ADVERTISEMENT

ಸೇತುವೆ ಸಂಭ್ರಮಕ್ಕೆ ಸಾಕ್ಷಿಯಾದ ‘ದ್ವೀಪ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 6:56 IST
Last Updated 20 ಫೆಬ್ರುವರಿ 2018, 6:56 IST
ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ಕಳಸವಳ್ಳಿ ದಡದಲ್ಲಿ ಸೋಮವಾರ ನಡೆದ ಶಂಕುಸ್ಥಾಪನೆ ಸಮಾರಂಭಕ್ಕೆ ಬರಲು ಲಾಂಚ್‌ ಏರಿದ ಜನ ಸಮೂಹ
ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ಕಳಸವಳ್ಳಿ ದಡದಲ್ಲಿ ಸೋಮವಾರ ನಡೆದ ಶಂಕುಸ್ಥಾಪನೆ ಸಮಾರಂಭಕ್ಕೆ ಬರಲು ಲಾಂಚ್‌ ಏರಿದ ಜನ ಸಮೂಹ   

ಸಾಗರ: ತಾಲ್ಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ಕಳಸವಳ್ಳಿ ದಡದಲ್ಲಿ ಸೋಮವಾರ ಅಕ್ಷರಶಃ ಸಂಭ್ರಮದ ವಾತಾವರಣ ಮೂಡಿತ್ತು. ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ತ್ಯಾಗ ಮಾಡಿದ ಇಲ್ಲಿನ ಜನ ಮೂಲಸೌಕರ್ಯಗಳ ಕೊರತೆಯಿಂದ ಸದಾ ಸಂಕಟ, ನಿರಾಶೆ, ಹತಾಶೆಯಲ್ಲಿ ಮುಳುಗಿದ್ದರು. ಆದರೆ, ಅವರ ಮುಖದಲ್ಲಿ ಇದೇ ಮೊದಲ ಬಾರಿಗೆ ಮಂದಹಾಸ ತರುವ ಸಮಯ ಸಿಗಂದೂರು ಸೇತುವೆ ಕಾಮಗಾರಿ ಶಂಕುಸ್ಥಾಪನೆ ಸಮಾರಂಭ ಸೃಷ್ಟಿಸಿತ್ತು.

ಕಳಸವಳ್ಳಿ ದಡದ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ನಡೆಯಿತು. ವೇದಿಕೆಯ ಪಕ್ಕದಲ್ಲೇ ಕೇಂದ್ರ ಸಚಿವರ ಬರುವಿಕೆಗೆ ಹೆಲಿಪ್ಯಾಡ್‌ ನಿರ್ಮಿಸಲಾಗಿತ್ತು.

ಸ್ಥಳೀಯರಾದ ಕರೂರು ಹಾಗೂ ಭಾರಂಗಿ ಹೋಬಳಿಯ ಜನರು ಸಮಾರಂಭ ಆರಂಭವಾಗುವ ಒಂದು ಗಂಟೆಗೂ ಮೊದಲೇ ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಮಿಸಿದ್ದು ಗಮನಾರ್ಹವಾಗಿತ್ತು.

ADVERTISEMENT

ಸಾಗರದಿಂದ ಸಮಾರಂಭಕ್ಕೆ ಜನರನ್ನು ಕರೆತರಲು ಬಿಜೆಪಿ ಮುಖಂಡರು 50 ಬಸ್‌ಗಳ ವ್ಯವಸ್ಥೆ ಮಾಡಿದ್ದರು. 6 ಸಾವಿರಕ್ಕೂ ಹೆಚ್ಚು ಜನರು ಶರಾವತಿ ಹಿನ್ನೀರಿನ ದ್ವೀಪ ಪ್ರದೇಶದಲ್ಲಿ ಸಮಾವೇಶಗೊಂಡಿದ್ದರು.

ಸಭೆಯ ಆರಂಭದಲ್ಲಿ ತುಮರಿಯ ಅ.ನ. ಚಂದ್ರಶೇಖರ್‌ ಮತ್ತು ಸಂಗಡಿಗರು ‘ಸೇತುವೆ ಬಂತಣ್ಣ ಸೇತುವೆ’ ಎಂದು ತಾವೇ ರಚಿಸಿದ ಗೀತೆಯನ್ನು ಹಾಡುವ ಮೂಲಕ ಸಮಾರಂಭಕ್ಕೆ ಕಳೆ ತಂದರು. ‘50 ವರ್ಷದ ಕನಸುಗಳ ಸೇತುವೆ, ಬೆಸೆಯಿತು ಮನಸ್ಸುಗಳ, ಬೇಡ ಪಕ್ಷಗಳ ಒಳ ಜಗಳ, ಸೇತುವೆಗಾಗಿ ನಮ್ಮೆಲ್ಲರ ಸಮ್ಮಿಲನ’ ಎಂಬ ಗೀತೆಯ ಸಾಲುಗಳು ಸೇತುವೆ ನಿರ್ಮಾಣಕ್ಕಾಗಿ ಎಲ್ಲಾ ಪಕ್ಷದವರು ದುಡಿದಿದ್ದಾರೆ ಎನ್ನುವ ಸಂದೇಶವನ್ನು ಅರ್ಥಪೂರ್ಣವಾಗಿ ಸಾರುವ ರೀತಿಯಲ್ಲಿತ್ತು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಹರ್ಷಭರಿತ ಧ್ವನಿಯಲ್ಲಿ ಕೇಂದ್ರ ಸಚಿವ ಗಡ್ಕರಿ ಅವರನ್ನು ಉದ್ದೇಶಿಸಿ ಇಂಗ್ಲಿಷ್‌ನಲ್ಲಿಯೇ ಚುಟುಕಾಗಿ ಮಾತನಾಡಿ, ಸೇತುವೆ ಮಂಜೂರು ಮಾಡಿದ್ದಕ್ಕೆ ಸಿಗಂದೂರು ದೇವಿ ನಿಮಗೆ ದೀರ್ಘಾಯುಷ್ಯ ನೀಡಲಿ ಎಂದು ಹರಸಿದರು.

ಬಿ.ಎಸ್. ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಮಾಜಿ ಸಚಿವ ಎಚ್. ಹಾಲಪ್ಪ ಅವರ ಕುಟುಂಬದ ಪೂರ್ವಿಕರು ಮದುವೆ ಸಮಾರಂಭವೊಂದಕ್ಕೆ ತೆಪ್ಪದಲ್ಲಿ ಶರಾವತಿ ಹಿನ್ನೀರಿನಲ್ಲಿ ತೆರಳುತ್ತಿದ್ದಾಗ ತೆಪ್ಪ ಮುಳುಗಿ ಮೂರು ದಂಪತಿ ಮೃತಪಟ್ಟ ಘಟನೆ ಸ್ಮರಿಸಿ ಕೆಲಕ್ಷಣ ಭಾವುಕರಾದರು. ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಮೊಗಲರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ರಾಣಿ ಚನ್ನಮ್ಮನ ನೆಲ ಇದು ಎಂದು ಸ್ಮರಿಸಿದರು.

ಸಮಾರಂಭಕ್ಕೆ ಬಂದ ಎಲ್ಲರಿಗೂ ಸಿಗಂದೂರು ಕ್ಷೇತ್ರದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಪೆಂಡಾಲ್‌ನಲ್ಲಿ ನೂಕುನುಗ್ಗಲು ಆಗದಂತೆ ಅಚ್ಚುಕಟ್ಟಾದ ನಿರ್ವಹಣೆ ಇತ್ತು. ಹೊಳೆಬಾಗಿಲು ದಡದಿಂದ ಸಮಾರಂಭದ ಸ್ಥಳಕ್ಕೆ ಲಾಂಚ್ ಮೂಲಕ ತೆರಳುವಾಗ ನೂಕುನುಗ್ಗಲು ಆಗದಂತೆ ಮುಂಜಾಗ್ರತೆ ವಹಿಸುವ ಜೊತೆಗೆ ಮುಪ್ಪಾನೆಯಿಂದ ಹೆಚ್ಚುವರಿ ಲಾಂಚ್‌ನ್ನು ಕೂಡ ಕರೆತರಲಾಗಿತ್ತು.

ವೇದಿಕೆಯಲ್ಲಿ ಬಿಜೆಪಿ ಪದಾಧಿಕಾರಿಗಳು

ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು ವೇದಿಕೆ ಏರುವ ಮೂಲಕ ಶಿಷ್ಟಾಚಾರ ಉಲ್ಲಂಘಿಸುವ ಸಂಪ್ರದಾಯ ಇಲ್ಲೂ ನಡೆಯಿತು. ಬಿಜೆಪಿಯ ಹಲವು ಮುಖಂಡರು ವೇದಿಕೆಯಲ್ಲಿ ಕುಳಿತಿದ್ದರು. ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಕಾರ್ಯಕ್ರಮಕ್ಕೆ ಇಲ್ಲಿಗೆ ಆಗಮಿಸಿದ್ದಾಗ ಕೂಡ ಕಾಂಗ್ರೆಸ್ ಮುಖಂಡರೂ ವೇದಿಕೆ ಏರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.