ADVERTISEMENT

ಅಡಿಕೆ ಬೆಳೆ ಉಳಿವಿಗೆ ಗಂಭೀರ ಚಿಂತನೆ ಅಗತ್ಯ:ಆರಗ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 6:54 IST
Last Updated 21 ಫೆಬ್ರುವರಿ 2018, 6:54 IST

ತೀರ್ಥಹಳ್ಳಿ: ‘ಅಡಿಕೆ ಬೆಳೆ ರಾಜಕೀಯ ಆಟದ ವಸ್ತುವಲ್ಲ. ಅದನ್ನು ಬೆಳೆಯುವವರು, ಅವಲಂಬಿಸಿದ ಜನ ಸಮುದಾಯಕ್ಕೆ ಬೆಳಕು ಕೊಟ್ಟ ಬೆಳೆ ಅದು. ಅದರ ಉಳಿವಿಗೆ ಗಂಭೀರ ಚಿಂತನೆ ಅಗತ್ಯ’ ಎಂದು ಮಾಜಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭೆ ಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಬಳಸಿಕೊಳ್ಳುವ ಸಣ್ಣತನಕ್ಕೆ ಕಾಂಗ್ರೆಸ್‌ ಇಳಿದಿದೆ. ಬೆಳೆಗಾರರನ್ನು ಕೇಂದ್ರ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ. ಬೆಳೆಗಾರರ ಕುರಿತು ಆಳುವ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಯಾವುದೇ ಹೊಣೆಗಾರಿಕೆ ಇಲ್ಲವೇ? ಇದು ಕಾಂಗ್ರೆಸ್‌ನ ಹೊಣೆಗೇಡಿತ ನವ ಲ್ಲದೆ ಇನ್ನೇನು’ ಎಂದು ಪ್ರಶ್ನಿಸಿದರು.

‘ಅಡಿಕೆ ಕ್ಯಾನ್ಸರ್‌ ಕಾರಕ ಗುಣ ಹೊಂದಿದೆ ಎಂದು ಯುಪಿಎ ಸರ್ಕಾರ ಇದ್ದಾಗ ಸುಪ್ರಿಂ ಕೋರ್ಟ್‌ಗೆ ಮಾಹಿತಿ ನೀಡಿದ್ದೇ ಇಷ್ಟಕ್ಕೆಲ್ಲ ಕಾರಣ. ಆ ಮಾಹಿತಿ ನೀಡುವಾಗ ಬೆಳೆಗಾರರ ನೆನಪು ಕಾಂಗ್ರೆಸ್‌ಗೆ ಬಂದಿಲ್ಲ. ತೀರ್ಥಹಳ್ಳಿ ಕಾಂಗ್ರೆಸ್‌ ಘಟಕ ಈಗ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿರುವುದು ಸಮರ್ಥನೀಯವಲ್ಲ’ ಎಂದರು.

ADVERTISEMENT

ಸಾವಿರಾರು ವರ್ಷಗಳ ಹಿನ್ನೆಲೆ ಇರುವ ಬೆಳೆ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅಡಿಕೆ ಬೆಳೆಗಾರರ ಹಿತ ಕಾಯಲು ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ನಿಯೋಗ ತೆರಳಿ ಮಾಹಿತಿ ನೀಡಲಾಗಿದೆ. ಪ್ರಧಾನಿ ಮೋದಿ ಅವರು ಬೆಳೆಗಾರರಿಗೆ ಹಾನಿ ಆಗುವ ಕೆಲಸ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ. ಅಡಿಕೆ ಬೆಳೆ ನಿಷೇಧದ ಮಾತು ಕೇಂದ್ರ ಸರ್ಕಾರದ ಮುಂದಿಲ್ಲ. ಪರಿಶೀಲನೆ ಹಂತದಲ್ಲಿದೆ ಎಂದರು.

24ರಂದು ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಬಿಜೆಪಿ ನವಶಕ್ತಿ ಸಮಾವೇಶ ನಡೆಯಲಿದೆ. ಪ್ರತಿ ಬೂತ್‌ನಿಂದ 9 ಜನರ ತಂಡ ಪಾಲ್ಗೊಳ್ಳುತ್ತದೆ. ಸಭೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ವಿಧಾನ ಪರಿಷತ್‌ ಸದಸ್ಯ ಭಾನುಪ್ರಕಾಶ್‌, ವಿಭಾಗ ಪ್ರಭಾರಿ ಆಯನೂರು ಮಂಜುನಾಥ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ, ಮಾಜಿ ಶಾಸಕ ಬಿ.ಸ್ವಾಮಿರಾವ್‌ ಪಾಲ್ಗೊಳ್ಳುವರು ಎಂದರು.

ಸುದ್ದಿಗೋಷ್ಠಿಯಲ್ಲಿ ತೀರ್ಥಹಳ್ಳಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಮೋಹನ್‌ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೋಕಮೂರ್ತಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂದೇಶ್‌ ಜವಳಿ ಇದ್ದರು.

‘ಕಿಮ್ಮನೆ ಆಗ ಎಲ್ಲಿ ಹೋಗಿದ್ದರು?’

‘ಡಿಸಿಸಿ ಬ್ಯಾಂಕ್‌ ಹಗರಣ ಕುರಿತು ಆರಂಭದಲ್ಲೇ ನಾನು ಪ್ರತಿಭಟನೆ ನಡೆಸಿದ್ದೆ. ಮಂಜುನಾಥಗೌಡರ ವಿರುದ್ಧ ಈಗ ಮಾತನಾಡುವ ಕಿಮ್ಮನೆ ಆಗ ಎಲ್ಲಿಗೆ ಹೋಗಿದ್ದರು. ಅವರನ್ನು ಮುಂದಿಟ್ಟುಕೊಂಡು ತಾಲ್ಲೂಕು ಪಂಚಾಯ್ತಿ , ಜಿಲ್ಲಾ ಪಂಚಾಯ್ತಿ ಚುನಾವಣೆ ಮಾಡಿದ್ದಾರೆ. ಅವತ್ತೇ ಪ್ರತಿಭಟಿಸಬೇಕಿತ್ತಲ್ಲ’ ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

‘ಈ ಕುರಿತು ಕಿಮ್ಮನೆ ಜನರ ಕ್ಷಮೆಯಾಚಿಸಬೇಕು. ಇವರಿಗೆ ರೈತರ ಬ್ಯಾಂಕ್‌ ಉಳಿಯುವ ಅಗತ್ಯವಿರಲಿಲ್ಲ. ರಾಜಕೀಯ ಲಾಭ ನಷ್ಟದ ವಿಚಾರ ಮಾತ್ರ ಇತ್ತು. ರೈತರ ಬ್ಯಾಂಕ್‌ ಮುಳುಗಲು ಮಂಜುನಾಥಗೌಡ, ಕಾಂಗ್ರೆಸ್‌ ಸರ್ಕಾರ, ಕಿಮ್ಮನೆ ಕಾರಣರಾಗಿದ್ದಾರೆ’ ಎಂದು ಆರಗ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.