ADVERTISEMENT

ಕುಡಿಯಲು ಆಂಧ್ರದಿಂದ ನೀರು ತರುವ ಗ್ರಾಮಸ್ಥರು

ಪಾವಗಡ ತಾಲ್ಲೂಕಿನ ಕೊಂಡಾಪುರ ಗಡಿ ಗ್ರಾಮದ ಕಥೆ–ವ್ಯಥೆ; ವಾರಕ್ಕೆ ನಾಲ್ಕು ಟ್ಯಾಂಕರ್ ನೀರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:04 IST
Last Updated 18 ಏಪ್ರಿಲ್ 2017, 6:04 IST
ಪಾವಗಡ: ‘ಕುಡಿಯೋಕೆ ನೀರಿಲ್ದೆ ಸಾಯೋ ಸ್ಥಿತಿ ಬಂದೈತೆ. ಮೂರ್ ತಿಂಗಳಿಂದ ಇಡೀ ದಿವ್ಸ ನೀರ್ ತರೋದೆ ದೊಡ್ಡ ಕೆಲ್ಸ. ಯುಗಾದಿ ಹಬ್ಬದ ದಿವ್ಸಾನು ನೀರಿಲ್ದೆ ಊರಾಗೆ ಯಾರೂ ಸ್ನಾನ ಮಾಡ್ಲಿಲ್ಲ’. 
 
ಇದು ತಾಲ್ಲೂಕಿನ ಅರಸೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಗ್ರಾಮ ಕೊಂಡಾಪುರದ ಮಹಿಳೆಯರ ಅಳಲು. ಗ್ರಾಮದಲ್ಲಿ  300 ಜನ ಸಂಖ್ಯೆಯಿದೆ. ಆಂಧ್ರಕ್ಕೆ ಹೊಂದಿಕೊಂಡಿರುವ ಗ್ರಾಮ ಸಂಪೂರ್ಣ ನಿರ್ಲಕ್ಷ್ಯಕ್ಕೀಡಾಗಿದೆ. ಮೂರು ತಿಂಗಳಿಂದ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. 
 
‘ಮೂರು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.  ಒಂದು ಕೊಳವೆ ಬಾವಿಯಲ್ಲಿ ಸಣ್ಣದಾಗಿ  ನೀರು ಬರುತ್ತಿದೆ. ಇದು ಯಾವುದಕ್ಕೂ ಸಾಲದು. ಹೀಗಾಗಿ ಮಹಿಳೆಯರು ಆಂಧ್ರದ ಚಿಕ್ಕನಡುಕು, ಕಾಮನಹಟ್ಟಿ, ಅರಸೀಕೆರೆಯಿಂದ ನೀರು ತರುತ್ತಿದ್ದಾರೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
 
‘ಪಂಚಾಯಿತಿ ವತಿಯಿಂದ ವಾರಕ್ಕೆ ಮೂರರಿಂದ ನಾಲ್ಕು ಟ್ಯಾಂಕರ್ ನೀರು ಪೂರೈಸಲಾಗುತ್ತದೆ. ಆದರೆ  ಟ್ಯಾಂಕರ್ ನೀರು ಸಾಕಾಗುತ್ತಿಲ್ಲ. ಹೊಲ, ಗದ್ದೆ, ತೋಟಗಳಲ್ಲಿನ ಕೊಳವೆ ಬಾವಿಗಳು ಬತ್ತಿ ಹೋಗಿವೆ.

ತೋಟಗಳಿಂದ ನೀರು ತರಲು ರೈತರು ವಿರೋಧಿಸುತ್ತಾರೆ. ನೀರಿಲ್ಲದೆ ತೋಟ ಒಣಗಿದೆ, ನಮಗೇ ನೀರು ಸಾಕಾಗುತ್ತಿಲ್ಲ ಎಂದು ತಡೆ ಹಾಕುತ್ತಾರೆ’ ಎನ್ನುತ್ತಾರೆ ಗ್ರಾಮಸ್ಥರು.
 
‘ವಾಹನ ಸೌಲಭ್ಯ ಇರುವವರು ಸುಲಭವಾಗಿ ಬೇರೆ ಗ್ರಾಮಗಳಿಂದ ನೀರು ತರುತ್ತಾರೆ. ಆದರೆ ಬಡ ಜನರು ಅನಿವಾರ್ಯವಾಗಿ ಕಾಲ್ನಡಿಗೆಯಲ್ಲಿ ಹೋಗಿ ನೀರು  ಹೊತ್ತು ತರಬೇಕು. ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂಬುದು ಗ್ರಾಮಸ್ಥರ ದೂರು.
 
‘ಕೊಳವೆ ಬಾವಿ ಕೊರೆಸಿ ಗ್ರಾಮಕ್ಕೆ ನೀರು ಸರಬರಾಜು ಮಾಡಬೇಕು. ಸ್ಥಗಿತಕೊಂಡಿರುವ ಶುದ್ಧೀಕರಣ ಘಟಕ ಆರಂಭಿಸಬೇಕು’ ಎಂದು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.