ADVERTISEMENT

ಉರುಳಿದ ಅಡಿಕೆ, ತೆಂಗಿನ ಮರಗಳು

​ಪ್ರಜಾವಾಣಿ ವಾರ್ತೆ
Published 15 ಮೇ 2017, 5:16 IST
Last Updated 15 ಮೇ 2017, 5:16 IST
ತುಮಕೂರಿನಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದಾಗ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಕಂಡು ಬಂದ ನೋಟ
ತುಮಕೂರಿನಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದಾಗ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಕಂಡು ಬಂದ ನೋಟ   

ಶಿರಾ: ತಾಲ್ಲೂಕಿನ ನ್ಯಾಯಗೆರೆ ಗ್ರಾಮದಲ್ಲಿ ಭಾನುವಾರ ಸಂಜೆ ಬಂದ ಮಳೆ, ಗಾಳಿಯಿಂದಾಗಿ ಅಪಾರ ನಷ್ಟ ಸಂಭವಿಸಿದೆ.

ನ್ಯಾಯಗೆರೆ ಗ್ರಾಮದಲ್ಲಿ ಮಳೆ ಗಾಳಿಗೆ ಅಡಿಕೆ ಮತ್ತು ತೆಂಗಿನ ಮರಗಳು ನೆಲಕಚ್ಚಿವೆ. ರೈತ ಮಹಾಲಿಂಗಪ್ಪ, ಮಹಾಲಕ್ಷ್ಮಿ, ಹನುಮಂತರಾಯಪ್ಪ, ಕೃಷ್ಣಪ್ಪ, ಮಹದೇವಪ್ಪ ಅವರಿಗೆ ಸೇರಿದ ಅಡಿಕೆ ಮತ್ತು ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ರಸ್ತೆ ಬದಿಯ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದೆ. ಇದೇ ಗ್ರಾಮದ ಗುರುಶಾಂತಪ್ಪ, ಮುದ್ದಪ್ಪ, ರಮೇಶ್, ಪುಟ್ಟಮ್ಮ ಅವರ ಮನೆ ಚಾವಣಿ ಶೀಟ್‌ಗಳು ಹಾರಿವೆ. ಮನೆಯಲ್ಲಿದ್ದ ಸಾಮಾನು ಮಳೆಯಲ್ಲಿ ತೋಯ್ದು ಹೋಗಿವೆ. ಅಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಾಕಿದ್ದ ಚಾವಣಿಯೂ ಗಾಳಿಗೆ ಹಾರಿವೆ. ಸೈಕಲ್ ಹಾಗೂ ದ್ವಿಚಕ್ರ ವಾಹನ ಜಖಂಗೊಂಡಿವೆ.

ನಗರದಲ್ಲಿ ಮಳೆ: ಶಿರಾ ನಗರದಲ್ಲಿಯೂ  ಮಳೆಯಾಗಿದೆ. ಬಿರುಗಾಳಿಯಿಂದಾಗಿ ದರ್ಗಾ ವೃತ್ತದಲ್ಲಿ ಅಂಗಡಿಯ ಮುಂದೆ ಹಾಕಿದ್ದ  ಶೀಟ್‌ಗಳು ಗಾಳಿಗೆ ಹಾರಿ ಹೋಗಿ ಆಟೊ ಮೇಲೆ ಬಿದ್ದಿವೆ.

ADVERTISEMENT

ನಿಸರ್ಗ ಡಾಬಾ ಬಳಿ ಹಾಕಿದ್ದ ಶೀಟ್ ಗಾಳಿಗೆ ಹಾರಿವೆ. ಮಳೆಗಿಂತ ಹೆಚ್ಚಾಗಿ ಗುಡುಗು, ಮಿಂಚು, ಗಾಳಿಯ ಅರ್ಭಟವೇ ಹೆಚ್ಚಾಗಿದ್ದು ಮಳೆ, ಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.

ತುಮಕೂರಿನಲ್ಲಿ ಧಾರಾಕಾರ ಮಳೆ: ಕಳೆದ ವಾರ ಸುರಿದು ಮರೆಯಾಗಿದ್ದ ಮಳೆ ಭಾನುವಾರ ಸಂಜೆ  ನಗರದಲ್ಲಿ ಧಾರಾಕಾರವಾಗಿ ಸುರಿಯಿತು. ಗಾಳಿಗೆ ಅಂಗಡಿ ಮುಂಗಟ್ಟುಗಳ ಬೋರ್ಡ್ ರಸ್ತೆಗೆ ಹಾರಿದವು.

ಗುಡುಗು, ಮಿಂಚಿನ ಆರ್ಭಟ ಜೋರಾಗಿತ್ತು. ನಗರದ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.