ADVERTISEMENT

ಜಿಲ್ಲಾಸ್ಪತ್ರೆಗೆ ಸಚಿವ, ಆಯೋಗದ ಅಧ್ಯಕ್ಷರ ಭೇಟಿ

ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ; ಆರೋಪಿ ಬಳಿ ಇರುವ ಪಿಸ್ತೂಲ್‌ ವಾಪಸ್‌ ಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 7:40 IST
Last Updated 20 ಜನವರಿ 2017, 7:40 IST
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಗಾಯಾಳು ಯುವಕನ ಆರೋಗ್ಯ ವಿಚಾರಿಸಲು ಬಂದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ದಲಿತ ಸಂಘಟನೆಗಳ ಮುಖಂಡರು  ವಾಗ್ವಾದ ನಡೆಸಿದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಗಾಯಾಳು ಯುವಕನ ಆರೋಗ್ಯ ವಿಚಾರಿಸಲು ಬಂದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ದಲಿತ ಸಂಘಟನೆಗಳ ಮುಖಂಡರು ವಾಗ್ವಾದ ನಡೆಸಿದರು.   

ತುಮಕೂರು: ‘ದಲಿತ ಯುವಕ ಅಭಿಷೇಕ್‌ ಅವರನ್ನು ಬೆತ್ತಲೆಗೊಳಿಸಿ ಚಪ್ಪಲಿ ಹಾರ ಹಾಕಿ, ಹಲ್ಲೆ ಮಾಡಿದ ಪ್ರಕರಣದ ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು’ ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು  ಪಂಗಡಗಳ ಆಯೋಗದ ಅಧ್ಯಕ್ಷ ಎ.ಮುನಿಯಪ್ಪ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾಪಂಥ್ ಅವರನ್ನು ಒತ್ತಾಯಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಗಾಯಾಳು ಯುವಕನ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಯುವತಿಯನ್ನು ಚುಡಾಯಿಸಿದ್ದರೆ ಕರೆದು ಬುದ್ಧಿವಾದ ಹೇಳಬಹುದಿತ್ತು. ಇಲ್ಲವೇ ಪೊಲೀಸರಿಗೆ ದೂರು ನೀಡಬೇಕಿತ್ತು. ಆದರೆ, ಅಮಾನುಷವಾಗಿ ಹಿಂಸಿಸಿರುವುದು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 506ಬಿ ಅಡಿ ಪ್ರಕರಣ ದಾಖಲಿಸಿ, ಗಡಿ ಪಾರು ಮಾಡಬೇಕು’ ಎಂದು ಒತ್ತಾಯಿಸಿದರು.

‘ಯುವಕನಿಗೆ ಆಯೋಗದಿಂದ ₹ 1 ಲಕ್ಷ ಪರಿಹಾರ ನೀಡಲಾಗುವುದು. ಮೊದಲ ಹಂತವಾಗಿ ₹ 25 ಸಾವಿರ ಚೆಕ್‌ ನೀಡಿದ್ದೇನೆ. ಯುವತಿಯ ಪೋಷಕರ ಬಳಿ ಇರುವ ಪಿಸ್ತೂಲ್‌ ವಶಪಡಿಸಿಕೊಂಡು, ಪರವಾನಗಿ ರದ್ದು ಮಾಡಬೇಕು’ ಎಂದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಮಾತನಾಡಿ, ‘ಯುವಕನ ಕುಟುಂಬಕ್ಕೆ ರಕ್ಷಣೆ ನೀಡಲಾಗುವುದು.  ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ಟ್ಯಾಕ್ಸಿ ಕೊಡಲಾಗುವುದು’ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್‌, ಜಿಲ್ಲಾ ಸಮಾಜ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ರಂಗೇಗೌಡ ಇತರರು ಇದ್ದರು.

ಇದಾದ ಬಳಿಕ ಮುನಿಯಪ್ಪ ಅವರ ತಂಡ ಗುಬ್ಬಿ ಪಟ್ಟಣದ ಸುಭಾಷ್‌ ನಗರದಲ್ಲಿರುವ ಅಭಿಷೇಕ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಕುಟುಂಬಕ್ಕೆ ಪೊಲೀಸ್‌ ರಕ್ಷಣೆ ಮತ್ತು ನಿವೇಶನ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಯುವತಿ ಕುಟುಂಬದಿಂದ ಪ್ರತಿದೂರು:  ‘ದಲಿತ ಯುವಕ ಅಭಿಷೇಕ್‌, ತಮ್ಮ ಪುತ್ರಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು’ ಎಂದು ಆಗ್ರಹಿಸಿ ಯುವತಿಯ ಪೋಷಕರು ಗುರುವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದರು.

‘ಅಭಿಷೇಕ್‌ ಮೇಲೆ ಹಲ್ಲೆ ಮಾಡಿದವರಿಗೆ ಕಾನೂನುರೀತ್ಯ ಕ್ರಮ ಜರುಗಿಸಲಿ. ಆದರೆ  ಬಾಲಕಿಗೆ 4 ತಿಂಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಭಿಷೇಕ್‌ ವಿರುದ್ಧವೂ ಪ್ರಕರಣ ದಾಖಲಿಸಬೇಕು’  ಎಂದು ಒತ್ತಾಯಿಸಿದರು.

‘ಜ.17 ರಂದು ರಾತ್ರಿ 15ಕ್ಕೂ ಹೆಚ್ಚು ಗೂಂಡಾಗಳು ಯುವತಿಯ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಈ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪರಿಶೀಲಿಸಿ ಕ್ರಮ ಜರುಗಿಸಬೇಕು’ ಎಂದು ಯುವತಿ ಪರ ಬಂದಿದ್ದ ವಕೀಲ ನಾರಾಯಣಸ್ವಾಮಿ, ತಿಗಳ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ರೇವಣ ಸಿದ್ದಯ್ಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಮಾಡಿದರು.

ಹಲ್ಲೆಗೆಒಳಗಾದ ಅಭಿಷೇಕ್‌ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ‘ಇದೊಂದು ಅಮಾನವೀಯ ಪ್ರಕರಣ, ಸರ್ಕಾರ ಇದನ್ನು ಸಹಿಸುವುದಿಲ್ಲ’ ಎಂದರು. ‘ಪ್ರಕರಣ ದುರದೃಷ್ಟಕರ.  ಏಳು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದೆ. ಇನ್ನಿಬ್ಬರನ್ನು  ಶೀಘ್ರ ಬಂಧಿಸಲಾಗುವುದು’ ಎಂದು ಹೇಳಿದರು.

‘ಸಾಮಾಜಿಕ ಜಾಲತಾಣದಲ್ಲಿ ಆರೋಪಿಗಳೆ ವಿಡಿಯೊ ತುಣುಕು ಹರಿಯ ಬಿಟ್ಟಿದ್ದಾರೆ . ಪೊಲೀಸ್‌ ತನಿಖೆಯಿಂದ ಸತ್ಯಾಂಶ ಬಯಲಾಗಲಿದೆ’ ಎಂದರು.
ದಲಿತ ಮುಖಂಡರ ಮಾತು ಆಲಿಸುತ್ತಿಲ್ಲ ಎಂದು ದಲಿತ ಮುಖಂಡರು ಸಚಿವರೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.

4 ತಿಂಗಳಿಂದ  ಹಿಂಸೆ ನೀಡುತ್ತಿದ್ದ
‘4 ತಿಂಗಳಿಂದ ಶಾಲಾ ವಾಹನ ಹಿಂಬಾಲಿಸಿಕೊಂಡು ಬಂದು ಹಿಂಸೆ ನೀಡುತ್ತಿದ್ದ. ಈ ಬಗ್ಗೆ ನಮ್ಮ ಮನೆಯವರಿಗೆ ತಿಳಿಸಿದೆ. ಅಭಿಷೇಕ್‌ಗೆ 3– 4 ಬಾರಿ ಎಚ್ಚರಿಕೆ ನೀಡಿದ್ದರು. ಆದರೂ ಆತ ಅರ್ಥ ಮಾಡಿಕೊಂಡಿಲ್ಲ. 8 ದಿನದ ಹಿಂದೆ ಶಾಲೆಗೆ ಹೋಗುತ್ತಿದ್ದಾಗ ದಾರಿ ಮಧ್ಯೆ ಬಂದು ಕೈ ಹಿಡಿದು ಎಳೆದಾಡಿದ. ಪ್ರೀತಿಸದಿದ್ದರೆ ಆಸಿಡ್‌ ಹಾಕುತ್ತೇನೆ, ಚುಚ್ಚುತ್ತೇನೆ ಎಂದು ಚಾಕು ತೋರಿಸಿದ. ಆಗ ತಪ್ಪಿಸಿಕೊಂಡು ಓಡಿಹೋದೆ’.
–ನೊಂದ ಬಾಲಕಿ

*
ಅಭಿಷೇಕ್‌ಗೆ ಎಚ್ಚರಿಕೆ ನೀಡಿದ್ದರೂ ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು ನಿಲ್ಲಿಸಿರಲಿಲ್ಲ. ಜ.17 ರಂದು ಶಾಲೆಗೆ ಹೋದ ಮಗಳನ್ನು ಅಡ್ಡಗಟ್ಟಿ
ಆಸಿಡ್‌ ಹಾಕುವ ಬೆದರಿಕೆ ಹಾಕಿದ್ದ.
–ಬಾಲಕಿಯ ತಾಯಿ

ADVERTISEMENT

*
ಉದ್ದೇಶಪೂರ್ವಕವಾಗಿ ಪೊಲೀಸರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಬಾಲಕಿಗೆ ನೀಡಿದ ಲೈಂಗಿಕ ಹಿಂಸೆ ಪರಿಗಣಿಸದಿರುವುದು ತಪ್ಪು.
-ರೇವಣಸಿದ್ದಯ್ಯ, ರಾಜ್ಯ ಘಟಕದ ಅಧ್ಯಕ್ಷ, ತಿಗಳ ಸಮಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.