ADVERTISEMENT

‘ಸೊರಬಕ್ಕೆ ಅನುದಾನ ನೀಡದ ಯಡಿಯೂರಪ್ಪ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 6:43 IST
Last Updated 13 ಡಿಸೆಂಬರ್ 2017, 6:43 IST

ಆನವಟ್ಟಿ: ‘ಸಂಸದ ಬಿ.ಎಸ್‌. ಯಡಿಯೂರಪ್ಪ ಸೊರಬ ತಾಲ್ಲೂಕಿಗೆ ಯಾವುದೇ ಅನುದಾನ ನೀಡಿಲ್ಲ. ಯಾವ ಯಾವ ಕಾಮಗಾರಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಬುದಕ್ಕೆ ಲೆಕ್ಕ ನೀಡಲಿ’ ಎಂದು ಶಾಸಕ ಮಧು ಬಂಗಾರಪ್ಪ ಸವಾಲು ಹಾಕಿದರು.

ಹಣಜಿ ಗ್ರಾಮದಲ್ಲಿ ₹ 10 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಜಡೆ ಕೆಳಗಿನ ಗೋಮಾಳದಲ್ಲಿ ₹ 10 ಲಕ್ಷದ ಕಾಂಕ್ರೀಟ್ ರಸ್ತೆಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸೊರಬದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಗೆ ಯಾವುದೇ ಅರ್ಥವಿಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದ್ದರೂ ತಾಲ್ಲೂಕಿಗೆ ಅನುದಾನ ತರಲು ಸಾಧ್ಯವಾಗಿಲ್ಲ. ಪರಿವರ್ತನಾ ಯಾತ್ರೆಗೆ ಅವರು ಅನರ್ಹರು’ ಎಂದು ಲೇವಡಿ ಮಾಡಿದರು.

ADVERTISEMENT

‘ತಾಳಗುಪ್ಪದಲ್ಲಿ ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿದಾಗ ರೈತರ ಬೆಳೆ ಹಾಳಾಗಿದೆ. ಪ್ರತಿ ರೈತರ ಕುಟುಂಬಕ್ಕೆ 8 ಕ್ವಿಂಟಲ್ ಭತ್ತವನ್ನು ನಾನು ಉಚಿತವಾಗಿ ವಿತರಿಸಿದ್ದೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಚವಿ ಏತ ನೀರಾವರಿಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿಯಿಂದ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು. ಉಳಿದ ನೀರಾವರಿ ಯೋಜನೆಗಳನ್ನೂ ಅನುಷ್ಠಾನಗೊಳಿಸಲು ಯತ್ನಿಸಲಾಗುವುದು’ ಎಂದು ಅವರು ತಿಳಿಸಿದರು.

ಜಡೆ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿದ ಶಾಸಕರು, ಸಿಬ್ಬಂದಿ ಸಮಸ್ಯೆ, ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಡೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಶಿವಾನಿ ಹನುಮಂತಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಲಿಂಗೇಗೌಡ, ಕೆ.ಪಿ.ರುದ್ರಗೌಡ, ಕೃಷಿ ಸಹಕಾರ ಸಂಘದ ಅಧ್ಯಕ್ಷ ರುದ್ರಗೌಡ, ಉಪಾಧ್ಯಕ್ಷ ಬಸವಂತಪ್ಪ ಕೋಟಿ, ರಾಮಣ್ಣ ತಲಗುಂದ, ವೀರಣ್ಣ, ಹೊನ್ನಪ್ಪ, ದಿನೇಶಕುಮಾರ್, ಬಸವರಾಜಪ್ಪ, ಪರಶುರಾಮ, ಸೀತಾರಾಮಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ, ಕುಮಾರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.