ADVERTISEMENT

ಅಂಗವಿಕಲರ ಮಾರ್ಗದರ್ಶಿ

ಡಾ.ನಾಗರಾಜಪ್ಪ
Published 3 ಡಿಸೆಂಬರ್ 2017, 6:18 IST
Last Updated 3 ಡಿಸೆಂಬರ್ 2017, 6:18 IST
ಸುಧೀಂದ್ರ ಕುಮಾರ್
ಸುಧೀಂದ್ರ ಕುಮಾರ್   

ವೈ.ಎನ್.ಹೊಸಕೋಟೆ: ಹೋಬಳಿಯ ಸಿದ್ಧಾಪುರ ಗ್ರಾಮದ ಕೆ.ಎನ್.ಸುಧೀಂದ್ರಕುಮಾರ ತಾಲ್ಲೂಕಿನಲ್ಲಿ ಅಂಗವಿಕಲರ ಮಾರ್ಗದರ್ಶಿ ಎಂದೇ ಹೆಸರು ವಾಸಿಯಾಗಿದ್ದಾರೆ. ಅಂಧರಾಗಿರುವ ಸುಧೀಂದ್ರ  13 ವರ್ಷಗಳಿಂದ ಅಂಗವಿಕಲರ ಪುನಶ್ಚೇತನಕ್ಕೆ ಶ್ರಮಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿರುವ ಅಂಗವಿಕಲರ ಗಣತಿ, ಸಮಸ್ಯೆಗಳನ್ನು ಗುರುತಿಸುವುದು, ಪರಿಹಾರಕ್ಕೆ ಸಲಹೆ ಸೂಚನೆ, ಸಮುದಾಯದ ಸಬಲೀಕರಣಕ್ಕೆ ತರಬೇತಿ, ಸರ್ಕಾರದಿಂದ ದೊರೆಯುವ ಸವಲತ್ತುಗಳ ಮಾಹಿತಿ ನೀಡುವುದು, ಹಕ್ಕು ರಕ್ಷಣೆ ಗಮನ ನೀಡುವುದು, ಅಂಗವಿಕಲರ ಪರವಾಗಿ ಹೋರಾಟಗಳನ್ನು ರೂಪಿಸುವುದು... ಹೀಗೆ ಮುಂದುವರಿಯುತ್ತದೆ ಅವರ ಕೆಲಸಗಳು.

ಸಂಘಟನೆ, ಹೋರಾಟ, ತರಬೇತಿ ಮತ್ತು ಮಾರ್ಗದರ್ಶನದ ಮೂಲಕ ಅಂಗವಿಕಲರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಕೃಷಿ ಮತ್ತು ವ್ಯಾಪಾರಿ ಕುಟುಂಬದ ಸುಧೀಂದ್ರ ಕುಮಾರ್, ಕರ್ನಾಟಕ ಮುಕ್ತವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ADVERTISEMENT

ಆರಂಭದಲ್ಲಿ ನರೇಂದ್ರ ಫೌಂಡೇಷನ್‌ನಲ್ಲಿ ಕೆಲಸ ಮಾಡಿದರು. ನಂತರ ಸಂಪನ್ಮೂಲ ವ್ಯಕ್ತಿಯಾಗಿ ಸಮುದಾಯ ಆಧಾರಿತ ಪುನಶ್ಚೇತನ ಕಾರ್ಯಕರ್ತರಾಗಿ ಹೋಬಳಿ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸಿದರು. ತಾಲ್ಲೂಕು ಮಟ್ಟದಲ್ಲಿ ಅಂಗವಿಕಲರ ಸಂಘಟನೆ ಪ್ರಾರಂಭಿಸಿದರು.

ಪ್ರಸ್ತುತ ಸಮುದಾಯ ಆಧಾರಿತ ಪುನಶ್ಚೇತನ ವೇದಿಕೆ (ಸಿಬಿಆರ್ ಫೋರಂ)ಯಲ್ಲಿ ರಾಷ್ಟ್ರಮಟ್ಟದ ತರಬೇತಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. 20 ರಾಜ್ಯಗಳಲ್ಲಿ ವಿವಿಧ ಹಂತದ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ. ಅಂಗವಿಕಲರ ರಾಷ್ಟ್ರ ಮಟ್ಟದ ಸಭೆಗಳಲ್ಲಿ ಮಾರ್ಗದರ್ಶಕರಾಗಿ ಸಲಹೆ ಸೂಚನೆಗಳನ್ನು ನೀಡುತ್ತ ಅವರ ಹಕ್ಕುಗಳ ರಕ್ಷಣೆಗೆ ಹೋರಾಡುತ್ತಿದ್ದಾರೆ.

ಸುಧೀಂದ್ರ ಕುಮಾರ್ ಅವರ ಫಲಾಪೇಕ್ಷೆ ಇಲ್ಲದ ಕೆಲಸಕ್ಕೆ 2006 ರಲ್ಲಿ ಪಾವಗಡ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, 2010 ರಲ್ಲಿ  ರಾಜ್ಯಮಟ್ಟದ ಮಾರ್ಗದರ್ಶಿ ಪ್ರಶಸ್ತಿ, 2016 ರಲ್ಲಿ ಅಂಗವಿಕಲರ ಸಬಲೀಕರಣ ಇಲಾಖೆಯಿಂದ ರಾಜ್ಯಮಟ್ಟದ ವೈಯುಕ್ತಿಕ ಸಾಧನೆ ಪ್ರಶಸ್ತಿಗಳು ದೊರೆತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.