ADVERTISEMENT

ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 9:40 IST
Last Updated 6 ನವೆಂಬರ್ 2017, 9:40 IST

ಶಿರಾ: ‘ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಿದಾಗ ಮಾತ್ರ ಭಾಷೆ ಉಳಿಸಲು ಸಾಧ್ಯ’ ಎಂದು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾವರೆಕೆರೆ ಗ್ರಾಮದಲ್ಲಿ ಭಾನುವಾರ ಡಿ.ತಾರೇಗೌಡ ವೇದಿಕೆಯಲ್ಲಿ ನಡೆದ ಗೌಡಗೆರೆ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ಭಾಷೆ ವಿಚಾರದಲ್ಲಿ ಖಾಸಗಿ ಶಾಲೆಗಳು ತಮ್ಮ ಕರ್ತವ್ಯ ಮರೆಯುತ್ತಿವೆ. ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿ ಖಾಸಗಿ ಶಾಲೆಗಳ ಪ್ರಾರಂಭಕ್ಕೆ ಮಾನ್ಯತೆ ನೀಡಬೇಕು’ ಎಂದರು. ಅಧ್ಯಕ್ಷತೆ ವಹಿಸಿದ್ದ ಸಚಿವ ಟಿ.ಬಿ.ಜಯಚಂದ್ರ, ‘ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಾತೃಭಾಷೆಯ ಬಗ್ಗೆ ನೀಡಿರುವ ವ್ಯಾಖ್ಯಾಯನ ಕನ್ನಡ ಭಾಷೆಯ ಬೆಳವಣಿಗೆಗೆ ಅಡ್ಡಿಯಾಗಿದೆ.

ಈ ದಿಸೆಯಲ್ಲಿ ರಾಜ್ಯ ಸರ್ಕಾರ ಕನ್ನಡವನ್ನು ರಾಜ್ಯಭಾಷೆಯನ್ನಾಗಿ ಮಾಡಿದರೆ ಮಾತ್ರ ಭಾಷೆ ಉಳಿಸಲು ಸಾಧ್ಯ. ಆದ್ದರಿಂದ ರಾಜ್ಯಾಂಗಕ್ಕೆ ತಿದ್ದುಪಡಿ ತರುವಂತೆ ಪ್ರಧಾನ ಮಂತ್ರಿ ಅವರಿಗೆ ಮನವಿ ಮಾಡಲಾಗಿದೆ’ ಎಂದರು. ಸುಧಾ ಭಾಸ್ಕರ್ ರಾವ್ ಅವರ ‘ಬಿಳಿಲುಗಳು’ ಹಾಗೂ ರಂಗಸ್ವಾಮಿ ಅವರ ‘ಕಾವ್ಯೋತ್ಸವ’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ADVERTISEMENT

ತಡವಾದ ಉದ್ಘಾಟನೆ: ಸಮ್ಮೇಳನದ ಉದ್ಘಾಟನೆ 10 ಗಂಟೆಗೆ ನಿಗದಿಯಾಗಿತ್ತು. ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ 11ಕ್ಕೆ ವೇದಿಕೆಗೆ ಕರೆತರಲಾಯಿತು. ಗಣ್ಯರು ವೇದಿಕೆಯಲ್ಲಿ ಇದ್ದರೂ ಜಯಚಂದ್ರ ಅವರು ಬಂದಿಲ್ಲ ಎಂದು 1 ಗಂಟೆ ಕಾದು  ಸಮಾರಂಭ ಉದ್ಘಾಟಿಸಲಾಯಿತು. ಇದು ಸಾಹಿತ್ಯಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಗ್ರಾಮದಲ್ಲಿ ಎಲ್ಲಿ ನೋಡಿದರು ಕನ್ನಡದ ಕಂಪು ಎದ್ದು ಕಾಣುತ್ತಿತ್ತು.

ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಎಪಿಎಂಸಿ ಅಧ್ಯಕ್ಷ ಬಿ.ಎಸ್.ಸತ್ಯನಾರಾಯಣ, ಮಾಜಿ ಅಧ್ಯಕ್ಷ ಎಂ.ಆರ್.ಶಶಿಧರ್ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಎನ್.ನಂದೀಶ್ವರ, ಹೋಬಳಿ ಘಟಕದ ಅಧ್ಯಕ್ಷ ಹುಣಸೇಹಳ್ಳಿ ರಾಜಣ್ಣ, ಹುಣಸೇಹಳ್ಳಿ ಶಿವಕುಮಾರ್, ಅಬ್ದುಲ್ಲಾ ಖಾನ್, ಗೋಮಾರದಹಳ್ಳಿ ಮಂಜುನಾಥ್, ಬಿ.ಕೆ.ನರಸಿಂಹರಾಜು, ಸಕ್ಕರ ನಾಗರಾಜು, ಹುಣಸೇಹಳ್ಳಿ ಶಿವಕುಮಾರ್, ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.