ADVERTISEMENT

ಅತಂತ್ರ ಸ್ಥಿತಿಯಲ್ಲಿ ಮುಖ್ಯಮಂತ್ರಿ: ಟೀಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 7:29 IST
Last Updated 22 ಅಕ್ಟೋಬರ್ 2017, 7:29 IST

ಕುಣಿಗಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಎಂ.ಪರಮೇಶ್ವರ್ ಇಬ್ಬರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಚುನಾವಣೆ ಐದು ತಿಂಗಳಿದ್ದರೂ, ತಮ್ಮ ಕ್ಷೇತ್ರಗಳ ಬಗ್ಗೆ ಇನ್ನೂ ಖಚಿತ ಪಡಿಸದಿರುವುದು ಅವರ ಸರ್ಕಾರದ ಅಭದ್ರತೆ ತೋರಿಸುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ತಿಳಿಸಿದರು. ತಾಲ್ಲೂಕಿನ ಗಿಡದ ಕೆಂಚನಹಳ್ಳಿಯಲ್ಲಿ ತಾವರೆಕೆರೆ ಮತ್ತು ಚೌಡನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರವೂ ವರುಣಾ ಕ್ಷೇತ್ರವೋ ಸ್ಪಷ್ಟಪಡಿಸುತ್ತಿಲ್ಲ. ಪರಮೇಶ್ವರ್ ಸಹ ತಮ್ಮ ಕೊರಟಗೆರೆ ಕ್ಷೇತ್ರದ ಬಗ್ಗೆ ಸ್ಪಷ್ಟ ಪಡಿಸುತ್ತಿಲ್ಲ. ಅವರೇ ಗೊಂದಲ ಪರಿಸ್ಥಿತಿಯಲ್ಲಿದ್ದಾರೆ. ಪಕ್ಷದಲ್ಲಿ ಆಂತರಿಕ ಕಿತ್ತಾಟದಿಂದ ಬೇಸತ್ತು ಹೊರಬರಲು ಕಾಯುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. 2018ರ ಜನವರಿ ಕಳೆದ ಮೇಲೆ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯಾಗಲಿದೆ’ ಎಂದರು.

ಕೇಂದ್ರ ಸರ್ಕಾರದ ಅನುದಾನ ಬಳಕೆ ಮಾಡಿ ರಾಜ್ಯದ ಅಭಿವೃದ್ಧಿ ಮಾಡಲು ಕಾಂಗ್ರೆಸ್ ವಿಫಲವಾಗಿದೆ. ಕೇಂದ್ರ ಸರ್ಕಾರ 1ಲಕ್ಷ ಮನೆ ಮಂಜೂರು ಮಾಡಿ ತಲಾ ₹ 7ಲಕ್ಷ ಸಹಾಯಧನ ನೀಡಿದ್ದರೂ ರಾಜ್ಯ ಸರ್ಕಾರ 10 ಸಾವಿರ ಮನೆ ಮಂಜೂರೂ ಮಾಡಿಲ್ಲ ಎಂದು ಆರೋಪಿಸಿದರು.

ADVERTISEMENT

ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಕುಮಾರ್ ಮಾತನಾಡಿ, ‘ಶಾಸಕರು ತಮ್ಮ ಮಕ್ಕಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಾ ಅಭಿವೃದ್ಧಿ ಕಾರ್ಯಗಳನ್ನು ಮರೆತ್ತಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾದರೂ ಪಟ್ಟಣದ ದೊಡ್ಡಕೆರೆ, ಬೇಗೂರು, ಮಾರ್ಕೋನಹಳ್ಳಿ ಮಂಗಳಾ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ವಿಫಲರಾಗಿದ್ದಾರೆ’ ಎಂದರು.

‘ಸಂಸದ ಡಿ.ಕೆ.ಸುರೇಶ್, ತಾಲ್ಲೂಕಿಗೆ ಹರಿಯುವ ಹೇಮಾವತಿ ನೀರನ್ನು ಹುತ್ರಿದುರ್ಗ ಹೋಬಳಿಗಳಿಗೆ ಪೈಪ್‌ಲೈನ್ ಮೂಲಕ ಹರಿಸಿ, ಮಾಗಡಿ ತಾಲ್ಲೂಕಿಗೆ ಕಾಲುವೆ ಮೂಲಕ ಹರಿಸಲು ಸಂಚು ಮಾಡುತ್ತಿದ್ದಾರೆ. ಹುತ್ರಿದುರ್ಗ ಹೋಬಳಿಯ 25 ಕೆರೆಗಳಿಗೆ ನೀರು ತುಂಬಿಸದೆ ಮಾಗಡಿ ತಾಲ್ಲೂಕಿಗೆ ಸಾಗಿಸಲು ತಂತ್ರ ಮಾಡುತ್ತಿದ್ದಾರೆ’ ಎಂದರು.

ಡಾ.ರಂಗನಾಥ್‌ ಅವರನ್ನು ಶಾಸಕರನ್ನಾಗಿ ಮಾಡಲು ಸಂಸದರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದ್ದಕ್ಕಾಗಿಯೇ ಕೃಷ್ಣಕುಮಾರ್ ಜೆಡಿಎಸ್ ಹೋಗುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಅವರ ಮಕ್ಕಳೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ, ಬಿಜೆಪಿಯಲ್ಲಿ ಮುಂದುವರಿದು ಸ್ಪರ್ಧಿಸುವುದಾಗಿ ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿಗಣೇಶ್, ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ, ಮುಖಂಡರಾದ ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ದಿನೇಶ್, ಕೆ.ಎಸ್.ಬಲರಾಂ, ಚಿಕ್ಕರಾಮಣ್ಣ, ಅರುಣ್ ಕುಮಾರ್, ಗೌರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.