ADVERTISEMENT

ಶೇ 20ರಷ್ಟು ನಗದು ವಹಿವಾಟಿಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:43 IST
Last Updated 8 ನವೆಂಬರ್ 2017, 9:43 IST
ಶಿವಮೊಗ್ಗ ಎಸ್‌ಬಿಐ ಮುಂದೆ ನೋಟು ರದ್ದು ಮಾಡಿದ ಸಮಯದಲ್ಲಿ ಬದಲಾವಣೆಗಾಗಿ ಸರದಿ ನಿಂತಿದ್ದ ಜನ (ಸಂಗ್ರಹ ಚಿತ್ರ).
ಶಿವಮೊಗ್ಗ ಎಸ್‌ಬಿಐ ಮುಂದೆ ನೋಟು ರದ್ದು ಮಾಡಿದ ಸಮಯದಲ್ಲಿ ಬದಲಾವಣೆಗಾಗಿ ಸರದಿ ನಿಂತಿದ್ದ ಜನ (ಸಂಗ್ರಹ ಚಿತ್ರ).   

ಶಿವಮೊಗ್ಗ: ಕೇಂದ್ರ ಸರ್ಕಾರ ₨ 500 ಹಾಗೂ ₨ 1, 000 ಮುಖ ಬೆಲೆಯ ನೋಟು ರದ್ದು ಮಾಡಿದ ನಂತರ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ನಗದು ವಹಿವಾಟು ಶೇ 15ರಿಂದ 20ರಷ್ಟು ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಶೇ 52ರಿಂದ 60ರಷ್ಟು ಜನರು (ಪೂರ್ಣ ಪ್ರಮಾಣದಲ್ಲಿ ಅಲ್ಲ) ನಗದು ರಹಿತ ವಹಿವಾಟಿಗೆ ತೆರೆದುಕೊಂಡಿದ್ದಾರೆ.

ಇದರಲ್ಲಿ 18ರಿಂದ 45ರ ವಯೋಮಾನದ ಯುವ ಪಡೆ ಹೆಚ್ಚಿನ ಸಂಖ್ಯೆಯಲ್ಲಿ ನಗದು ರಹಿತ ವ್ಯವಹಾರಕ್ಕೆ ಒಲವು ತೋರಿದೆ. ಆನ್‌ಲೈನ್ ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಬ್ಯಾಂಕಿಗೆ ಹರಿದು ಬಂದ ನಗದಿಗೆ ಸೂಕ್ತ ತೆರಿಗೆ ಪಾವತಿಯಾಗಿದೆ.

‘ನೋಟು ರದ್ಧತಿಗೂ ಮೊದಲು ಕೆನರಾ ಬ್ಯಾಂಕ್ ಒಂದು ಎಟಿಎಂಗೆ ನಿತ್ಯ ₨ 12 ಲಕ್ಷದಿಂದ ₨ 15 ಲಕ್ಷದವರೆಗೆ ತುಂಬಲಾಗುತ್ತಿತ್ತು. ಪ್ರಸ್ತುತ ಈ ಮೊತ್ತ ₨ 4ಲಕ್ಷದಿಂದ ₨ 5 ಲಕ್ಷಕ್ಕೆ ಕುಸಿದಿದೆ. ಎಲ್ಲ ಎಟಿಎಂ ಸೇರಿ ತಿಂಗಳಿಗೆ ಮೊದಲು ₨ 90 ಕೋಟಿ ಬೇಕಿತ್ತು. ಈಗ ₨ 20 ಕೋಟಿಯಷ್ಟು ಕಡಿಮೆಯಾಗಿದೆ’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಾಲೋಮನ್ ಮೆನೆಜಸ್‌ ವಿವರ ನೀಡಿದರು.

ADVERTISEMENT

ನಿರ್ಧಾರದ ಸಮಯದ ಪರಿಸ್ಥಿತಿ: 2016ನೇ ನವೆಂಬರ್ 8ರಂದು ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನ ಮಂತ್ರಿ ನೋಟು ರದ್ದು ಮಾಡುವ ನಿರ್ಧಾರ ಪ್ರಕಟಿಸಿದ್ದರು. ದೇಶದಾದ್ಯಂತ ಅಂದು ಪರ–ವಿರುದ್ಧವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜನ ಸಾಮಾನ್ಯರು ಹೊಟ್ಟೆ ಪಾಡಿನ ನಿತ್ಯದ ಕೆಲಸ ಬಿಟ್ಟು ತಮ್ಮ ಬಳಿ ಇದ್ದ ಚಿಕ್ಕ ಪ್ರಮಾಣದ ಹಣ ಬದಲಿಸಿಕೊಳ್ಳಲು ಬ್ಯಾಂಕ್‌ಗಳ ಮುಂದೆ ಸರದಿ ನಿಂತಿದ್ದರು. ಅಂದು ದುಡಿದು ಅಂದೇ ಜೀವನ ಸಾಗಿಸುವವರು ಸರ್ಕಾರದ ನಿರ್ಧಾರಕ್ಕೆ ಹಿಡಿಶಾಪ ಹಾಕಿದ್ದರು.

ಶ್ರೀಮಂತರು, ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಹೊಂದಿದ್ದವರು ಆರಂಭದಲ್ಲಿ ಬೆಸ್ತುಬಿದ್ದರೂ, ನಿಧಾನವಾಗಿ ಚೇತರಿಸಿಕೊಂಡು ಕೆಲವು ಬ್ಯಾಂಕ್‌ ಅಧಿಕಾರಿಗಳನ್ನೇ ಬಳಸಿಕೊಂಡು ಅಪಾರ ಪ್ರಮಾಣದ ನೋಟ್ ಬದಲಿಸಿಕೊಂಡು ಬಿಟ್ಟರು. ಕೆಲವು ಪಟ್ಟಭದ್ರರ ಮೇಲೆ ನಡೆದ ಆದಾಯ ತೆರಿಗೆ ದಾಳಿ ಸಮಯದಲ್ಲಿ ಕಂತೆ ಕಂತೆ ಹೊಸ ನೋಟುಗಳು ಪತ್ತೆಯಾಗಿದ್ದು ಇದಕ್ಕೆ ಸಾಕ್ಷಿಯಾಗಿತ್ತು.

ದೇಶದ ಎಲ್ಲೆಡೆಯಂತೆ ಶಿವಮೊಗ್ಗ ಜಿಲ್ಲೆಯಲ್ಲೂ ನೋಟು ರದ್ದು ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶೇ 70ರಷ್ಟು ಜನರು ಸ್ವಾಗತಿಸಿದರೆ, ಶೇ 30ರಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ನೋಟು ರದ್ದು ಸ್ವಾಗತಿಸಿ, ವಿಜಯೋತ್ಸವ ಆಚರಿಸಿತ್ತು. ಕಾಂಗ್ರೆಸ್ ನಿರಂತರ ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತಪಡಿಸಿತ್ತು.

ಎರಡು ತಿಂಗಳು ಬ್ಯಾಂಕ್‌ ಮುಂದೆ ಸರದಿ ಸಾಲು ಕಂಡುಬಂದಿತ್ತು. ಎಟಿಎಂಗಳಲ್ಲಿ ಹೊಸ ನೋಟುಗಳು ದೊರೆಯದೇ ಜನರು ಹಲವು ದಿನಗಳು ಕಂಗಾಲಾಗಿದ್ದರು. ಎಲ್ಲ ಹೋದರೂ ಎಟಿಎಂಗಳ ಮುಂದೆ ‘ ನೋ ಕ್ಯಾಶ್’ ಫಲಕ ತೂಗಾಡುತ್ತಿದ್ದವು. ನಂತರ ಹೊಸದಾಗಿ ಬಂದ ₨ 2 ಸಾವಿರ ನೋಟುಗಳಿಗೆ ಚಿಲ್ಲರೆಗಾಗಿ ಸ್ವಲ್ಪ ದಿನ ಪರದಾಟ ಮುಂದುವರಿದಿತ್ತು.

ಹಣಕ್ಕಾಗಿ ಪರದಾಡಿದ್ದು ಬಿಟ್ಟರೆ ಬೇರೆ ಭಾಗಗಳಲ್ಲಿ ನಡೆದಂತೆ ಜಿಲ್ಲೆಯಲ್ಲಿ ಹಣ ಬದಲಿಸಿಕೊಳ್ಳಲು ಸರದಿ ನಿಂತ ಯಾರೊಬ್ಬರಿಗೂ ಯಾವುದೇ ಸಮಸ್ಯೆಯಾಗಲಿಲ್ಲ ಎನ್ನುವುದು ಸಮಾಧಾನದ ವಿಷಯ. ಇಷ್ಟೆಲ್ಲ ಅವಾಂತರ ಸೃಷ್ಟಿಸಿದ ನೋಟು ರದ್ದತಿಗೆ ಇಂದಿಗೆ (ನ.8) ವರ್ಷ. ನಿಧಾನವಾಗಿ ಆರ್ಥಿಕ ವಹಿವಾಟು, ಹಣದ ಚಲಾವಣೆ ಹಳೆಯ ಅಳಿಗೆ ಮರಳುತ್ತಿದೆ. ಜನರು ಅಂದಿನ ಎಲ್ಲ ಏರಿಳಿತ ಮರೆತು ಮತ್ತೆ ಹೊಸ ನೋಟುಗಳಿಗೆ ಹೊಂದಿಕೊಂಡಿದ್ದಾರೆ.

ಸಾರ್ವಜನಿಕರ ಅಭಿಪ್ರಾಯ: ನೋಟು ರದ್ದು ಸ್ವಾಗತಿಸಿದರೆ ಬಿಜೆಪಿ. ವಿರೋಧಿಸಿದರೆ ಕಾಂಗ್ರೆಸ್ ಎಂಬ ಹಣೆಪಟ್ಟಿ ಕಟ್ಟುತ್ತಾರೆ. ರಾಜಕೀಯ ಅಭಿಲಾಷೆ ಬಿಟ್ಟು ದೇಶ, ಸರ್ಕಾರ, ಆರ್ಥಿಕ ವ್ಯವಸ್ಥೆಗೆ ಸೀಮಿತಗೊಳಿಸಿ ನೋಡಬೇಕು. ನೋಟು ರದ್ದು ಮಾಡಿದ ನಂತರ ಕಪ್ಪು ಹಣದ ವಹಿವಾಟು ಸ್ವಲ್ಪವಾದರೂ ಕಡಿಮೆಯಾಗಿದೆ. 125 ಕೋಟಿಗೂ ಹೆಚ್ಚು ಜನರಿರುವ ಭಾರತದಲ್ಲಿ ನೋಟು ರದ್ದು ಮಾಡಿ, ಹೊಸ ನೋಟು ಚಲಾವಣೆಗೊಳಿಸುವುದು ಸಾಹಸದ ಕೆಲಸ. ದೃಢ ನಿರ್ಧಾರ, ದೂರದೃಷ್ಟಿ ಇದ್ದರೆ ಮಾತ್ರ ಅದು ಸಾಧ್ಯ.

ನೋಟು ರದ್ಧತಿಯ ನಂತರ ಬಹುತೇಕ ಜನರು ನಗದು ರಹಿತ ವ್ಯವಹಾರಕ್ಕೆ ಒಲವು ತೋರಿದ್ದಾರೆ. ಶ್ರೀಮಂತರು ಕಪ್ಪು ಹಣ ಸಂಗ್ರಹಿಸಲು ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮ ವಿರೋಧಿಸುವ ಬದಲು ಇನ್ನಷ್ಟು ಸಮಯಾವಕಾಶ ನೀಡಿದರೆ ಎಲ್ಲವೂ ಸರಿಹೋಗುತ್ತದೆ ಎಂದು ವಿಶ್ಲೇಷಿಸಿದರು ನಿವೃತ್ತ ಬ್ಯಾಂಕ್‌ ಅಧಿಕಾರಿ ಕೆ.ಜಿ. ಕೃಷ್ಣಾನಂದ.

ನೋಟು ರದ್ದು ಮಾಡಿದ ನಂತರ ವ್ಯಾಪಾರ ಕ್ಷೀಣಿಸಿದೆ. ವರ್ಷವಾದರೂ ಮೊದಲಿನ ವ್ಯಾಪಾರ ಇಲ್ಲ. ಜನರು ಎಲ್ಲ ಹಣವನ್ನೂ ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಳ್ಳಲು ಬಯಸುವುದಿಲ್ಲ. ಇಲ್ಲಿನ ಜನರು ನಗದು ರಹಿತ ವ್ಯವಹಾರಕ್ಕೆ ಹೊಂದಿಕೊಳ್ಳಲು ಇನ್ನಷ್ಟು ಸಮಯ ಬೇಕಾಗುತ್ತದೆ ಎನ್ನುತ್ತಾರೆ ಫಿನ್ಸ್ ಆ್ಯಂಡ್ ಫೆದರ್ಸ್‌ ಮಾಲೀಕ ಎ.ಎಂ. ವಿನಯ್.

ನೋಟು ರದ್ದು ನಂತರ ಒಂದೆರಡು ದಿನ ನಮಗೆ ತೊಂದರೆಯಾಗಿತ್ತು. ನಂತರ ಯಾವುದೇ ಪರಿಣಾಮ ಬೀರಿಲ್ಲ. ಮೊದಲಿನಂತೆಯೇ ಪ್ರಯಾಣಕರು ಬರುತ್ತಾರೆ. ದುಡಿಮೆ ಆಗುತ್ತಿದೆ ಎನ್ನುತ್ತಾರೆ ಗಾಂಧಿನಗರ ಆಟೊನಿಲ್ದಾಣದ ಚಾಲಕ ಲೋಕೇಶ್. ನೋಟು ರದ್ದು ಹಣವಂತರ, ಕಪ್ಪು ಹಣ ಕೂಡಿಟ್ಟವರ ಸೊಕ್ಕು ಅಡಗಿಸಿದೆ. ಸಾಮಾನ್ಯ ಜನರಿಗೆ ಯಾವುದೇ ಬಿಸಿ ತಟ್ಟಿಲ್ಲ. ಮೊದಲಿನಿಂತೆಯೇ ನಾವು ಈಗಲೂ ದುಡಿದು ಊಟ ಮಾಡುತ್ತಿದ್ದೇವೆ ಎಂದು ಅಭಿಪ್ರಾಯ ಹಂಚಿಕೊಂಡರು ಶಿವು ಡ್ರೈಕ್ಲಿನರ್ಸ್ ಮಾಲೀಕ ಎಸ್‌. ಮಧು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.