾತ್ರೆ ಮಾಡುತ್ತಿದ್ದು, ಸಾವಯವ ಕೃಷಿಕರ ಜತೆ ಚರ್ಚೆ ನಡೆಸಲಿದ್ದೇನೆ. ಇದೇ  ಜುಲೈ ಆರಂಭದಲ್ಲಿ ಕನ್ಯಾಕುಮಾರಿಯಿಂದ ನಡಿಗೆ ಆರಂಭಿಸಿದ್ದು, 2018 ಮೇ ತಿಂಗಳಲ್ಲಿ ಪಂಚಾಬ್‌ನ ಅಮೃತಸರ ತಲುಪಿ ಪಾದಯಾತ್ರೆ ಮುಗಿಸಲಿದ್ದೇನೆ’ ಎಂದರು.

ಸಹಜ ಸಮೃದ್ಧ ಬಳಗ ಸದಸ್ಯ ಚುರ್ಚಿಗುಂಡಿ ನಂದೀಶ್‌ ಮಾತನಾಡಿ, ‘ಕೃಷಿಯಲ್ಲಿ ಖುಷಿ ಕಂಡುಕೊಳ್ಳಬೇಕು ಎಂಬ ಆಶಯದೊಂದಿಗೆ ಡೇವಿಡ್‌ ಅತೋವ್‌ ನಡಿಗೆ ಆರಂಭಿಸಿದ್ದಾರೆ. 10 ತಿಂಗಳ ಅವಧಿಯಲ್ಲಿ 13 ರಾಜ್ಯಗಳನ್ನು ಕ್ರಮಿಸಲಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಸಾವಯವ ಕೃಷಿಕರೊಂದಿಗೆ ಅವರು ಚರ್ಚೆ ನಡೆಸಲಿದ್ದಾರೆ. ಪಂಜಾಬ್‌ನ ದೇವ್‌ರತನ್‌ ಸಂಸ್ಥೆ ಸಂಸ್ಥಾಪಕ ಬಹದ್ದೂರ್‌ಸಿಂಗ್‌ ಅವರು
ಸಹಕಾರ ನೀಡಲಿದ್ದಾರೆ’ ಎಂದು ತಿಳಿಸಿದರು.

ಜೆಡಿಎಸ್‌ ಮುಖಂಡ ಎಚ್‌.ಟಿ. ಬಳಿಗಾರ್‌, ಪುರಸಭೆ ನಾಮನಿರ್ದೇಶಿತ ಸದಸ್ಯ ಫಯಾಜ್‌ ಆಹಮದ್‌, ಕಾಂಗ್ರೆಸ್‌ ಮುಖಂಡ ಬನ್ನೂರು ಮಂಜಪ್ಪ, ಚಲನಚಿತ್ರ ನಿರ್ದೇಶಕ ವೈಭವ್‌ ಬಸವರಾಜ್‌, ಗುಡಿ ಸಾಂಸ್ಕೃತಿಕ ಕೇಂದ್ರದ ತರಬೇತುದಾರ ಮಹಾಂತೇಶ್‌, ವಿವಿಧ ಸಂಘಟನೆ ಪದಾಧಿಕಾರಿಗಳಾದ ಸುಬ್ರಮಣ್ಯ ರೇವಣಕರ್‌, ಸಲೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.