ADVERTISEMENT

ಸಮಾನ ವೇತನ ಪಡೆಯುವುದು ಕಾರ್ಮಿಕರ ಹಕ್ಕು

ಗ್ರಾಮ ಪಂಚಾಯ್ತಿ ನೌಕರರ ತಾಲ್ಲೂಕು ಮಟ್ಟದ ಸಮ್ಮೇಳನದಲ್ಲಿ ಶಾಸಕ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 3:57 IST
Last Updated 22 ಏಪ್ರಿಲ್ 2017, 3:57 IST
ಸೊರಬ: ಸರ್ಕಾರಿ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಜತೆಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಧು ಬಂಗಾರಪ್ಪ ಒತ್ತಾಯಿಸಿದರು.
 
ಪಟ್ಟಣದ ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯ್ತಿ ನೌಕರರ ತಾಲ್ಲೂಕು ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
 
‘ಸರ್ಕಾರ ವಿವಿಧ ಇಲಾಖೆಗಳಲ್ಲಿ ಸಾವಿರಾರು ಜನರು ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಅನೇಕರು ಪದವಿ ಪಡೆದವರೂ ಇದ್ದಾರೆ. ಗೌರವಧನದ ಹೆಸರಿನಲ್ಲಿ ನೀಡುವ ಅತ್ಯಂತ ಕಡಿಮೆ ವೇತನಕ್ಕೆ ಇವರೆಲ್ಲ ದುಡಿಯುತ್ತಿದ್ದಾರೆ. ಸಮಾನ ವೇತನ ನೀಡುವಂತೆ ದಶಕಗಳಿಂದ  ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
‘ಹಲವು ಭಾಗ್ಯಗಳನ್ನು ನೀಡಿರುವ ಸರ್ಕಾರ ಗುತ್ತಿಗೆ ಕಾರ್ಮಿಕರು, ಅರೆ ಸರ್ಕಾರಿ ನೌಕರರಾಗಿ ದುಡಿಯುವ ಬೌಕರರಿಗೆ ದಿನನಿತ್ಯದ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವಷ್ಟಾದರೂ ವೇತನ ನೀಡಬೇಕು.  ಗೌರವಧನ ಹೆಚ್ಚಳ ಮಾಡುವ ಜತೆಗೆ ಸಕಾಲದಲ್ಲಿ ವೇತನ ನೀಡುವ ಭಾಗ್ಯ ಕರುಣಿಸಲಿ’ ಎಂದು ಆಗ್ರಹಿಸಿದರು.
 
‘ದೇಶದಲ್ಲಿ ಅತಿ ಹೆಚ್ಚು ವೇತನ ಪಡೆಯುವ ನೌಕರರು ಅದಕ್ಕೆ ತಕ್ಕಷ್ಟು ಕೆಲಸ ಮಾಡುತ್ತಿಲ್ಲ. ಆದರೆ, ಕಡಿಮೆ ವೇತನಕ್ಕೆ ದುಡಿಯುವ ನೌಕರರಿಂದ ಹೆಚ್ಚಿನ ಅವಧಿ ದುಡಿಸಿಕೊಳ್ಳಲಾಗುತ್ತದೆ. ಅವರಿಗೆ ಸಕಾಲದಲ್ಲಿ ವೇತನವನ್ನೂ ನೀಡುವುದಿಲ್ಲ’ ಎಂದರು. 
 
‘ಗ್ರಾಮ ಪಂಚಾಯ್ತಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಇಂತಹ ನೌಕರರ ಹೋರಾಟಕ್ಕೆ ನಾನು ನಿರಂತರವಾಗಿ ಸ್ಪಂದಿಸುತ್ತೇನೆ’ ಎಂದು ಭರವಸೆ ನೀಡಿದರು.
 
ಗ್ರಾಮ ಪಂಚಾಯ್ತಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಯೋಗರಾಜ್ ಮಾತನಾಡಿ, ಸರ್ಕಾರ ಗ್ರಾಮ ಪಂಚಾಯ್ತಿ ನೌಕರರನ್ನು ಜೀತದಾಳುವಿನಂತೆ ದುಡಿಸಿ ಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಸರ್ಕಾರ ಕನಿಷ್ಠ ವೇತನ ಜಾರಿಗೊಳಿಸಬೇಕು. ಸೇವಾ ಹಿರಿತನ ಹಾಗೂ ವಿದ್ಯಾರ್ಹತೆ ಹೊಂದಿದವರೆಗೆ ಬಡ್ತಿ ನೀಡಬೇಕು. ಸಿಬ್ಬಂದಿಯ ವೇತನ ಪಾವತಿಸಲು ಪ್ರತ್ಯೇಕ ಅನುದಾನ ನೀಡಬೇಕು. ಭವಿಷ್ಯ ನಿಧಿ, ಜನಶ್ರೀ ವಿಮಾ ಯೋಜನೆ, ಅಪಘಾತ ವಿಮೆ ಸೌಲಭ್ಯ ನೀಡಬೇಕು. ಬಾಕಿ ಉಳಿಸಿಕೊಂಡ ವೇತನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
 
ಪಟ್ಟಣದ ರಂಗನಾಥಸ್ವಾಮಿ ದೇವಾಲಯದಿಂದ ಮುಖ್ಯ ಬೀದಿಯಲ್ಲಿ  ಗ್ರಾಮ ಪಂಚಾಯ್ತಿ ನೌಕರರು ಜಾಥಾ ನಡೆಸಿದರು. ಗೌರವ ಅಧ್ಯಕ್ಷೆ ಶೇಖರಮ್ಮ ರಾಜಪ್ಪ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಚಿ ಹನುಮಂತಪ್ಪ, ರಮೇಶ್, ನಾಡಗೌಡ, ಶೇಖರ್, ಸತೀಶ್, ಎಪಿಎಂಸಿ ಸದಸ್ಯ ಕೆ.ಅಜ್ಜಪ್ಪ, ಬಾಲಚಂದ್ರ, ತಿಮ್ಮಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.