ADVERTISEMENT

ಶಿಗ್ಗಾ: ಸಂಭ್ರಮದ ಸಿಡಿ ಜಾತ್ರಾ ಮಹೋತ್ಸವ

40 ಅಡಿ ಉದ್ದದ ಸಿಡಿ ಕಂಬ l ಇಪ್ಪತ್ತೇಳು ವರ್ಷಗಳ ಬಳಿಕ ಜಾತ್ರೆ l ಹವಳಾಂಬಿಕಾ ದೇವಿಗೆ ಭಕ್ತರಿಂದ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 3:47 IST
Last Updated 19 ಏಪ್ರಿಲ್ 2017, 3:47 IST
ಶಿಗ್ಗಾ: ಸಂಭ್ರಮದ ಸಿಡಿ ಜಾತ್ರಾ ಮಹೋತ್ಸವ
ಶಿಗ್ಗಾ: ಸಂಭ್ರಮದ ಸಿಡಿ ಜಾತ್ರಾ ಮಹೋತ್ಸವ   
ಸೊರಬ:  ತಾಲ್ಲೂಕಿನ ಶಿಗ್ಗಾ ಗ್ರಾಮದಲ್ಲಿ ಹವಳಾಂಬಿಕಾ ದೇವಿಯ ಸಿಡಿ ಉತ್ಸವ  ಮಂಗಳವಾರ ಸಂಭ್ರಮದಿಂದ ನಡೆಯಿತು.
 
ಮಿಥುನ ಲಗ್ನದಲ್ಲಿ ಹವಳಾಂಬಿಕಾ ದೇವಿಗೆ ಧಾರ್ಮಿಕ ವಿಧಿ ವಿಧಾನಗಳು ನಡೆದವು. ನಂತರ ಸಿಡಿ ಹರಕೆ ಹೊತ್ತ ಭಕ್ತರು ವಿವಿಧ ಜನಪದ ಕಲಾ ತಂಡಗಳೊಂದಿಗೆ ದೇವಸ್ಥಾನದಿಂದ ಮೆರವಣಿಗೆ ಹೊರಟು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿದ್ದ ಸಿಡಿ ಕಂಬಕ್ಕೆ ಪೂಜೆ ಸಲ್ಲಿಸಿ ಸಿಡಿಯಾಡಿದರು.  
 
ಸಿಡಿಯಾಡುವ ಪದ್ಧತಿ:  27 ವರ್ಷಗಳ ನಂತರ ನಡೆದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಸೇರಿದ್ದರು. ದೇವಸ್ಥಾನದ ಮುಂಭಾಗದಲ್ಲಿ ರಥದ ಎರಡು ಗಾಲಿಗಳನ್ನು ಅರ್ಧ ಮುಳುಗುವಷ್ಟು ಹೂತು, ಅದರ ಅಚ್ಚಿನ ಮೇಲೆ ರಥದ ಇನ್ನೊಂದು ಗಾಲಿಯನ್ನು ಇಟ್ಟು ನೆಲದಲ್ಲಿ ದೊಡ್ಡದಾದ ಗುಂಡಿ ತೆಗೆದು 14 ಅಡಿಯ ಗರುಡ ಗಂಬವನ್ನು ನಿಲ್ಲಿಸಲಾಗಿತ್ತು.
 
ಕಂಬದ ತುದಿಯಲ್ಲಿ 40 ಅಡಿ ಉದ್ದ ಹಲಸಿನ ಕಂಬವನ್ನು ಅಲುಗಾಡದಂತೆ ಲೋಹದ ವೈರ್‌ನಿಂದ ಸಕಟ್ಟಲಾಗಿತ್ತು. ಉದ್ದವಾದ ಕಂಬದ ತುದಿಯಲ್ಲಿ ನಿಂತು ಸಿಡಿ ಆಡುವುದು ವಾಡಿಕೆ. 
 
ದೇವಿಗೆ ಹರಕೆ ಹೊತ್ತವರು ಮಾತ್ರ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಸಿಡಿಯಾಡುವ ಭಕ್ತರಿಗೆ  ಯಾವುದೇ ಅನಾಹುತ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. 
 
ಡ್ರೋನ್ ಕ್ಯಾಮೆರಾ ಬಳಕೆ: ನಾನಾ ತಾಲ್ಲೂಕುಗಳಿಂದ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ಸಿಡಿಯಾಡುವುದನ್ನು ಚಿತ್ರೀಕರಿಸಲು ಡ್ರೋನ್ ಕ್ಯಾಮೆರಾ ಬಳಸಲಾಗಿತ್ತು. ಜನರಿಗೆ ಜಾತ್ರಾ ಮಹೋತ್ಸವನ್ನು ಸುಲಭವಾಗಿ ನೋಡಲು ದೊಡ್ಡ ಎಲ್‌ಸಿಡಿ ಪರದೆ ಅಳವಡಿಸಲಾಗಿತ್ತು. ಹರಕೆ ಹೊತ್ತಿದ್ದ 83 ಮಂದಿ ಭಕ್ತರು ಸಿಡಿ ಆಡಿ ಸಂಭ್ರಮಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.