ADVERTISEMENT

ಶಿಥಿಲ ಸರ್ಕಾರಿ ಶಾಲಾ ಕಟ್ಟಡ ದುರಸ್ತಿಗೆ ಸೂಚನೆ

ಸಾಗರ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಲ್ಲಿಕಾರ್ಜುನ ಹಕ್ರೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 5:27 IST
Last Updated 9 ಮಾರ್ಚ್ 2017, 5:27 IST
ಸಾಗರ: ತಾಲ್ಲೂಕಿನಲ್ಲಿ 15 ಸರ್ಕಾರಿ ಶಾಲೆಗಳ ಕಟ್ಟಡ ತೀವ್ರವಾಗಿ ಶಿಥಿಲಗೊಂಡಿದ್ದು ಕೂಡಲೇ ಅವುಗಳನ್ನು ದುರಸ್ತಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
 
ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲ ಆರಂಭವಾಗುವ ಮುನ್ನ ಶಾಲಾ ಕಟ್ಟಡಗಳ ದುರಸ್ತಿ ಮಾಡಿ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.
 
ಸರ್ಕಾರಿ ಕಟ್ಟಡಗಳ ಕಾಮಗಾರಿಯಲ್ಲಿ ಮರಳಿನ ಕೊರತೆ ಕಾರಣಕ್ಕೆ ಮರಳಿನ ಬದಲಾಗಿ ಬಳಸುತ್ತಿರುವ ಎಂ.ಸ್ಯಾಂಡ್‌ನಲ್ಲಿ ಕೆಲವು ಮಿಶ್ರಣ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಇದರಿಂದ ಕಾಮಗಾರಿಯ ಗುಣಮಟ್ಟ ಕಳಪೆಯಾಗುವ ಸಾಧ್ಯತೆ ಇದೆ. ಹೀಗಾದರೆ ಸರ್ಕಾರಿ ಕಟ್ಟಡಗಳು ನಿರ್ಮಾಣವಾಗಿ ಕೆಲವೆ ವರ್ಷಗಳಲ್ಲಿ ದುರಸ್ತಿಗೆ ಬರಬಹುದು. ಈ ಬಗ್ಗೆ ಎಚ್ಚರ ವಹಿಸಿ ಎಂದು ಅವರು ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ಗೆ ಸೂಚಿಸಿದರು.
 
‘ತಾಳಗುಪ್ಪ ಹೋಬಳಿಯ ಹುಣಸೂರು– ಗುಡ್ಡೆಕೇರಿ ಗ್ರಾಮದ ರಸ್ತೆಗೆ ಜಲ್ಲಿ ಬಿಚಾವಣೆಯಾಗಿದೆ ಎಂದು ನಿಮ್ಮ ವರದಿಯಲ್ಲಿ ತಿಳಿಸಿದ್ದೀರಿ. ಆದರೆ ಅಲ್ಲಿ ಒಂದೇ ಒಂದು ಜಲ್ಲಿ ಬಿಚಾವಣೆ ಆಗಿರುವಂತೆ ಕಾಣುತ್ತಿಲ್ಲ. ಜಲ್ಲಿ ಬಿಚಾವಣೆ ಎಲ್ಲಿ ಆಗಿದೆ ಎಂಬುದನ್ನು ತೋರಿಸುತ್ತೀರಾ’ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಕೆ.ಎಚ್‌.ಪರಶುರಾಮ್‌ ಅವರು ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ವೆಂಕಟೇಶ್‌ ಅವರನ್ನು ಪ್ರಶ್ನಿಸಿದರು.
 
ಮರ್ತೂರು ಗ್ರಾಮದಲ್ಲಿ ಕೂಡ ಜಲ್ಲಿ ಬಿಚಾವಣೆ ಮಾಡದೆ ಗುತ್ತಿಗೆದಾರರೊಬ್ಬರು ಹಣ ಪಡೆದಿದ್ದಾರೆ ಎಂಬ ವಿಷಯವನ್ನು ಪರಶುರಾಮ್‌ ಸಭೆಯ ಗಮನಕ್ಕೆ ತಂದರು. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸುವಂತೆ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿಗೆ ಸೂಚಿಸಿದರು.
 
ಅಂಗನವಾಡಿಗಳಿಗೆ ಪ್ರತಿ ತಿಂಗಳು ಪೂರೈಕೆಯಾಗುತ್ತಿರುವ ಆಹಾರ ಸಾಮಗ್ರಿ ಪೈಕಿ ಶೇ 30ರಷ್ಟು ಉಳಿಯುತ್ತಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೇಖರಪ್ಪ ಅವರು ಸಭೆಯಲ್ಲಿ ನೀಡಿದ ಹೇಳಿಕೆ ಅವರನ್ನೇ ಪೇಚಿಗೆ ಸಿಲುಕಿಸಿತು.
 
‘ಪ್ರತಿ ತಿಂಗಳು ಶೇ 30ರಷ್ಟು ಆಹಾರ ಸಾಮಗ್ರಿ ಉಳಿಯುತ್ತಿದೆ ಎಂದರೆ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದ ಬೇಡಿಕೆಯನ್ನು ನೀವು ಸಲ್ಲಿಸುತ್ತಿದ್ದೀರಿ ಎಂದಲ್ಲವೆ’ ಎಂದು ಮಲ್ಲಿಕಾರ್ಜುನ ಹಕ್ರೆ ಪ್ರಶ್ನಿಸಿದರು.
 
‘ಹೀಗೆಲ್ಲಾ ಬೀಸು ಹೇಳಿಕೆ ನೀಡಬೇಡಿ. ಪ್ರತಿ ತಿಂಗಳು ಶೇ 30ರಷ್ಟು ಆಹಾರ ಸಾಮಗ್ರಿ ಉಳಿಯುತ್ತದೆ ಎಂದರೆ ಅಷ್ಟು ಪ್ರಮಾಣದ ಆಹಾರ ಸಾಮಗ್ರಿಯ ದುರುಪಯೋಗ ಆಗಿದೆ ಎಂಬ ಅರ್ಥ ಬರುತ್ತದೆ’ ಎಂದು ಕಾರ್ಯನಿರ್ವಹಣಾ ಅಧಿಕಾರಿ ಸಿದ್ದಲಿಂಗಯ್ಯ ಅವರು ಎಚ್ಚರಿಸಿದರು. 
 
ಶೇಖರಪ್ಪ ಮಾತನಾಡಿ, ‘ಈ ಬಗ್ಗೆ ಪರಿಶೀಲನೆ ನಡೆಸಿ ನಂತರ ನಿಖರವಾಗಿ ಮಾಹಿತಿ ನೀಡುತ್ತೇನೆ’ ಎನ್ನುವ ಮೂಲಕ ತಾವು ಮೊದಲು ಹೇಳಿದ ಮಾತಿಗೆ ಸ್ಪಷ್ಟೀಕರಣ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.