ADVERTISEMENT

ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ: ಪರ–ವಿರೋಧ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:24 IST
Last Updated 22 ಮೇ 2017, 5:24 IST

ರಿಪ್ಪನ್‌ಪೇಟೆ:  ಪಟ್ಟಣದ ಮಾದರಿ ಸರ್ಕಾರಿ ಹಿರಿಯ ಬಾಲಕ– ಬಾಲಕಿಯರ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಎಲ್‌ಕೆಜಿ, ಯು.ಕೆ.ಜಿ ಆರಂಭಿಸಲು ಚಿಂತನೆ ನಡೆಸಿರುವುದಕ್ಕೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ವಿರೋಧ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೊಸನಗರ ತಾಲ್ಲೂಕಿಗೆ ಎರಡನೇ ಸ್ಥಾನದಲ್ಲಿರುವ ಈ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಅವಕಾಶ ನೀಡಬಾರದು ಎಂದು 15 ಅಂಗನ ವಾಡಿ ಕಾರ್ಯಕರ್ತೆಯರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಪಂಚಾಯ್ತಿ ವ್ಯಾಪ್ತಿಯ 18 ಅಂಗನವಾಡಿ ಕೇಂದ್ರಗಳಿಂದ ಒಟ್ಟು ಮಕ್ಕಳ ಸಂಖ್ಯೆ ಮೂರು ಅಂಕಿ ದಾಟಿಲ್ಲ. ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶ ನೀಡಿದರೆ ಒಂದಂಕಿಯನ್ನೂ ದಾಟದೇ 10ಕ್ಕೂ ಹೆಚ್ಚು ಅಂಗನವಾಡಿ ಗಳನ್ನು ಮುಚ್ಚಬೇಕಾದೀತು ಎಂಬ ಆತಂಕ ಕಾರ್ಯಕರ್ತೆಯರನ್ನು ಕಾಡುತ್ತಿದೆ.

ADVERTISEMENT

ಗ್ರಾಮೀಣ ಭಾಗದಲ್ಲಿ ಐದು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ 200ಕ್ಕೂ ಹೆಚ್ಚು ಮಕ್ಕಳು ದುಬಾರಿ ಶುಲ್ಕ ಭರಿಸಿ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯು.ಕೆ.ಜಿಗೆ ಅವಕಾಶ ನೀಡಬೇಕು ಎಂಬ ಕೂಗು ಪೋಷಕರಿಂದ ಕೇಳಿಬರುತ್ತಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಿರುವಾಗ ಸರ್ಕಾರಿ ಶಾಲೆಯಲ್ಲಿ ಪೂರ್ವ ಶಿಕ್ಷಣಕ್ಕೆ ಅಡ್ಡಗಾಲು ಹಾಕುವುದು ಸರಿಯಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಹೊಸನಗರ ಸೇರಿ ಕೆಲವು ಪ್ರದೇಶಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಎಸ್‌ಡಿಎಂಸಿ ವಿಶೇಷ ಆಸಕ್ತಿ ವಹಿಸಿರುವುದು ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ದಾರಿಯಾಗಿದೆ ಎಂದು ಜನಜಾಗೃತಿ ಹೋರಾಟಗಾರ ಟಿ.ಆರ್‌.ಕೃಷ್ಣಪ್ಪ ಅಭಿಪ್ರಾಯಪಡುತ್ತಾರೆ.ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಬೇಕು ಎಂದು ಕೃಷಿಕ ಕುಕ್ಕಳಲೆ ಈಶ್ವರಪ್ಪ ಒತ್ತಾಯಿಸುತ್ತಾರೆ.

* *

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಆಯ್ಕೆ ಪೋಷಕರಿಗೆ ಸೇರಿದೆ. ಗುಣಾತ್ಮಕ ಶಿಕ್ಷಣ ಪಡೆಯುವುದು ಪ್ರತಿಯೊಬ್ಬನ ಹಕ್ಕು. ಅದರಲ್ಲಿ ಹಸ್ತಕ್ಷೇಪ ಬೇಡ. ಎಚ್.ಎನ್‌. ಉಮೇಶ, ಶಿಕ್ಷಣ ಪ್ರೇಮಿ

* * 

ಶೈಕ್ಷಣಿಕ ವರ್ಷದ ಆರಂಭದಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಮುಚ್ಚುವ ಹಂತದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಲಿ
ಜಿ.ಎಸ್‌. ರಾಘವೇಂದ್ರ,
ಎಸ್‌ಡಿಎಂಸಿ  ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.