ADVERTISEMENT

ಇನ್ನೊವೇಶನ್‌ ಯೂನಿವರ್ಸಿಟಿ ಆರಂಭಕ್ಕೆ ಸಿದ್ಧತೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 10:00 IST
Last Updated 26 ಜುಲೈ 2016, 10:00 IST

ತುಮಕೂರು: ಎಚ್‌ಎಂಟಿ ಕೈ ಗಡಿಯಾರ ಕಾರ್ಖಾನೆ ಸ್ಥಳದಲ್ಲಿ ಇನ್ನೊವೇಶನ್‌ ಯೂನಿವರ್ಸಿಟಿ ಆರಂಭಿಸಲು ಎಲ್ಲ ರೀತಿಯ ತಯಾರಿ ನಡೆದಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್‌ ತಿಳಿಸಿದರು.

ನಗರದ ಎಚ್ಎಂಎಸ್‌ ತಾಂತ್ರಿಕ ಕಾಲೇಜಿನಲ್ಲಿ ಸೋಮವಾರ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಸಹಯೋಗದಲ್ಲಿ ‘ನ್ಯಾನೋ ತಂತ್ರಜ್ಞಾನ’ ಕುರಿತು ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕಾರ್ಖಾನೆ ಇರುವ 125 ಎಕರೆ ಜಾಗದಲ್ಲಿ ಎಲ್ಲ ಜ್ಞಾನ ಮತ್ತು ತಂತ್ರಜ್ಞಾನವನ್ನು ಒಳಗೊಂಡ ಸಂಶೋಧನೆಗೆ ಒತ್ತು ನೀಡುವ ಬಗ್ಗೆ ನೀಲಿ ನಕಾಶೆ ಸಿದ್ಧಗೊಂಡಿದೆ ಎಂದರು.
ನಗರ ವೇಗವಾಗಿ ಬೆಳೆಯುತ್ತಿದೆ. ಪ್ರಸ್ತುತ 3000 ಹೆಕ್ಟೇರ್‌ನಲ್ಲಿ ವಿವಿಧ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. 8000 ಎಕರೆಯಲ್ಲಿ ನಿಮ್ಜ್ ಆರಂಭವಾಗುತ್ತಿದೆ. ನಿಮ್ಜ್‌ ಸ್ಥಾಪನೆ ಬಳಿಕ ತುಮಕೂರು ದೇಶದ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮಲಿದೆ. ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಕುಡಿಯುವ ನೀರು, ರಸ್ತೆ ಮತ್ತು ಸಾರಿಗೆ ಸಂಪರ್ಕ, ವಿದ್ಯುತ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ಕೈಗಾರಿಕೆ ಸ್ಥಾಪಿಸುವವರಿಗೆ ಒದಗಿಸಲು ಜಿಲ್ಲಾಡಳಿತ ಮುಂದಾಗಿದೆ. ಬೆಂಗಳೂರು ಹೊರತು ಪಡಿಸಿ ಕೈಗಾರಿಕೆ ಸ್ಥಾಪಿಸಲು ಇಚ್ಛಿಸುವವರಿಗೆ ತುಮಕೂರು ಸೂಕ್ತ ಆಯ್ಕೆಯಾಗಲಿದೆ ಎಂದು ತಿಳಿಸಿದರು.

ಎಚ್ಎಂಎಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಷಫಿ ಅಹಮದ್ ಮಾತನಾಡಿ, ಜಿಲ್ಲೆಯಲ್ಲಿ ಐಟಿ–ಬಿಟಿ ಪಾರ್ಕ್‌ ಆರಂಭಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸೀತಾರಾಂ ಉತ್ಸುಕರಾಗಿದ್ದಾರೆ ಎಂದರು.

ಸಂಪನ್ಮೂಲ ವ್ಯಕ್ತಿ ಡಾ.ಗುರುಮೂರ್ತಿ ಹೆಗಡೆ, ಡಾ.ಸಂತೋಷ, ಎಚ್‌ಎಂಎಸ್‌ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ.ಜೋಯಲ್ ಹೇಮಂತ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.