ADVERTISEMENT

‘ಆಧಾರ್’ ವಿತರಣೆಯಲ್ಲಿ ಜಿಲ್ಲೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 21 ಮೇ 2017, 10:24 IST
Last Updated 21 ಮೇ 2017, 10:24 IST

ತುಮಕೂರು: ‘ಆಧಾರ್ ಗುರುತಿನ ಚೀಟಿ  ವಿತರಿಸುವಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯು ಅಗ್ರ ಸ್ಥಾನದಲ್ಲಿದೆ’ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ‘ಆಧಾರ್’  ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ತುಮಕೂರು ಜಿಲ್ಲೆಯಲ್ಲಿ ಶೇ 100ಕ್ಕೆ 105ರಷ್ಟು ಸಾಧನೆಯಾಗಿದೆ. ಅಂದರೆ, ಬೆಂಗಳೂರು ಹಾಗೂ ಬೇರೆ ಕಡೆಯ ಶೇ 5ರಷ್ಟು ಮಂದಿ ಇಲ್ಲಿ ನೋಂದಣಿ ಮಾಡಿಸಿದ್ದಾರೆ. ಇದೇ ರೀತಿಯ ಸಾಧನೆ ನಿರಂತರ ಕಾಪಾಡಿಕೊಂಡು ಮುಂದುವರಿಯಬೇಕು’ ಎಂದು ಹೇಳಿದರು.

‘ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಗುರುತಿನ ಚೀಟಿ ಬಹುಮುಖ್ಯವಾಗಿದೆ. ಇದರ ವಿಶೇಷತೆಯನ್ನು ಮನವರಿಕೆ ಮಾಡಿಕೊಡಬೇಕು. ಆಧಾರ್ ಮೂಲಕ ಸರ್ಕಾರದ ಸೌಲಭ್ಯ ಕಲ್ಪಿಸಲು ಆಡಳಿತ ಯಂತ್ರಕ್ಕೆ ಹಾಗೂ ಸೌಲಭ್ಯ ಪಡೆಯುವ  ಜನರಿಗೆ ತುಂಬಾ ಅನುಕೂಲವಾಗಲಿದೆ’ ಎಂದರು.

ADVERTISEMENT

‘ಬೆಳೆ ಪರಿಹಾರ ಮೊತ್ತವನ್ನು ರೈತರ ಬ್ಯಾಂಕ್‌ ಖಾತೆಗೆ ನೇರ ಜಮಾ ಮಾಡಲು ಈಚೆಗೆ ರೈತರ ಆಧಾರ್ ಗುರುತಿನ ಚೀಟಿ ಸಹಕಾರಿಯಾಯಿತು. ಇದರಿಂದ ರೈತರಿಗೆ ತ್ವರಿತವಾಗಿ ಪರಿಹಾರ ಲಭಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.

‘ತಜ್ಞರು ಕಾರ್ಯಾಗಾರದಲ್ಲಿ ಕಲ್ಪಿಸುವ ಮಾಹಿತಿಯನ್ನು ದೈನಂದಿನ ಆಡಳಿತ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸೂಚಿಸಿದರು. ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿ) ಯೋಜನಾ ನಿರ್ದೇಶಕಿ ಉಷಾರಾಣಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೇಯಸ್, ರಘುವಂಶ ಇದ್ದರು.

ಆಧಾರ್ ಇಲ್ಲವೆಂಬ ಕಾರಣಕ್ಕೆ ಸೌಲಭ್ಯ ನಿರಾಕರಿಸುವಂತಿಲ್ಲ
‘ಆಧಾರ್ ಗುರುತಿನ ಚೀಟಿ ಇಲ್ಲ ಎಂಬ ಕಾರಣ ನೀಡಿ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ಕೊಡುವುದನ್ನು ಯಾವುದೇ ಕಾರಣಕ್ಕೂ ನಿರಾಕರಿಸುಂತಿಲ್ಲ. ಆಧಾರ್ ಗುರುತಿನ ಚೀಟಿ ಹೊಂದಿದ್ದರೆ ಸೌಲಭ್ಯ ಕಲ್ಪಿಸಲು ಆಡಳಿತಾತ್ಮಕವಾಗಿ ತ್ವರಿತ ಕೆಲಸ ಆಗುತ್ತವೆ ಎಂಬುದರ ಬಗ್ಗೆ ಅಧಿಕಾರಿಗಳು ತಿಳಿವಳಿಕೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.