ADVERTISEMENT

ಕುಡಿಯುವ ನೀರಿಗೆ ₹ 350 ಕೋಟಿ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 10:44 IST
Last Updated 3 ಸೆಪ್ಟೆಂಬರ್ 2015, 10:44 IST

ತಿಪಟೂರು: ತಾಲ್ಲೂಕಿನ 321 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸುಮಾರು ₨ 350 ಕೋಟಿ ವೆಚ್ಚದ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ತಾಲ್ಲೂಕಿನ ಗುರುಗದಹಳ್ಳಿಯಲ್ಲಿ ಸುತ್ತಲಿನ 16 ಗ್ರಾಮಗಳಿಗೆ ಸಂಬಂಧಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅಂದಾಜು ₨ 6.67 ಕೋಟಿ ವೆಚ್ಚದ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

  ಚನ್ನರಾಯಪಟ್ಟ ಘನ್ನಿಯ ಸಮೀಪ ಹೇಮಾವತಿ ಹೊಳೆ ನೀರು ಬಳಸಿಕೊಳ್ಳಲು ಈ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ತಾಲ್ಲೂಕಿನ ಅತಿ ಎತ್ತರದ ಪ್ರದೇಶವಾಗಿರುವ ಹೊನ್ನವಳ್ಳಿ ಬಳಿಯ ಗ್ಯಾರಘಟ್ಟದಲ್ಲಿ ಸುಮಾರು 30 ಎಕರೆ ಭೂಮಿಯನ್ನು ಈ ಹೊಸ ಯೋಜನೆಗೆ ಕಾಯ್ದಿರಿಸಲಾಗಿದೆ. ಇಲ್ಲಿ ನೀರು ಸಂಗ್ರಹಣಾ ಕೇಂದ್ರ ನಿರ್ಮಿಸಿ, ತಾಲ್ಲೂಕಿನ 321 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗೆ ನೀಲನಕ್ಷೆ ತಯಾರಿಸಲಾಗಿದೆ ಎಂದರು.

ಗುರುಗದಹಳ್ಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಈ ಗ್ರಾಮ ಸೇರಿದಂತೆ, ಸಿಂಗೇನಹಳ್ಳಿ, ಗೌಡನಕಟ್ಟೆ, ಗೊಲ್ಲರಹಟ್ಟಿ, ಶಿವರ, ಹೊಸೂರು, ಬೇಲೂರನಹಳ್ಳಿ, ಬೆಣ್ಣೇನಹಳ್ಳಿ, ಚಿಕ್ಕಬಿದರೆ, ಮತ್ತಿಹಳ್ಳಿ, ಮಡೆನೂರು, ಹೊನ್ನೇನಹಳ್ಳಿ, ತಿಮ್ಮಲಾಪುರ, ಲಿಂಗದಹಳ್ಳಿ, ಚಟ್ನಹಳ್ಳಿ, ಮತ್ತು ಬಿದರೆಗುಡಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಗುರುಗದಹಳ್ಳಿ ಕೆರೆಯಲ್ಲಿ ಈ ಯೋಜನೆಗೆ 57.83 ಎಂಸಿಎಫ್‌ಟಿ ನೀರು ಸಂಗ್ರಹಿಸಲಾಗುವುದು. ಅಲ್ಲದೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ತಾಲ್ಲೂಕಿನ ಒಂಬತ್ತು ಕಡೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ತ್ರಿಯಂಬಕ, ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್.ರಾಜು, ಸದಸ್ಯೆ ಶಿವಗಂಗಮ್ಮ, ಗುರುಗದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಸ್.ನಟರಾಜು, ಎಂಜಿನಿಯರ್‌ಗಳಾದ ಲೋಕೇಶ್ವರಪ್ಪ, ಕುಮಾರಸ್ವಾಮಿ ಮತ್ತಿತರರಿದ್ದರು.

ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ವಿವಿಧ ಯೋಜನೆಗಳನ್ನು ಶ್ರಮ ವಹಿಸಿ ರೂಪಿಸಲಾಗಿದೆ.
ಷಡಕ್ಷರಿ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.