ADVERTISEMENT

‘ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ಶಿಕಾರಿಪುರ’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 5:18 IST
Last Updated 14 ಏಪ್ರಿಲ್ 2017, 5:18 IST

ಶಿಕಾರಿಪುರ: ‘ಪ್ರಾಚೀನ ಕಾಲದಿಂದಲೂ ಶಿಕಾರಿಪುರ ತಾಲ್ಲೂಕು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದೆ’ ಎಂದು ಸಾಹಿತಿ ಪ್ರೊ.ಎಂ.ಎ. ಜಯಚಂದ್ರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌, ರೋವರ್ಸ್‌, ರೇಂಜರ್ಸ್‌ ಹಾಗೂ ಎನ್‌ಸಿಸಿ ಘಟಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇತಿಹಾಸದಲ್ಲಿ ಜೈನ, ಬೌದ್ಧ, ವೈದಿಕ ಹಾಗೂ ಶೈವ ಧರ್ಮ ಸೇರಿದಂತೆ ಹಲವು ಧರ್ಮಗಳ ಸಮನ್ವಯ ತಾಣ ಎಂಬ ಹೆಗ್ಗಳಿಕೆ ತಾಲ್ಲೂಕು ಪಾತ್ರವಾಗಿದೆ. ತಾಲ್ಲೂಕಿನ ಬಂದಳಿಕೆ, ತಾಳಗುಂದ ಹಾಗೂ ಬಳ್ಳಿಗಾವಿಯಲ್ಲಿರುವ ದೇವಸ್ಥಾನಗಳು ರಾಜ್ಯದ ಸಾಂಸ್ಕೃತಿಕ ಸಂಪತ್ತಾಗಿವೆ. ರಾಷ್ಟ್ರಕವಿ ಡಾ. ಜಿ.ಎಸ್‌. ಶಿವರುದ್ರಪ್ಪ ಈ ಪಟ್ಟಣದಲ್ಲೇ ಜನ್ಮ ತಾಳಿದ್ದರು ಎಂಬುದು ಹೆಮ್ಮೆ ಪಡುವ ಸಂಗತಿ’ ಎಂದು ಅವರು ಶ್ಲಾಘಿಸಿದರು. 

‘ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶಿಕ್ಷಣ ಪಡೆದು ಪ್ರಾಮಾಣಿಕ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ಪ್ರಾಮಾಣಿಕತೆ ಯಿಂದ ಮಾತ್ರ ಜೀವನದಲ್ಲಿ ಶಿಸ್ತು, ದಕ್ಷತೆ ಬರುತ್ತದೆ’ ಎಂದರು.

ಪ್ರಾಂಶುಪಾಲ ಡಾ.ಜಿ.ಆರ್‌. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಚ್‌. ಚಿನ್ನಪ್ಪ ಮಾತನಾಡಿದರು.

ವಿದ್ಯಾರ್ಥಿ ಕ್ಷೇಮಾಧಿಕಾರಿ ಉಳ್ಳಿ ರಾಜ್‌ಕುಮಾರ್‌, ಇತಿಹಾಸ ವಿಭಾಗ ಮುಖ್ಯಸ್ಥ ಡಿ.ಕೆ. ಮಂಜಪ್ಪ, ಪಠ್ಯೇತರ ಚಟುವಟಿಕೆ ಘಟಕಗಳ ಸಂಚಾಲಕರಾದ ಶೈಲಜಾ ಹೊಸಳ್ಳೇರ್‌, ಡಾ.ಎ.ಬಿ. ಅನಿಲ್‌ಕುಮಾರ್‌, ಎನ್‌.ಆರ್‌. ಶಂಕರ್‌, ಕೆ.ಟಿ. ನಾಗೇಂದ್ರಪ್ಪ, ಡಾ.ಹನುಮಂತಪ್ಪ, ಎ.ಪಿ. ಮಲ್ಲಪ್ಪ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.