ADVERTISEMENT

‘ಸ್ಮಾರ್ಟ್‌’ ಪ್ರಾತಿನಿಧ್ಯಕ್ಕೆ ಪಾಲಿಕೆ ಸದಸ್ಯರ ಆಗ್ರಹ

ಮೇಯರ್ ನಾಗರಾಜ ಕಂಕಾರಿ ಅಧ್ಯಕ್ಷತೆಯಲ್ಲಿ ಯೋಜನೆಯ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 16:16 IST
Last Updated 16 ಜುಲೈ 2018, 16:16 IST
ಶಿವಮೊಗ್ಗ ನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಸ್ಮಾರ್ಟ್‌ಸಿಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೇಯರ್ ನಾಗರಾಜ ಕಂಕಾರಿ ಮಾತನಾಡಿದರು.
ಶಿವಮೊಗ್ಗ ನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಸ್ಮಾರ್ಟ್‌ಸಿಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೇಯರ್ ನಾಗರಾಜ ಕಂಕಾರಿ ಮಾತನಾಡಿದರು.   

ಶಿವಮೊಗ್ಗ:‘ಸ್ಮಾರ್ಟ್‌ಸಿಟಿ’ ಯೋಜನೆ ನಿರ್ವಹಣಾ ಮಂಡಳಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಸೂಕ್ತ ಪ್ರತಿನಿಧ್ಯ ನೀಡಿಲ್ಲ ಎಂದು ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಸ್ಮಾರ್ಟ್‌ಸಿಟಿ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒಕ್ಕೊರಲ ಆಕ್ಷೇಪ ವ್ಯಕ್ತವಾಯಿತು.

ಸಭೆಯ ಆರಂಭದಲ್ಲೇ ಮಾತನಾಡಿದ ಮೇಯರ್ ನಾಗರಾಜ ಕಂಕಾರಿ, ಯೋಜನೆಗೆ ₨ 1 ಸಾವಿರ ಕೋಟಿ ಹಣ ಬಂದಿದೆ. ಆದರೆ, ಎಲ್ಲೂ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳು ಅದಕ್ಕೆ ಉತ್ತರಿಸುವ ಅನಿವಾರ್ಯತೆ ಇದೆ. ಯೋಜನೆ ಪ್ರಗತಿ ಕುರಿತು ಸೂಕ್ತ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಪಾಲಿಕೆ ಸದಸ್ಯರಿಗೆ ಪ್ರತಿ ಬಡಾವಣೆಯ ಮಾಹಿತಿ ಇರುತ್ತದೆ. ಆಗಬೇಕಾದ ಮೂಲ ಸೌಕರ್ಯಗಳ ಪಟ್ಟಿ ಇರುತ್ತದೆ. ಸಮಸ್ಯೆಯಾದರೆ ಜನರು ಸದಸ್ಯರನ್ನೇ ಪ್ರಶ್ನಿಸುತ್ತಾರೆ. ಆದರೆ, ಮಂಡಳಿಯಲ್ಲಿ ಅವರಿಗೆ ಯಾವುದೇ ಸ್ಥಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಮಾರ್ಟ್‌ಸಿಟಿ ನಿಯಮದ ಪ್ರಕಾರ ಯೋಜನೆ ಅನುಷ್ಠಾನಕ್ಕೆ ಕಂಪೆನಿ ಸ್ಥಾಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಡಳಿತ ಮಂಡಳಿ ಮುಖ್ಯಸ್ಥರು, ಸರ್ಕಾರ ನೇಮಿಸಿದ ಅಧಿಕಾರಿ ವ್ಯವಸ್ಥಾಪಕ ನಿರ್ದೇಶಕರು, ಸ್ಥಳೀಯವಾಗಿ ಪಾಲಿಕೆ ಮೇಯರ್, ಆಯುಕ್ತರು ಸೇರಿದಂತೆ 6 ಜನರನ್ನು ನಿರ್ದೇಶಕರಾಗಿ ನಾಮಕರಣ ಮಾಡಲು ಅವಕಾಶಕಲ್ಪಿಸಲಾಗಿದೆ. ಲೆಕ್ಕಪರಿಶೋಧಕರು, ವಾಸ್ತುಶಿಲ್ಪಿಗಳನ್ನೂ ಸರ್ಕಾರವೇ ನೇಮಿಸುತ್ತದೆ. ಇದರಲ್ಲಿ ಶಾಸಕರು, ಸಂಸದರು ಸಲಹೆಗಾರಾಗಿ ಇರುತ್ತಾರೆ ಎಂದು ಎಂಜಿನಿಯರ್ ಗಣೇಶ್ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನೇತೃತ್ವದಲ್ಲಿ 2017 ಮಾರ್ಚ್‌ನಿಂದ ಇಲ್ಲಿಯವರೆಗೆ ಒಟ್ಟು 6 ಸಭೆಗಳನ್ನು ನಡೆಸಲಾಗಿದೆ. ಎರಡು ಕಂತುಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ₨206 ಕೋಟಿ ನೀಡಿವೆ. ಸದಸ್ಯಕ್ಕೆ ಟ್ಯಾಂಕ್‌ಮೊಹಲ್ಲಾದಲ್ಲಿ ಪಾರ್ಕ್‌ ಅಭಿವೃದ್ಧಿ, ನೆಹರು ಕ್ರೀಡಾಂಗಣ ಆವರಣ ಅಂದ ಹೆಚ್ಚಿಸಲು ಕಾಮಗಾರಿ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಸ್‌ನಿಲ್ದಾಣದ ಮುಂದಿನ ಅಶೋಕ ವೃತ್ತದಿಂದ ಆಲ್ಕೊಳ ವೃತ್ತದವರೆಗಿನ 2.8 ಕಿ.ಮೀ. ರಸ್ತೆ ಅಭಿವೃದ್ಧಿಗೆ ₨ 26 ಕೋಟಿ ಮೀಸಲಿಡಲಾಗಿದೆ. ಇಷ್ಟೊಂದು ಹಣ ಖರ್ಚು ಮಾಡುವ ಅಗತ್ಯವಿದೆಯಾ? ಅಲ್ಲದೇ ಅ ಮಾರ್ಗ ಹೆದ್ದಾರಿ ವ್ಯಾಪ್ತಿಗೆ ಬರುತ್ತದೆ. ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿ ಎರಡು ವರ್ಷವಾದರೂ ಸೂಕ್ತ ಯೋಜನೆ ರೂಪಿಸಿಲ್ಲ. ಅಗತ್ಯ ಇರುವ ಭಾಗಗಳಿಗೆ ಅನುದಾನ ಮೀಟಲಿಟ್ಟಿಲ್ಲ ಎಂದು ಪಾಲಿಕೆ ಸದಸ್ಯ ಹರಿಗೆ ರಾಜಶೇಖರ್ ಬೇಸರ ವ್ಯಕ್ತಪಡಿಸಿದರು.

ಮೊದಲ ಹಂತದಲ್ಲಿ ₨ 279.67 ಕೋಟಿಗೆ ಯೋಜನೆ ರೂಪಿಸಲಾಗಿದೆ. ರಸ್ತೆಗಳಿಗಾಗಿ ₨ 75 ಕೋಟಿ, ಕನ್ಸರ್ವೆನ್ಸಿಗಳ ಅಭಿವೃದ್ಧಿಗೆ ₨ 1.80 ಕೋಟಿ, ಪಾರ್ಕ್‌ಗಳ ಅಭಿವೃದ್ಧಿ, ಸೋಲಾರ್ ದೀಪಗಳ ಅಳವಡಿಕೆ, ಬಸ್‌ ಟರ್ಮಿನಲ್‌ಗಳು, ಡಿಜಿಟಲ್‌ ಲೈಬ್ರರಿಗಳಿಗಾಗಿ ಒಟ್ಟು ₨ 77.73 ಕೋಟಿ ನಿಗದಿ ಮಾಡಲಾಗಿದೆ. ತುಂಗಾ ನಾಲೆಯ ಮೇಲೆ ₨ 256.56 ಕೋಟಿ ವೆಚ್ಚದಲ್ಲಿ ಸೋಲಾರ್ ಅಳವಡಿಕೆ ಎಂದು ಎಂಜಿನಿಯರ್‌ಗಳು ವಿವರ ನೀಡಿದರು.

ಪಾಲಿಕೆ ಉಪಮೇಯರ್ ವಿಜಯಲಕ್ಷ್ಮಿ ಪಾಟೀಲ, ಆಯುಕ್ತ ಟಿ.ವಿ. ಪ್ರಕಾಶ್, ಆಡಳಿತ ಪಕ್ಷದ ನಾಯಕ ಎಚ್‌. ಫಾಲಾಕ್ಷಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.