ADVERTISEMENT

ಜನಪ್ರತಿನಿಧಿಗಳ ಗಮನಕ್ಕೆ ಬಂದಿಲ್ಲವೇ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 4:58 IST
Last Updated 18 ಜನವರಿ 2017, 4:58 IST
ಜನಪ್ರತಿನಿಧಿಗಳ ಗಮನಕ್ಕೆ ಬಂದಿಲ್ಲವೇ
ಜನಪ್ರತಿನಿಧಿಗಳ ಗಮನಕ್ಕೆ ಬಂದಿಲ್ಲವೇ   

ಮಧುಗಿರಿ: ತಾಲ್ಲೂಕಿನ ಕೊಡಿಗೇನಹಳ್ಳಿ ಹಾಗೂ ಪುರವರ ವಿವಿಧ ಗ್ರಾಮಗಳಲ್ಲಿ ಬೆಂಗಳೂರು ಕಸವನ್ನು ಸುರಿಯಲು ಬಿಬಿಎಂಪಿ ಹಾಗೂ ಕೆಐಎಡಿಬಿ ಅಧಿಕಾರಿಗಳು ಭೂಮಿ ಪರಿಶೀಲನೆ ನಡೆಸಿರುವುದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರ ಗಮನಕ್ಕೆ ಬಾರದೆ ಭೇಟಿ ನೀಡಲು ಹೇಗೆ ಸಾಧ್ಯ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಪ್ರಶ್ನಿಸಿದರು.

ಬಿಬಿಎಂಪಿ ಹಾಗೂ ಕೆಐಎಡಿಬಿ ಅಧಿಕಾರಿಗಳ ಜೊತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭೂಮಿ ಪರಿಶೀಲನೆಯಲ್ಲಿ ತೊಡಗಿದ್ದರಿಂದ ಜನಪ್ರತಿನಿಧಿಗಳ ಮೇಲೆ ಅನುಮಾನ ಮೂಡುವಂತಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ಮಂಡೂರು ಮತ್ತು ಹಾಗೂ ಮಾವಳ್ಳಿಪುರದಲ್ಲಿ ಬಿಬಿಎಂಪಿ ಕಸ ಸುರಿದು ಹಲವು ವರ್ಷಗಳು ಕಳೆದರೂ ಕೂಡ ಅಲ್ಲಿನ ಶಾಸಕರು ಯಾವುದೇ ಕಾರಣಕ್ಕೂ ಕಸ ಸುರಿಯಲು ಮುಂದುವರೆಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ ದಿನಗಳು ಕಳೆದಂತೆ ಕಾರ್ಪೊರೇಟರ್ ಹಾಗೂ ಟ್ರಾನ್ಸ್‌ಪೋಟರ್‌ ಮಾಫಿಯಾಗೆ ಒಳಗಾದ ಶಾಸಕರು ಕಸ ಸುರಿಯಲು ಅವಕಾಶ ನೀಡುತ್ತಿದ್ದಾರೆ ಎಂದು ಅರಿತ ಜನರು ಹೋರಾಟದ ನಡೆಸಿದ್ದರಿಂದ ಕಸ ಸುರಿಯಲು ಬಿಬಿಎಂಪಿ ಹಿಂದೇಟು ಹಾಕಿತು ಎಂದರು.

ಅದೇ ರೀತಿ ಈ ಭಾಗದ ಜನರು ಹೋರಾಟ ಮಾಡುವ ಮೂಲಕ ತಮ್ಮ ಆರೋಗ್ಯ ಹಾಗೂ ಜಮೀನುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ತಾಲ್ಲೂಕಿನ ಕೊಡಿಗೇನಹಳ್ಳಿ ಚಿಕ್ಕಕೆರೆಯನ್ನು 1.22 ಎಕರೆ ಜಾಗವನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಲು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಈ ಸಂಬಂಧವಾಗಿ ಬೆಂಗಳೂರಿನ ಒತ್ತುವರಿ ತೆರವುಗಾಗಿ ತೆರೆದಿರುವ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.

ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿಯ ವಿವಿಧ ಯೋಜನೆಗಳ ಅನುದಾನ ₹ 45 ಲಕ್ಷಕ್ಕೂ ಹೆಚ್ಚು ಹಣ ಅಭಿವೃದ್ಧಿ ಅಧಿಕಾರಿ ನಾಗರಾಜು ಅವರ ಖಾತೆಗೆ ಜಮಾ ಮಾಡಿಕೊಂಡು ಆ ಹಣವನ್ನು ದುರುಪಯೋಗ ಪಡಿಸಿಕೊಂಡು ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ ಕೊಡಿಗೇನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಖಾತೆಯಾಗಿದ್ದರು ಕೂಡ ಈ ವರೆಗೂ ನಿವೇಶನ ಸ್ಥಳವನ್ನು ತೋರಿಸಿಲ್ಲ ಎಂದು ಆರೋಪಿಸಿದರು. ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಕಾರ್ಯದರ್ಶಿ ವೆಂಕಟೇಶ್ ಪ್ರಸಾದ್, ಜಿಲ್ಲಾ ಘಟಕದ ಅಧ್ಯಕ್ಷ ರಘು ಜಾಣಗೆರೆ, ಮಾನವ ಹಕ್ಕುಗಳ ಸಂರಕ್ಷಣ ಸಮಿತಿಯ ಜಿಲ್ಲಾ  ಘಟಕದ ಅಧ್ಯಕ್ಷ ಅಶ್ವಥಪ್ಪ ಹಾಗೂ ಸಮಿತಿ ಸದಸ್ಯ ಹನುಮಂತರಾಯಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.