ADVERTISEMENT

ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸಲು ತಡೆ

ದಲಿತರ ಜಿಲ್ಲಾ ಮಟ್ಟದ ಕುಂದು–ಕೊರತೆ ಸಭೆಯಲ್ಲಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 10:16 IST
Last Updated 31 ಜುಲೈ 2014, 10:16 IST

ತುಮಕೂರು: ಅರಣ್ಯ ಭೂಮಿ ಮರು ಪರಿ­ಶೀಲನೆಗೆ ಸರ್ಕಾರ ಆದೇಶ ನೀಡಿದ್ದು ಅಲ್ಲಿ­ಯ­ವರೆಗೂ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿ­ಕೊಂಡಿ­ರುವ, ಬೇಸಾಯ ಮಾಡುತ್ತಿರುವ ದಲಿತರನ್ನು ಒಕ್ಕಲೆಬ್ಬಿಸಬಾರದೆಂದು ಅರಣ್ಯ ಇಲಾಖೆಗೆ ಜಿಲ್ಲಾಧಿಕಾರಿ ಕೆ.ಎಸ್‌.ಸತ್ಯಮೂರ್ತಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣ­ದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ದಲಿತರ ಕುಂದು–ಕೊರತೆ ಸಭೆಯಲ್ಲಿ ಮಾತ­ನಾಡಿದರು.

ಅರಣ್ಯ ಇಲಾಖೆ ದಲಿತರನ್ನು ಒಕ್ಕಲೆ­ಬ್ಬಿ-ಸುತ್ತಿದೆ. ಬೇಸಾಯ ಮಾಡುತ್ತಿರುವ ಭೂಮಿಗೆ ಹೊಸದಾಗಿ ಗಿಡಗಳನ್ನು ನೆಡುತ್ತಿದೆ. ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ದಲಿತರಿಗೆ ಹಕ್ಕು ಪತ್ರ ನೀಡಬೇಕೆಂದು ದಲಿತ ಮುಖಂಡರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಜಿಲ್ಲಾ­ಧಿಕಾರಿ, ಈ ಹಿಂದೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಾಗಿತ್ತು. ಆದರೆ ಎಲ್ಲೆಲ್ಲಿ ಅರಣ್ಯವಿದೆ ಎಂಬುದು ವರ್ಗೀಕರಿಸಿರ­ಲಿಲ್ಲ, ಇದರಿಂದಾಗಿ ಸಮಸ್ಯೆ ಉದ್ಭವಿಸಿದೆ.

ಸರ್ಕಾರ ಹೊಸದಾಗಿ ಆದೇಶ ಹೊರಡಿಸಿದ್ದು ಅರಣ್ಯ ಭೂಮಿ ಗುರುತಿಸುವಂತೆ ಸೂಚಿಸಿದೆ. ಗಿಡ–ಮರಗಳಿಲ್ಲದಿದ್ದರೂ ಅರಣ್ಯ ಭೂಮಿ ಎಂದು ಗುರುತಿಸಿರುವ ಭೂಮಿಯನ್ನು ಅರಣ್ಯ ವ್ಯಾಪ್ತಿಯಿಂದ ಕೈಬಿಡಲಾಗುವುದು. ಜಿಲ್ಲಾ­ಧಿ­ಕಾರಿ­­ಯನ್ನೂ ಒಳಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಜಂಟಿ ತಂಡ ಪರಿಶೀಲಿಸಿ ಭೂಮಿಯನ್ನು ವರ್ಗೀಕರಿಸಲಿದೆ ಎಂದು ಹೇಳಿದರು.

ಇಒಗಳಿಗೆ ಷೋಕಾಸ್‌ ನೋಟಿಸ್‌: ಜಿಲ್ಲಾ ಮಟ್ಟದ ಕುಂದು–ಕೊರತೆ ಸಭೆಯ ಮುಂದಿಟ್ಟಿದ್ದ ಸಮಸ್ಯೆ, ಪ್ರಶ್ನೆಗಳಿಗೆ ಮಾಹಿತಿ ನೀಡದ ಶಿರಾ, ತಿಪಟೂರು ಹೊರತುಪಡಿಸಿ ಉಳಿದ ತಾಲ್ಲೂಕು­ಗಳ ಇಒಗಳಿಗೆ ಷೋಕಾಸ್ ನೋಟಿಸ್‌ ನೀಡು­ವುದಾಗಿ ಜಿ.ಪಂ ಮುಖ್ಯ ಕಾರ್ಯ­ನಿರ್ವ­ಹಣಾ­ಧಿಕಾರಿ ಕೆ.ಎನ್‌.ಗೋವಿಂದರಾಜು ತಿಳಿಸಿದರು.

ಇದಕ್ಕೂ ಮುನ್ನ ಈ ವಿಷಯ ಸಭೆಯಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಕುಂದು–ಕೊರತೆ ಸಭೆ ನಡೆದು 8 ತಿಂಗಳಾಗಿವೆ. 8 ತಿಂಗಳ ಹಿಂದೆ ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಕಾಟಾಚಾರದ ಸಭೆಯಲ್ಲಿ ಭಾಗ­ವಹಿಸು­ವುದಿಲ್ಲ, ಸಭೆ ಬಹಿಷ್ಕರಿಸುತ್ತೇವೆ ಎಂದು ದಲಿತ ಮುಖಂಡರು ಏರಿದ ಧ್ವನಿಯಲ್ಲಿ ಹೇಳಿದರು.

ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಅವರ ಈ ವರ್ತನೆ ಮುಂದು­ವರಿ­ಯಲಿದೆ ಎಂದು ಹೇಳಿದರು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಜಿಲ್ಲಾಧಿಕಾರಿ ವಿರುದ್ಧವೂ ಧಿಕ್ಕಾರ ಕೂಗಿದರು. ನಂತರ ಎಲ್ಲರನ್ನೂ ಜಿಲ್ಲಾ­ಧಿಕಾರಿ ಸಮಧಾನಗೊಳಿಸಿದರು. ಇಒಗಳಿಗೆ ಶೋಕಾಸ್‌ ನೋಟಿಸ್‌ ನೀಡುವುದಾಗಿ ಸಿಇಒ ಪುನರುಚ್ಚರಿಸಿದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾದಾರ ಶಿವಯ್ಯ ಮಾತನಾಡಿ, ಅಧಿಕಾರಿ­ಗಳನ್ನು ರಕ್ಷಿಸುವ ಕೆಲಸ ಮಾಡಬೇಡಿ. ಬಡ ದಲಿತರಿಗೆ ಒಳ್ಳೆಯದಾಗುವ ಕೆಲಸ ಮಾಡಿ. ಮನಸ್ಸಿಗೆ  ನೋವು ತರುವ ಕೆಲಸ ಬೇಡ ಎಂದರು. ಇದಕ್ಕೆ ದಲಿತ ಪಂಚಾಯಿತಿಯ ಪ್ರಸನ್ನ ಕುಮಾರ್‌ ಧ್ವನಿಗೂಡಿಸಿದರು.

ಕೊರಟಗೆರೆ ತಾ.ಪಂ.ನಲ್ಲಿ ಶೇ 22ರ ಅನು­ದಾನವನ್ನು ಶಾಲಾ ಕ್ರೀಡಾಂಗಣಕ್ಕೆ ಬಳಸಿ­ಕೊಂಡಿ­ರುವ ಪ್ರಕರಣದ ತನಿಖೆ ನಡೆಸುವುದಾಗಿ ಸಿಇಒ ಭರವಸೆ ನೀಡಿದರು. ಹೆಗ್ಗೆರೆಯಲ್ಲಿ ಕಟ್ಟಡ ಕಟ್ಟದೆ ಹಣ ಡ್ರಾ ಮಾಡಿರುವ ಪ್ರಕರಣದ ತನಿಖೆ ನಡೆಸಿ ಪಿಡಿಒ ಅಮಾನತುಗೊಳಿಸುವುದಾಗಿ ತಿಳಿಸಿದರು.

ದಲಿತರು ದಶಕಗಳ ಕಾಲದಿಂದ ಉಳುಮೆ ಮಾಡಿರುವ ಭೂಮಿಗಳಿಗೆ ಹಕ್ಕುಪತ್ರ ನೀಡುತ್ತಿಲ್ಲ. ಬಗರ್‌ ಹುಕುಂ ಸಮಿತಿಯಲ್ಲಿ ದಲಿತರಿಗೆ ಭೂಮಿ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಕೆಲವರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಶಿರಾ– ಮಧುಗಿರಿಯಲ್ಲಿ ಬಗರ್‌ಹುಕುಂ ಸಮಿತಿ ರಚನೆ­ಯಾಗಿದೆ. ಉಳಿದ ತಾಲ್ಲೂಕುಗಳಿಂದ ಸಮಿತಿಯ ಸದಸ್ಯರ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ದಲಿತರಿಗೆ ಹಕ್ಕು ಪತ್ರ ನೀಡುವ ಸಂಬಂಧ ಶೀಘ್ರ ಕ್ರಮ ಕೈಗೊಳ್ಳುವಂತೆ ಎಲ್ಲ ಬಗರ್‌ಹುಕುಂ ಸಮಿತಿಗಳಿಗೆ ಪತ್ರ ಬರೆಯುವು­ದಾಗಿ ತಿಳಿಸಿದರು.

ಸಭೆಯಲ್ಲಿ ನಿಟ್ಟೂರು ರಂಗಸ್ವಾಮಿ, ಬೆಲ್ಲದ­ಮಡು ಕಾಂತರಾಜು ಮತ್ತಿತರರು ಮಾತ­ನಾಡಿದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮಣ್‌ ಗುಪ್ತ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ, ಹೆಚ್ಚುವರಿ ಪೊಲೀಸ್‌ ವರಿಷ್ಠಾ­ಧಿಕಾರಿ ಲಕ್ಷ್ಮಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.