ADVERTISEMENT

‘ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಬಳಕೆ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 6:26 IST
Last Updated 7 ಜುಲೈ 2015, 6:26 IST

ಶಿವಮೊಗ್ಗ: ಪ್ರಸ್ತುತ ಬದಲಾಗುತ್ತಿರುವ ಕಾಲಘಟ್ಟದಲ್ಲಿ ತಂತ್ರಜ್ಞಾನ ಕೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುತ್ತಿದೆ. ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಹಾಸು ಹೊಕ್ಕಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶದ ಹಿರಿಯ ಅಧಿಕಾರಿ ಎಚ್.ಆರ್.ರಾಜಪ್ಪ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ‘ಡಿಜಿಟಲ್ ಇಂಡಿಯಾ ಸಪ್ತಾಹ’ ಅಂಗವಾಗಿ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ  ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಮಾತನಾಡಿದರು.

ಭಾರತ ಸರ್ಕಾರವು ‘ಡಿಜಿಟಲ್ ಇಂಡಿಯಾ’ ಯೋಜನೆ ಅನುಷ್ಠಾನ ಗೊಳಿಸಿದ್ದು, ಈ ಮೂಲಕ ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ತ್ವರಿತಗತಿಯಲ್ಲಿ ಕಲ್ಪಿಸಲು ಮುಂದಾಗಿದೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶಗಳ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ನಗರದಲ್ಲಿ ಲಭ್ಯವಾಗುವ ಮೊಬೈಲ್, ಅಂತ ರ್ಜಾಲದ ಸಂಪರ್ಕ ಗ್ರಾಮೀಣ ಪ್ರದೇಶದಲ್ಲಿಯೂ ಲಭ್ಯವಾಗಲಿದೆ. ಹಾಗೆಯೇ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವು ಸ್ವಾವಲಂಬನೆ ಸಾಧಿಸಲು ಸಹಾಯಕವಾಗುತ್ತದೆ ಎಂದರು.

ದೇಶ ನಿರ್ಮಾಣ ಕಾರ್ಯದಲ್ಲಿ ಯುವಕರ ಮೇಲೆ ಗುರುತರ ಜವಾಬ್ದಾರಿಯಿದ್ದು, ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನಡೆಯಬೇಕು. ತಮ್ಮಲ್ಲಿರುವ ಕೌಶಲ, ಪ್ರತಿಭೆ, ಜ್ಞಾನವನ್ನು ದೇಶದ ಶ್ರೇಯೋಭಿವೃದ್ದಿಗೆ ಬಳಸಬೇಕು. ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

‘ಡಿಜಿಟಲ್ ಇಂಡಿಯಾ’ ಕಾರ್ಯ ಕ್ರಮದ ಅಂಗವಾಗಿ ಜಿಲ್ಲಾಡಳಿತ ಕಳೆದ ಒಂದು ವಾರದಿಂದ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಉಮಾ ಮಹೇಶ್, ಎನ್ಐಸಿ ಸಂಸ್ಥೆಯ ಅಧಿಕಾರಿ ವೆಂಕಟೇಶ್, ಬಿಎಸ್ಎನ್ಎಲ್ ಅಧಿಕಾರಿ ಸುನೀಲ್ ಕುಮಾರ್ ಹಾಗೂ ಓಪನ್ ಮೈಂಡ್ ಶಾಲೆಯ ಕಿರಣ್ ಕುಮಾರ್ ಉಪಸ್ಥಿತರಿದ್ದರು. ಸಮನ್ವಯ ಸಂಸ್ಥೆಯ ಕಾಶಿ ನಿರೂಪಿಸಿದರು.

ಪ್ರೌಢಶಾಲಾ ವಿಭಾಗದಲ್ಲಿ ಸಾಗರದ ನಿರ್ಮಲಾ ಬಾಲಿಕಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ನಿಧಿ ರೈ ಪ್ರಥಮ ಸ್ಥಾನ, ಪಿಯು ವಿಭಾಗದಲ್ಲಿ ಶಿಕಾರಿಪುರದ ಅಕ್ಷರ ಪಿ.ಯು. ಸೈನ್ಸ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಪಿ.ಎಂ. ಸುಮನ್ ಹಾಗೂ ಪದವಿ ವಿಭಾಗದಲ್ಲಿ ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಬಿಎಸ್‌ಸಿ ವಿದ್ಯಾರ್ಥಿನಿ ಪ್ರಿಯಾಂಕ ಪ್ರಥಮ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.