ADVERTISEMENT

ಸಾಹಿತಿ ರಾಮಚಂದ್ರ ಭಾವೆ ಸಮ್ಮೇಳನಾಧ್ಯಕ್ಷ

18ಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಉದ್ಘಾಟನೆ ನೆರವೇರಿಸಲಿರುವ ಕವಿ ಇಟಗಿ ಈರಣ್ಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2016, 5:42 IST
Last Updated 9 ನವೆಂಬರ್ 2016, 5:42 IST

ಸೊರಬ: ‘ತಾಲ್ಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೆಳನವನ್ನು ನ.18ರಂದು ಅತಿ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗುವುದು’ ಎಂದು ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಚ್.ಗಣಪತಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ನಾಡು–ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಅವಲೋಕನ ಮಾಡುವುದಕ್ಕೆ, ಕನ್ನಡದ ಬಗ್ಗೆ ಸದಾ ಜಾಗೃತಿಯಾಗಿರುವುದಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಪೂರಕವಾಗಿವೆ ಎಂದರು.

ಕಸಾಪ ತಾಲ್ಲೂಕು ಅಧ್ಯಕ್ಷ ಹಾಲೇಶ್ ನವುಲೆ ಮಾತನಾಡಿ, ತಾಲ್ಲೂಕಿನಲ್ಲಿ ಈಗಾಗಲೇ 4 ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗಿದ್ದು, 5ನೇ ಸಮ್ಮೆಳನವನ್ನು ಹೆಚ್ಚು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ನ. 18ರಂದು ಏಕದಿನದ ಸಮ್ಮೇಳನ ನಡೆಯಲಿದ್ದು, ಬೆಳಗ್ಗೆ 7.30ಕ್ಕೆ ರಾಷ್ಟ್ರಧ್ವಜವನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಯನಾ, ನಾಡಧ್ವಜವನ್ನು ತಹಶೀಲ್ದಾರ್ ಎಲ್.ಬಿ.ಚಂದ್ರಶೇಖರ್, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಹಾಲೇಶ್ ನವುಲೆ ನೆರವೇರಿಸಲಿದ್ದಾರೆ ಎಂದರು.

ಬೆಳಗ್ಗೆ 10.30ಕ್ಕೆ ಶಾಸಕ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ, ಸಮ್ಮೇಳನವನ್ನು ಕವಿ ಇಟಗಿ ಈರಣ್ಣ ಅವರು ಉದ್ಘಾಟಿಸಲಿದ್ದು, ಸಾಹಿತಿ ರಾಮಚಂದ್ರ ಭಾವೆ ಸಮ್ಮೇಳನದ ಸರ್ವಾಧ್ಯಕ್ಷರ ನುಡಿಯನ್ನಾಡಲಿದ್ದಾರೆ. ಸಮ್ಮೇಳನದಲ್ಲಿ ರೈತಗೋಷ್ಠಿ, ಮಹಿಳಾಗೋಷ್ಠಿ ಹಾಗೂ ಕವಿಗೋಷ್ಠಿ ನಡೆಯಲಿದೆ. ಸಂಜೆ 4.30ಕ್ಕೆ ತಾಲ್ಲೂಕು ಪರಿಷತ್ತಿನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರು ಡಯಟ್ ನ ಹಿರಿಯ ಉಪನ್ಯಾಸಕ ಸಲೀಮ್ ಪಾಷ ಸಮಾರೋಪ ಭಾಷಣ ಮಾಡಲಿದ್ದಾರೆ. ನಂತರದಲ್ಲಿ ಕನ್ನಡ ನಾಡು–ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಾಲಚಂದ್ರ, ಕಸಾಪ ಜಿಲ್ಲಾ ಉಪಾಧ್ಯಕ್ಷ ಡಾ.ಎಂ.ಕೆ.ಭಟ್, ಎಂ.ಡಿ.ಶೇಖರ್, ಎಸ್.ಎಂ.ನೀಲೇಶ, ದೀಪಕ್, ಉಮೇಶ್ ಬಿಚ್ಚುಗತ್ತಿ, ಮೃತ್ಯುಂಜಯಗೌಡ, ಶಿವಕುಮಾರ್, ಕರಿಬಸಪ್ಪ, ಲೋಲಾಕ್ಷಮ್ಮ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.