ADVERTISEMENT

ಸಕಲರಿಗೆ ಒಳಿತು ಮಾಡುವುದೇ ನಿಜ ಧರ್ಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 10:14 IST
Last Updated 16 ಸೆಪ್ಟೆಂಬರ್ 2017, 10:14 IST
ದೇವಾಲಯದ ಸಭಾಭವನವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು. ರಂಭಾಪುರಿ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಸ್ವಾಮೀಜಿ, ಮಳಲಿ ಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ದೇವಾಲಯದ ಸಭಾಭವನವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು. ರಂಭಾಪುರಿ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಸ್ವಾಮೀಜಿ, ಮಳಲಿ ಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.   

ಶಿವಮೊಗ್ಗ: ಸಕಲರಿಗೆ ಒಳಿತು ಉಂಟು ಮಾಡುವುದೇ ನಿಜವಾದ ಧರ್ಮ. ಅಧ್ಯಾತ್ಮದ ತಳಹದಿಯ ಮೂಲಕ ಮಾನವ ಜೀವನ ರೂಪಿತಗೊಂಡಾಗ ಎಲ್ಲೆಡೆ ಶಾಂತಿ ನೆಲೆಗೊಳ್ಳಲು ಸಾಧ್ಯ ಎಂದು ಬಾಳೆಹೊನ್ನೂರು ರಂಭಾಪುರೀ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ವಿನೋಬನಗರದ ಶಿವಾಲಯ ಗೋಪುರ ಕಳಸಾರೋಹಣ, ಶಿವಾಲಯ ಸಮುದಾಯ ಭವನದ ಉದ್ಘಾಟನೆ ಮತ್ತು ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವೈಚಾರಿಕತೆ ಮತ್ತು ಆಧುನಿಕತೆಯ ಹೆಸರಿನಲ್ಲಿ ಧರ್ಮ ಸಂಸ್ಕೃತಿಯ ಪುನರುತ್ಥಾನಕ್ಕೆ ಧಕ್ಕೆ ಉಂಟಾಗುತ್ತಿದೆ. ಅತಿಯಾದ ವೈಚಾರಿಕತೆ ಮನುಷ್ಯನಲ್ಲಿ ನಾಸ್ತಿಕ ಮನೋಭಾವನೆ ಬೆಳೆಸುತ್ತದೆ. ಹಾಗಾಗಿ ಸತ್ಯ ಮಾತನಾಡುವ, ಧರ್ಮದಂತೆ ನಡೆಯುವ ಪ್ರವೃತ್ತಿ ಎಲ್ಲರಲ್ಲಿ ಮೂಡಬೇಕಿದೆ ಎಂದರು.

ಧರ್ಮ ಸಂಸ್ಕೃತಿ ಪರಂಪರೆ ಕಟ್ಟಿ ಬೆಳೆಸಲು ಸಾಕಷ್ಟು ಶ್ರಮಪಡಬೇಕಿದೆ. ಆದರೆ, ಕಲುಷಿತಗೊಳಿಸಲು ಹೆಚ್ಚು ಸಮಯ ಬೇಕಾಗಿಲ್ಲ. ವೀರಶೈವ ಧರ್ಮ ವಿಶ್ವ ಬಂಧುತ್ವ ಹೊಂದಿ ಸಕಲರ ಬದುಕಿಗೆ ಶ್ರೇಯಸ್ಸು ಉಂಟು ಮಾಡಿದೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ಬಲು ದೊಡ್ಡದೆಂದು ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದಾರೆ ಎಂದು ಬಣ್ಣಸಿದರು.

ADVERTISEMENT

ಆಚಾರ್ಯರ ತತ್ವ ಚಿಂತನೆ ಮತ್ತು ಶರಣರ ಸಾಮಾಜಿಕ ಚಿಂತನೆ ಒಂದೇ ದಾರಿಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡಿವೆ. ಅವರಿವರೆನ್ನದೇ ಎಲ್ಲರೂ ನನ್ನವರು ಎಂಬ ಭಾವನೆ ಮೈಗೂಡಿಸಿಕೊಂಡಲ್ಲಿ ಬದುಕು ಉಜ್ವಲಗೊಳ್ಳುತ್ತದೆ. ಶಿವಾಲಯ ಗೋಪುರ ಮತ್ತು ಸಮುದಾಯ ಭವನ ನಿರ್ಮಾಣ ರಚನಾತ್ಮಕ ಕಾರ್ಯ. ವೀರಶೈವ ಸೇವಾ ಸಮಿತಿ ಅವರ ಸೇವೆಯನ್ನು ಕಂಡು ಅತ್ಯಂತ ಸಂತೋಷವಾಗಿದೆ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ದೇವರು ಮತ್ತು ಧರ್ಮದ ಹೆಸರಿನಲ್ಲಿ ಗಲಭೆ ನಡೆಯಬಾರದು. ಮಾಡುವ ಕೆಲಸಕ್ಕಿಂತ ಆಡುವ ಮಾತು ಹೆಚ್ಚಾಗಿದೆ. ಜನರ ಮನಸ್ಸು ದುರ್ಬಲಗೊಳ್ಳುತ್ತಿದೆ’ ಎಂದು ವಿಷಾದಿಸಿದರು. ಇದೇವೇಳೆ, ಶಿವಾಲಯದ ದಾಸೋಹ ಭವನಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದರು.

ಮಳಲೀ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ರಂಭಾಪುರಿ ಸ್ವಾಮೀಜಿ ಅವರನ್ನು ಮೆರಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ನೂತನ ಶಿವಾಲಯ ಸಮುದಾಯ ಭವನದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.

ಬಸವೇಶ್ವರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎನ್.ಜೆ. ರಾಜಶೇಖರ, ವಿನೋಬನಗರದ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎಚ್. ಮಲ್ಲಿಕಾರ್ಜುನಸ್ವಾಮಿ, ಮಾಜಿ ಅಧ್ಯಕ್ಷ ಚಂದ್ರಶೇಖರ, ಸಿ.ಎಚ್. ಬಾಳನಗೌಡ್ರು, ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಾಜಿ ಸಂಸದ ಆಯನೂರು ಮಂಜುನಾಥ್, ಶಾಸಕ ಬಿ.ವೈ. ರಾಘವೇಂದ್ರ, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಎಪಿಎಂಸಿ ಅಧ್ಯಕ್ಷ ಎಸ್‌.ಎಸ್. ಜ್ಯೋತಿ ಪ್ರಕಾಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಉಪಸ್ಥಿತರಿದ್ದರು. ಸಿ. ವೀರೇಶ ಸ್ವಾಗತಿಸಿದರು. ಈಶ್ವರಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.