ADVERTISEMENT

ಜಾಹೀರಾತಿನಿಂದ ₹2.30 ಲಕ್ಷ ಆದಾಯ

ತುಮಕೂರು ಸಾರಿಗೆ ವಿಭಾಗೀಯ ಕಚೇರಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 7:19 IST
Last Updated 3 ಫೆಬ್ರುವರಿ 2017, 7:19 IST
ಜಾಹೀರಾತಿನಿಂದ ₹2.30 ಲಕ್ಷ ಆದಾಯ
ಜಾಹೀರಾತಿನಿಂದ ₹2.30 ಲಕ್ಷ ಆದಾಯ   

ತುಮಕೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ಉಪ ವಿಭಾಗೀಯ ಕಚೇರಿಗೆ ಬಸ್‌ಗಳ ಮೇಲೆ ನೀಡುತ್ತಿರುವ ಜಾಹೀರಾತು ಕಾಮಧೇನುವಾಗಿದೆ. ಪ್ರತಿ ತಿಂಗಳು ಬರೋಬ್ಬರಿ ₹2.30 ಲಕ್ಷ ಆದಾಯ ತಂದು ಕೊಡುತ್ತಿದೆ.

ಜಿಲ್ಲೆಯಲ್ಲಿ ಇರುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 230 ಬಸ್‌ಗಳಿಗೆ ಜಾಹೀರಾತು ಬರುತ್ತಿದೆ. ಇನ್ನೂ ಉಳಿದ ಬಸ್‌ಗಳಿಗೆ ಜಾಹೀರಾತು ತರಲು ಪ್ರಯತ್ನ ಸಾಗಿದೆ. ಇದಕ್ಕಾಗಿ ಎರಡು ಜಾಹೀರಾತು ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಹೀರಾತು ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೇಂದ್ರೀಯ ಕಚೇರಿಯಲ್ಲೆ ವಿಚಾರಿಸಬೇಕು. ಹೀಗಾಗಿ ಜಾಹೀರಾತು ವಿಷಯದಲ್ಲಿ ನಮ್ಮ ಕೈಕಟ್ಟಿದಂತಾಗಿದೆ. ಆಯಾ ವಿಭಾಗೀಯ ಕಚೇರಿಗಳಿಗೆ ಯಾವುದೇ ಸ್ವಾತಂತ್ರ್ಯ ಇಲ್ಲವಾಗಿದೆ. ಅದಾಗ್ಯೂ, ಜಿಲ್ಲೆಯಲ್ಲಿ ಬಸ್‌ಗಳ ಮೇಲೆ ಜಾಹೀರಾತು ನೀಡುವುದೇನು ಕಡಿಮೆಯಾಗಿಲ್ಲ ಅವರು ತಿಳಿಸಿದರು.

‘ರಾಜ್ಯದಲ್ಲಿ ನಿಗಮಕ್ಕೆ ಸುಮಾರು ₹ 30 ಲಕ್ಷ ಆದಾಯ ಬರುತ್ತಿದೆ. ಒಟ್ಟಾರೆ 3 ಸಾವಿರ ಬಸ್‌ಗಳ ಮೇಲೆ ಜಾಹೀರಾತು ಹಾಕಲಾಗಿದೆ’ ಎಂದು ಹೇಳಲಾಗಿದೆ.

ಬಸ್‌ಗಳ ಜಾಹೀರಾತನ್ನು ಜನರು ಗಮನಿಸುತ್ತಾರೆ. ಪ್ರತಿ ತಿಂಗಳು ಒಂದು  ಬಸ್‌ಗೆ ವಿಧಿಸುವ ದರ ಸಹ ಅತ್ಯಲ್ಪವಾಗಿದೆ. ತಿಂಗಳಿಗೆ ಸಾವಿರ ರೂಪಾಯಿ ವಿಧಿಸಲಾಗುತ್ತದೆ. ಹೀಗಾಗಿ ಜಾಹೀರಾತುದಾರರಿಗೆ ಅನುಕೂಲವೇ ಹೆಚ್ಚು ಎಂದು ಅಭಿಪ್ರಾಯ ಪಡಲಾಗುತ್ತಿದೆ. ಇತ್ತೀಚೆಗೆ ಸಿನಿಮಾ ಜಾಹೀರಾತುಗಳು ಹೆಚ್ಚುತ್ತಿವೆ. ಜಾಹೀರಾತು ಹಾಕುವುದರಿಂದ ಬಸ್‌ಗಳು ಸಹ ಆಕರ್ಷಣೀಯವಾಗಿ ಕಾಣಲಿವೆ ಎಂದು ಬಸ್‌ ಚಾಲಕರು, ನಿರ್ವಾಹಕರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.