ADVERTISEMENT

ಸಿದ್ದರಾಮಯ್ಯ ಹೇಳಿದ್ದೆಲ್ಲ ಉಲ್ಟಾ ಆಗಿದೆ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 11:04 IST
Last Updated 10 ಏಪ್ರಿಲ್ 2018, 11:04 IST

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಏನನ್ನು ಆಗುವುದಿಲ್ಲ ಎನ್ನುತ್ತಾರೋ, ಅದೆಲ್ಲವೂ ಆಗಿದೆ. ಹಾಗಾಗಿ, ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಅವರ ಹೇಳಿಕೆಯನ್ನು ‘ಬರುತ್ತದೆ’ ಎಂದೇ ಅರ್ಥೈಸಿಕೊಳ್ಳಬೇಕು ಎಂದು ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಪ್ರತಿಪಾದಿಸಿದರು.

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ನಂತರ ಏನಾಯಿತು?. ಈಗ ಯಡಿಯೂರಪ್ಪ ವಿರುದ್ಧ ಅಂಥ ಮಾತು ಹೇಳುತ್ತಿದ್ದಾರೆ. ಮತ್ತೆ ಇತಿಹಾಸ ಮರುಕಳಿಸಲಿದೆ ಎಂದರು.

ನಟ ಪ್ರಕಾಶ್ ರೈ ರಾಮಚಂದ್ರಾಪುರ ಮಠಕ್ಕೆ ಬಂದರೆ ಗೋಮೂತ್ರ, ಗೋವಿನ ಸಗಣಿಯ ಮಹತ್ವ ಅರ್ಥ ಮಾಡಿಸಲಾಗುವುದು. ಅದು ಬಿಟ್ಟು ಭಂಡತನದ ಹೇಳಿಕೆ ನೀಡುತ್ತಾ ಹೋದರೆ ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

ADVERTISEMENT

ಬಿಜೆಪಿ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಟಿಕೆಟ್ ಸಿಗದವರು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಅತೃಪ್ತರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಬಹಳ ನಂಬುವ ಪತ್ರಿಕೆ ‘ಪ್ರಜಾವಾಣಿ’

‘ನಾನು ಬಹಳ ನಂಬುವ ಪತ್ರಿಕೆ ಪ್ರಜಾವಾಣಿ. ಇಂದು ಅದೇ ಪತ್ರಿಕೆ ಓದಿ ಬಂದಿದ್ದೇನೆ. ಅದರಲ್ಲಿ ಇರುವುದನ್ನೇ ಹೇಳುತ್ತಿದ್ದೇನೆ’
ಇದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ ಖಡಕ್ ಮಾತು.

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ರಾಹುಲ್‌ ಗಾಂಧಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಜಾವಾಣಿ’ ಬ್ಯಾನರ್ ಹೆಡ್ಡಿಂಗ್ ನೋಡಿ. ಒಳಗೂ ಓದಿ. ಜನನಾಯಕರಾದರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆ. ಶಾಸಕಾಂಗ ಸಭೆಯಲ್ಲೂ ನಿರ್ಧಾರವಾಗುತ್ತದೆ ಎಂಬುದನ್ನೂ ಸ್ಪಷ್ಟವಾಗಿ ಬರೆದಿದ್ದಾರೆ ಎಂದರು.

ಬೇರೆ ಪತ್ರಿಕೆ ಓದಿಲ್ಲವೇ ಎಂಬ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು, ‘ನೀವು ಪತ್ರಿಕೆ ಚೆನ್ನಾಗಿ ಓದುತ್ತೀರಿ ಎಂದುಕೊಂಡಿದ್ದೇನೆ. ನಿಮ್ಮದರಲ್ಲಿ ಏನು ಬಂದಿದೆ ನನಗೆ ಗೊತ್ತಿಲ್ಲ. ‘ಪ್ರಜಾವಾಣಿ’ ಓದಿದ್ದೇನೆ. ಅದನ್ನೇ ಉದಾಹರಣೆಯಾಗಿ ಕೊಡುತ್ತಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.