ADVERTISEMENT

ಸಾಲ ಮನ್ನಾಕ್ಕೆ ರೈತ ಸಂಘಟನೆಗಳ ಆಗ್ರಹ

ಎರಡು ಬಣಗಳ ಪ್ರತ್ಯೇಕ ಪ್ರತಿಭಟನೆ l ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 3:55 IST
Last Updated 18 ಏಪ್ರಿಲ್ 2017, 3:55 IST
ಸಾಲ ಮನ್ನಾಕ್ಕೆ ರೈತ ಸಂಘಟನೆಗಳ ಆಗ್ರಹ
ಸಾಲ ಮನ್ನಾಕ್ಕೆ ರೈತ ಸಂಘಟನೆಗಳ ಆಗ್ರಹ   
ಶಿವಮೊಗ್ಗ: ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳ ಮೂಲಕ ಪಡೆದ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಎರಡು ಬಣಗಳ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
 
ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ನೇತೃತ್ವದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ರೈತ ಸಂಘದ ಇನ್ನೊಂದು ಬಣ ವೈ.ಜಿ. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. 
 
ಸಾಲ ಮನ್ನಾಕ್ಕೆ ಆಗ್ರಹಿಸಿ ಮೆರವಣಿಗೆ: ರೈತರ ಸಾಲ ಮನ್ನಾ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀನಮೇಷ ಎಣಿಸುತ್ತಿವೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಕೇಂದ್ರದ ಮೇಲೆ ರಾಜ್ಯ ಸರ್ಕಾರ, ರಾಜ್ಯದ ಮೇಲೆ ಕೇಂದ್ರ ಸರ್ಕಾರ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಾ ಕಾಲ ಕಳೆಯುತ್ತಿವೆ ಎಂದು ದೂರಿದರು.
 
ಬರಪೀಡಿತ ಪ್ರದೇಶಗಳಲ್ಲಿ ಹೆಕ್ಟೇರ್‌ಗೆ ಕನಿಷ್ಠ ₹ 20 ಸಾವಿರ ಬೆಳೆ ಪರಿಹಾರ ನೀಡಬೇಕು. ಮುಂದಿನ ಹಂಗಾಮಿಗೆ ಉಚಿತ ಬೀಜ, ಗೊಬ್ಬರ, ಔಷಧ ಹಾಗೂ ಉಚಿತ ಪಡಿತರ ವಿತರಿಸಬೇಕು. ಗ್ರಾಮೀಣ ಪ್ರದೇಶಗಳಿಗೆ ನಿರಂತರ  ವಿದ್ಯುತ್ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
 
ಶಿವಮೊಗ್ಗ ತಾಲ್ಲೂಕಿನ ಹಿರೇಹಳ್ಳದಿಂದ ಹಿಟ್ಟೂರು, ನಾರಾಯಣಪುರ ಹಾಗೂ ಕಾಚಿನಕಟ್ಟೆ ಕೆರೆಗೆ ಏತನೀರಾವರಿ ಮೂಲಕ ನೀರು ಪೂರೈಸಬೇಕು. ತುಂಗಾ ಏತನೀರಾವರಿ ಯೋಜನೆ ಪೂರ್ಣಗೊಳಿಸಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಘೋಷಿ ಸಬೇಕು ಎಂದು ಒತ್ತಾಯಿಸಿದರು. 
 
ಬರದ ಪರಿಣಾಮ ರೈತರು ಸಂಕಷ್ಟದಲ್ಲಿ ಇದ್ದಾರೆ. ಬ್ಯಾಂಕ್ ಮತ್ತು ಸಹಕಾರ ಸಂಘಗಳು ರೈತರ ಸಾಲ ವಸೂಲಿ ಮಾಡಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಆದೇಶ ಉಲ್ಲಂಘಿಸಿ ಕೆಲ ಬ್ಯಾಂಕ್‌ಗಳು ಸಾಲ ವಸೂಲಿ ಮುಂದುವರಿಸಿವೆ. ಸಾಲಕ್ಕೆ ಹೆದರಿದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಕ್ಷಣವೇ ವಸೂಲಿ ಬ್ಯಾಂಕ್‌ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
 
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಮುಖಂಡರಾದ  ಹಿಟ್ಟೂರು ರಾಜು, ಇ.ಬಿ. ಜಗದೀಶ್, ಟಿ.ಎಂ. ಚಂದ್ರಪ್ಪ, ಎಸ್.ಶಿವಮೂರ್ತಿ, ಕೆ.ರಾಘವೇಂದ್ರ, ಪಿ.ಡಿ. ಮಂಜಪ್ಪ, ರಾಮಚಂದ್ರಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 
ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ:  ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮುಖಂಡ ವೈ.ಜಿ. ಮಲ್ಲಿಕಾರ್ಜುನ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. 
 
ಬರದಿಂದ ಜಾನುವಾರಿಗೆ ನೀರು, ಮೇವು ದೊರೆಯುತ್ತಿಲ್ಲ.  ಸತತ ಮೂರು ವರ್ಷ  ಬರವಿದೆ. ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ತೀವ್ರ ಬರವಿದ್ದರೂ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ.  ಕೂಡಲೇ, ವಿದ್ಯುತ್ ದರ ಹೆಚ್ಚಳ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
 
ರೈತರ  ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರೈತರ ಟಿಲ್ಲರ್ ಹಾಗೂ ಟ್ರ್ಯಾಕ್ಟರ್‌ಗಳಿಗೆ ಉಚಿತ ಡೀಸೆಲ್ ವಿತರಿಸಬೇಕು.   ಬೀಜ, ಗೊಬ್ಬರ ಉಚಿತ ವಾಗಿ ನೀಡಬೇಕು.   ಬೆಳೆ ನಷ್ಟ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
 
ರೈತ ಸಂಘದ ಮುಖಂಡರಾದ ಎಚ್.ಪಿ. ಸತೀಶ್, ಎನ್.ಕೆ. ರವಿ ಕುಮಾರ್, ವಸಂತಕುಮಾರ್, ಲೋಹಿತ್ ಕುಮಾರ್, ಬಿ.ಇ .ಶಿವರಾಜ್, ದಿಗ್ಗೇನಹಳ್ಳಿ ಲೋಕೇಶ್. ಡಿ.ಎಸ್. ಈಶ್ವರಪ್ಪ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.