ADVERTISEMENT

ಎಲ್ಐಸಿ ಪ್ರತಿನಿಧಿಗಳ ಕಾಲ್ನಡಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 8:55 IST
Last Updated 8 ಸೆಪ್ಟೆಂಬರ್ 2017, 8:55 IST

ಶಿರಾ: ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಪ್ರತಿನಿಧಿಗಳು ಗುರುವಾರ ಕಾಲ್ನಡಿಗೆ ಜಾಥಾ ನಡೆಸಿ ತಹಶೀಲ್ದಾರ್ ಆರ್.ಗಂಗೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಶಿರಾ ಶಾಖೆ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ನಗರದ ದರ್ಗಾ ವೃತ್ತದಿಂದ ಜಾಥಾ ಪ್ರಾರಂಭಿಸಿ ಬಸ್‌ನಿಲ್ದಾಣದ ಬಳಿ ಹಾಗೂ ಪ್ರವಾಸಿ ಮಂದಿರದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.

ಸಂಘದ ಶಿರಾ ಶಾಖೆ ಅಧ್ಯಕ್ಷ ಎ.ಆರ್.ಶಾಂತರಾಜು ಮಾತನಾಡಿ, ‘ಕಳೆದ ಎರಡು ವರ್ಷದಿಂದ ತಾಲ್ಲೂಕಿಗೆ ಒಂದು ಹನಿ ಹೇಮಾವತಿ ನೀರು ಸಹ ಹರಿದು ಬಂದಿಲ್ಲ. ಈಗ ಜಿಲ್ಲೆಯ ಇತರೇ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಯುತ್ತಿದ್ದರು ಸಹ ತಾಲ್ಲೂಕಿಗೆ ಇನ್ನೂ ಸಹ ಹೇಮಾವತಿ ನೀರು ಬಂದಿಲ್ಲ.

ADVERTISEMENT

ಶಿರಾ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಹ ಪರದಾಡುವಂತಾಗಿದೆ. ತಕ್ಷಣ ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ಹರಿಸುವಂತೆ’ ಒತ್ತಾಯಿಸಿದರು.

ಸಂಘದ ಶಿರಾ ಶಾಖೆಯ ಉಪಾಧ್ಯಕ್ಷ ಜೆ.ಮುಸ್ತಾಕ್, ಕಾರ್ಯದರ್ಶಿ ಎಚ್.ಎನ್.ಜಗದೀಶ್, ಬಿ.ಪುಟ್ಟಸ್ವಾಮಿ, ಎಸ್.ರಾಜಣ್ಣ, ಜಿ.ಶಿವರಾಜಯ್ಯ, ಎಚ್.ಟಿ.ಶ್ರೀಧರ್, ಸಕ್ಕರೆ ನಾಗರಾಜು, ಬಾಲಾಜಿ ನಾಯ್ಕ, ಎಚ್.ಮೋಹನ್ ಕುಮಾರ್, ಜಯಮ್ಮ, ಪುಷ್ಪಲತಾ, ಸವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.