ADVERTISEMENT

ಸಾರ್ವಜನಿಕ ಸಮಸ್ಯೆಗೆ ಲೋಕಾಯುಕ್ತ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 8:22 IST
Last Updated 10 ಫೆಬ್ರುವರಿ 2018, 8:22 IST
‌ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಅಡಿ ಸಾರ್ವಜನಿಕರು ಸಲ್ಲಿಸಿದ ಪ್ರಕರಣಗಳ ವಿಚಾರಣೆ ನಡೆಸಿದರು.
‌ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಅಡಿ ಸಾರ್ವಜನಿಕರು ಸಲ್ಲಿಸಿದ ಪ್ರಕರಣಗಳ ವಿಚಾರಣೆ ನಡೆಸಿದರು.   

ಶಿವಮೊಗ್ಗ: ಸಾರ್ವಜನಿಕ ಕೆಲಸಗಳನ್ನು ನಿಗದಿತ ಅವಧಿಯ ಒಳಗೆ ಪೂರ್ಣ ಗೊಳಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಉಪ ಲೋಕಾ ಯುಕ್ತ ನ್ಯಾಯಮೂರ್ತಿ ಸುಭಾಷ್ ಅಡಿ ಸೂಚನೆ ನೀಡಿದರು. ಶುಕ್ರವಾರ ಲೋಕಾಯುಕ್ತಕ್ಕೆ ಜಿಲ್ಲೆಯ ಸಾರ್ವಜನಿಕರು ಸಲ್ಲಿಸಿದ್ದ ಪ್ರಕರಣಗಳ ವಿಚಾರಣಾ ಸಭೆಯಲ್ಲಿ ಅವರು ಮಾತನಾಡಿದರು.

ಅರಣ್ಯಹಕ್ಕು ಕಾಯ್ದೆ ಅನುಷ್ಠಾನ ದಲ್ಲಿನ ಲೋಪದೋಷಗಳು, ಅನಧಿಕೃತ ಭೂ ಮಂಜೂರಾತಿ ಪ್ರಕರಣಗಳು, ನಿರ್ಮಾಣ ಕಾಮಗಾರಿಗಳಲ್ಲಿ ಅವ್ಯವ ಹಾರ ಒಳಗೊಂಡಂತೆ 40ಕ್ಕೂ ಅಧಿಕ ಪ್ರಕರಣಗಳನ್ನು ಜಿಲ್ಲೆಯಿಂದ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಲಾಗಿದೆ ಎಂದರು.

ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಅನುಸರಿಸದೇ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ನಿವೃತ್ತ ಅರಣ್ಯಾಧಿಕಾರಿ ವೈ.ಜಿ. ಯೋಗೇಂದ್ರ ಅವರು ಸಲ್ಲಿಸಿದ್ದ ದೂರಿನ ಸುದೀರ್ಘ ವಿಚಾರಣೆ ನಡೆಸಿದರು.

ADVERTISEMENT

ಜಿಲ್ಲಾಮಟ್ಟದ ಅರಣ್ಯಹಕ್ಕು ಸಮಿತಿಯಲ್ಲಿ ನಿಗದಿತ ಪ್ರಕರಣದಲ್ಲಿ ಅಧಿಕಾರೇತರ ಸದಸ್ಯರ ನೇಮಕವಾಗಿಲ್ಲ. ಅರ್ಜಿ ಕುರಿತಾದ ಅಂತಿಮ ತೀರ್ಪಿನಲ್ಲಿ ಕೇವಲ ಅಧಿಕಾರಿಗಳ ಸಹಿ ಮಾತ್ರ ಇದೆ. ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರ ಸಹಿ ಪಡೆದುಕೊಂಡಿಲ್ಲ. ಸಹಿ ಮಾಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್ಚುವರಿ ಪ್ರಭಾರಾಗಿ ಇದ್ದಾರೆ. ಅವರಿಗೆ ಕಾನೂನು ಪ್ರಕಾರ ಸಹಿ ಮಾಡುವ ಅಧಿಕಾರ ಇಲ್ಲ. ಸಹಿ ಮಾಡಿರುವುದೇ ಕಾನೂನುಬಾಹಿರ ಎಂದರು.

ಅರ್ಜಿ ಪರಿಶೀಲಿಸುವಾಗ ಕೇವಲ ಮೂರು ತಲೆಮಾರಿನಿಂದ ವಾಸವಾಗಿರುವ ದೃಢೀಕರಣ ಕೇಳುತ್ತಿದ್ದಾರೆ. ಕಾಯ್ದೆಯಲ್ಲಿ ಒಟ್ಟು 13 ಅಂಶಗಳ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿನ ಪ್ರಮುಖವಾಗಿ ಕಾರ್ಯ ಯೋಜನೆ ಎಂಬ ಅಂಶ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಅಹವಾಲು ಮಂಡಿಸಿದರು.

ಭದ್ರಾವತಿ ತಾಲ್ಲೂಕಿನಲ್ಲಿ ಅನಧಿಕೃತವಾಗಿ ಸರ್ಕಾರಿ ಅಧಿಕಾರಿಗೆ ಭೂ ಮಂಜೂರಾತಿ ನೀಡಲಾಗಿದೆ. ಈ ಕುರಿತು ದೂರು ನೀಡಿ, ಮಾಹಿತಿ ಕೇಳಿದ್ದರೂ ತಹಶೀಲ್ದಾರ್ ಮಾಹಿತಿ ಒದಗಿಸುತ್ತಿಲ್ಲ ಎಂದು ಭದ್ರಾವತಿ ತಾಲ್ಲೂಕಿನ ನಾಗರಿಕರು ಅಹವಾಲು ಸಲ್ಲಿಸಿದರು.

ಅರ್ಜಿದಾರರಿಗೆ ಕೇಳಿರುವ ಎಲ್ಲಾ ಮಾಹಿತಿ ನಿಗದಿತ ಸಮಯದ ಒಳಗೆ ಒದಗಿಸುವಂತೆ ಹಾಗೂ ಎಲ್ಲಾ ದಾಖಲೆಗಳನ್ನೂ ಪರಿಶೀಲನೆಗೆ ಲೋಕಾಯುಕ್ತಕ್ಕೆ ಸಲ್ಲಿಸುವಂತೆ ಉಪ ಲೋಕಾಯುಕ್ತರು ಸೂಚಿಸಿದರು.

ಬಳಿಗ್ಗೆ 10.15ಕ್ಕೆ ಆರಂಭವಾದ ಸಭೆ ಇಡೀ ದಿನ ನಡೆಯಿತು. ಹಳೆ ಪ್ರಕರಣಗಳ ವಿಚಾರಣೆ ಜತೆಗೆ, ಹೊಸ ಪ್ರಕರಣಗಳನ್ನೂ ಸ್ವೀಕರಿಸಿದರು. ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಪಾಲಿಕೆ ಆಯುಕ್ತ ಮುಲೈ ಮುಹಿಲನ್ಉ ಪಸ್ಥಿತರಿದ್ದರು.

* * 

85,518 ಅರ್ಜಿ ಸ್ವೀಕಾರ

ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಅಡಿ ಒಟ್ಟು 85,518 ಅರ್ಜಿ ಸ್ವೀಕರಿಸಲಾಗಿದೆ. 2,506 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. 43,040 ಅರ್ಜಿ ತಿರಸ್ಕರಿಸಲಾಗಿದೆ. ಪರಿಶಿಷ್ಟ ಪಂಗಡದ ಜನರು ಸಲ್ಲಿಸಿದ 4,634 ಅರ್ಜಿಗಳಲ್ಲಿ 2,693 ಅರ್ಜಿ ತಿರಸ್ಕರಿಸಲಾಗಿದೆ. 1,940 ಹಕ್ಕುಪತ್ರ ವಿತರಿಸಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.