ADVERTISEMENT

ಕಾರ್ಮಿಕರ ಹಿತ ಕಾಯಲು ವಿಫಲ: ಟೀಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 9:13 IST
Last Updated 16 ಏಪ್ರಿಲ್ 2014, 9:13 IST

ತುಮಕೂರು: ಶೇ 33ರಷ್ಟು ಮಹಿಳಾ ಮೀಸಲಾತಿ ಕಾನೂನು ರೂಪಿಸಲು ಕಾಂಗ್ರೆಸ್‌, ಬಿಜೆಪಿ ಸರ್ಕಾರ ವಿಫಲ­ವಾಗಿದೆ ಎಂದು ಅಖಿಲ ಭಾರತ ಮಹಿಳಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷೆ ಎ.ಜ್ಯೋತಿ ಆರೋಪಿಸಿದರು.

ಚುನಾವಣೆ ಸಂದರ್ಭದಲ್ಲಿ ಮಾತ್ರ ಮಹಿಳೆಯರ ಪರ ಮಾತನಾಡುವ ಬಿಜೆಪಿ, ನೈತಿಕ ಪೊಲೀಸ್‌ಗಿರಿ ವಿರುದ್ಧ ಕ್ರಮಕೈಗೊಳ್ಳಲಿಲ್ಲ. ರಕ್ತಹೀನತೆಯಿಂದ ಹೆಚ್ಚು ಮಹಿಳೆಯರು ಗುಜರಾತ್‌ನಲ್ಲಿ ಸಾಯುತ್ತಿದ್ದು, ಇದರಲ್ಲಿ 9ನೇ ಸ್ಥಾನದಲ್ಲಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೂಲಿ ಕಾರ್ಮಿಕರ ಪರ ಬಿಜೆಪಿ, ಕಾಂಗ್ರೆಸ್‌ ಸರ್ಕಾರಗಳು ಕಾರ್ಯ ನಿರ್ವಹಿಸಲಿಲ್ಲ. ಬಗರ್‌ಹುಕುಂ ಜಮೀನಿನ ಹಕ್ಕನ್ನು ರೈತರಿಗೆ ನೀಡಿಲ್ಲ. ಬಾಲಸುಬ್ರಮಣ್ಯಂ ವರದಿಯಲ್ಲಿರುವ ಜಮೀನು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲು ಯಾವುದೇ ಸರ್ಕಾರ ಮುಂದಾಗಿಲ್ಲ ಎಂದು ಅಖಿಲ ಭಾರತ ಕೂಲಿ ಕಾರ್ಮಿಕರ ಸಂಘಟನೆಯ ರಾಜ್ಯ ಸಂಚಾಲಕ ಡಾ.ಕೆ.ಎಸ್‌.ಜನಾರ್ದನ್‌ ದೂರಿದರು.

ಅಮೆರಿಕದ ಅಧ್ಯಕ್ಷೀಯ ಮಾದರಿ­ಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವ ಬಿಜೆಪಿ ಪ್ರಜಾ­ಪ್ರಭುತ್ವವನ್ನು ಅರ್ಥ ಮಾಡಿಕೊಂಡಂ­ತಿಲ್ಲ. ಸಬ್ಸಿಡಿ ಬಿಡುಗಡೆ ಮಾಡದೆ ರೈತರ ಹೋರಾಟಕ್ಕೆ ಕಾರಣವಾಗಿದ್ದು ಕಾಂಗ್ರೆಸ್‌ ಸರ್ಕಾರ. ಎರಡೂ ಪಕ್ಷ­ಗಳನ್ನು ತಿರಸ್ಕರಿಸಿ ಹೋರಾಟದ ರಾಜ­ಕಾರಣಕ್ಕೆ ಬೆಂಬಲ ನೀಡಲು ಸಿಪಿಐ ಬೆಂಬಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್‌, ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಂಬಲಿಸುವ ಅವಶ್ಯಕತೆ ಇದೆ. ಬಿಜೆಪಿ, ಕಾಂಗ್ರೆಸ್‌ ಸರ್ಕಾರಗಳು ಸರ್ಕಾರಿ ಹುದ್ದೆ ಭರ್ತಿಮಾಡಲು ಕ್ರಮಕೈಗೊಳ್ಳದೆ ಇರುವುದರಿಂದ ಲಕ್ಷಾಂತರ ವಿದ್ಯಾ­ವಂತರು ನಿರುದ್ಯೋಗಿಗಳಾಗಿದ್ದಾರೆ ಎಂದು ಅಖಿಲ ಭಾರತ ಯುವಜನ ಫೆಡರೇಷನ್‌ ರಾಜ್ಯ ಕಾರ್ಯದರ್ಶಿ ಎಸ್‌.ಮೋನಪ್ಪ ತಿಳಿಸಿದರು, ಪರ್ಯಾಯ ರಾಜಕಾರಣಕ್ಕೆ ಬೆಂಬಲ ನೀಡಲು ಸಿಪಿಐ ಬೆಂಬಲಿಸುವಂತೆ ಕೋರಿದರು.

ಎಐವೈಎಫ್‌ ರಾಜ್ಯ ಉಪಾಧ್ಯಕ್ಷ ವಾಸುದೇವ್‌ ಕುಮಾರ್‌, ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.