ADVERTISEMENT

ಸಾವಯವ ಉತ್ಪನ್ನಗಳಿಗೂ ಬಂತು ಉತ್ತಮ ಬೆಲೆ

ಸಾವಯವ ಕೃಷಿ ವಿಚಾರ ಸಂಕಿರಣದಲ್ಲಿ ಸಾವಯವ ಕೃಷಿ ಸಮಿತಿ ಅಧ್ಯಕ್ಷ ಬಿ.ಸೋಮಶೇಖರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:51 IST
Last Updated 24 ಮಾರ್ಚ್ 2017, 5:51 IST
ಶಿವಮೊಗ್ಗದ ಸರ್ಕಾರಿ ನೌಕರರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಸಾವಯವ ಕೃಷಿ ವಿಚಾರ ಸಂಕಿರಣ ಮತ್ತು ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನವನ್ನು ಸಾವಯವ ಕೃಷಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಬಿ.ಸೋಮಶೇಖರ ಉದ್ಘಾಟಿಸಿದರು
ಶಿವಮೊಗ್ಗದ ಸರ್ಕಾರಿ ನೌಕರರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಸಾವಯವ ಕೃಷಿ ವಿಚಾರ ಸಂಕಿರಣ ಮತ್ತು ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನವನ್ನು ಸಾವಯವ ಕೃಷಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಬಿ.ಸೋಮಶೇಖರ ಉದ್ಘಾಟಿಸಿದರು   

ಶಿವಮೊಗ್ಗ: ಪ್ರಸ್ತುತ ದಿನದಲ್ಲಿ ಸಾವಯವ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಜತೆಗೆ, ಉತ್ತಮ ಬೆಲೆಯೂ ದೊರಕುತ್ತಿದೆ ಎಂದು ಸಾವಯವ ಕೃಷಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಬಿ.ಸೋಮಶೇಖರ ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಗುರುವಾರ ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಆಯೋಜಿಸಿದ್ದ ಸಾವಯವ ಕೃಷಿ ವಿಚಾರ ಸಂಕಿರಣ ಮತ್ತು ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕ ಲಾಭ ಪಡೆಯಲು ಕೆಲವು ರೈತರು ರಾಸಾಯನಿಕ ಔಷಧಿ, ಗೊಬ್ಬರ ಬಳಸಿ ಭೂಸಾರ ಕುಂಠಿತಗೊಳಿಸುತ್ತಿದ್ದರು. ಆದರೆ, ಈಚಿನ ದಿನಗಳಲ್ಲಿ ಅಂತಹ ರೈತರು ಸಾವಯವ ಕೃಷಿ ಕ್ಷೇತ್ರದತ್ತ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ನಾಗರಿಕರು ಆರೋಗ್ಯದ ಬಗ್ಗೆ ಈಚಿಗೆ ಹೆಚ್ಚಿನ ಕಾಳಜಿ ತೋರುತ್ತಿದ್ದಾರೆ. ಆರೋಗ್ಯಯುತ ಜೀವನಕ್ಕಾಗಿ ಸಾವಯವ ಧಾನ್ಯ ಬಳಸುತ್ತಿದ್ದಾರೆ. ಅವರು ಉತ್ತಮ ಗುಣಮಟ್ಟದ ಬೆಳೆ ಪರಿಶೀಲಿಸಿ ಧಾನ್ಯ ಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದರು. ಸಾವಯವ ಕೃಷಿಕರಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಎಲ್ಲ ರೈತರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ಮಾತನಾಡಿ, ಸಾವಯವ ಕೃಷಿಯ ಬಳಕೆ ರೈತರಿಗೆ ಮನವರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಸಾವಯವ ಕೃಷಿಯಲ್ಲಿ ಬೆಳೆದ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದರು.

ಸರ್ಕಾರ ಸಾವಯವ ಪದಾರ್ಥಗಳಿಗೆ ಮಾರುಕಟ್ಟೆ ಕೊರತೆ ನೀಗಿಸಿ ಉತ್ತಮ ದರ ನಿಗದಿ ಮಾಡಿದೆ. ಸ್ವಾಭಾವಿಕವಾಗಿ ದೊರೆಯುವ ವಸ್ತುಗಳಿಂದ ಸಾವಯವ ಕೃಷಿ ಅನುಸರಿಸಲಾಗುತ್ತಿದೆ ಎಂದರು.

ಜಿಲ್ಲಾ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ ಮಾತನಾಡಿ, ಸಾವಯವ ಕೃಷಿ ಕ್ಷೇತ್ರ ಸಂಪೂರ್ಣ ವಿಸ್ತರಣೆ ಮಾಡುವ ಅಗತ್ಯವಿದೆ. ಸಾವಯವ ಕೃಷಿ ಅಳವಡಿಸಿಕೊಂಡರೆ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ. ಜಲಮಾಲಿನ್ಯ ನಿಯಂತ್ರಿಸಬಹುದು. ಕ್ರಿಮಿನಾಶಕ ಬಳಸದೆ ಕೃಷಿ ಚಟುವಟಿಕೆ ಮಾಡಬಹುದು ಎಂದರು.

ಭದ್ರಾವತಿಯಲ್ಲಿ ಸಾವಯವ ಕೃಷಿ ಬೆಲ್ಲದ ಘಟಕ, ತೀರ್ಥಹಳ್ಳಿ, ಹೊಸನಗರಗಳಲ್ಲಿ ಅಂಟವಾಳ ಕಾಯಿ ಪುಡಿ ಘಟಕ ಸ್ಥಾಪನೆ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸಾವಯವ ಕೃಷಿ ಉತ್ಪನ್ನಗಳ ದಾಸ್ತಾನು ಕೊರತೆ ಇದೆ. ಸರ್ಕಾರ  ಕೊರತೆ ನೀಗಿಸಬೇಕು ಎಂದು ಮನವಿ ಮಾಡಿದರು.

ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಕೆ.ಪಿ.ಅರುಣ್, ಸೋಮಶೇಖರಪ್ಪ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಪ್ರಾಂತ್ಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ.ಕೃಪ, ಪೂರ್ಣಚಂದ್ರ ಪ್ರಜ್ಞ, ಶಿವಕುಮಾರ್, ಮಂಜುನಾಥ್, ರಾಜಣ್ಣ, ಪಾಟೀಲ್‌ ಸುರೇಶ್‌ ಗೌಡ, ಸಚಿನ್‌ ಕಬ್ಬೂರ್, ಎನ್.ಜಿ. ರಘುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.