ADVERTISEMENT

ಟಿಪ್ಪು ಜಯಂತಿ: ಸಂಭ್ರಮವಿದೆ, ಸಡಗರವಿಲ್ಲ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 9:17 IST
Last Updated 11 ನವೆಂಬರ್ 2017, 9:17 IST

ತುಮಕೂರು: ‘ಒಂದು ತಿಂಗಳಿನಿಂದ ಸಮಾಜಘಾತುಕ ಶಕ್ತಿಗಳು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಶಾಂತಿ ಕದಡಲು ಯತ್ನಿಸುತ್ತಿವೆ. ಆದ್ದರಿಂದ ಇಲ್ಲಿ ಸಂಭ್ರಮ ಇದೆ. ಆದರೆ ಸಡಗರವಿಲ್ಲ. ಪೊಲೀಸ್ ಬಂದೋಬಸ್ತ್‌ನಲ್ಲಿ ಜಯಂತಿ ನಡೆಸಬೇಕಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟರು. ಇಲ್ಲಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಗೂ ಮತ್ತು ಟಿಪ್ಪು ಸುಲ್ತಾನ್ ಅವರಿಗೂ ಅವಿನಾಭಾವ ಸಂಬಂಧ ಇದೆ. ಕುದುರೆಗಳನ್ನು ಯುದ್ಧಕ್ಕೆ ತರಬೇತಿಗೊಳಿಸಲು ಕುಣಿಗಲ್‌ನಲ್ಲಿ ಸ್ಟಡ್ ಫಾರಂ ಆರಂಭಿಸಿದ್ದು ಟಿಪ್ಪು ಸುಲ್ತಾನ್. ಅಂದಿನ ವಿಧಿ ವಿಧಾನಗಳನ್ನೇ ಇಂದಿಗೂ ಫಾರಂನಲ್ಲಿ ಪಾಲಿಸಲಾಗುತ್ತಿದೆ’ ಎಂದು ಹೇಳಿದರು.

‘ಶಿರಾದಲ್ಲಿ ಟಿಪ್ಪು ಸುಲ್ತಾನ್ ತಾಯಿಯ ಸಮಾಧಿ ಇದೆ. ಸಿಬಿ ರಂಗನಾಥಸ್ವಾಮಿ ದೇವಾಲಯದಲ್ಲಿ ಇರುವ ಬಣ್ಣದ ಚಿತ್ತಾರಗಳನ್ನು ಟಿಪ್ಪು ಸುಲ್ತಾನ್ ಅವರ ಅವಧಿಯಲ್ಲಿ ಬಿಡಿಸಲಾಗಿದೆ. ಟಿಪ್ಪು ಮತಾಂಧ ಎಂದು ವಿರೋಧಿಗಳು ಸುಳ್ಳು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಟಿಪ್ಪು ಅರಮನೆಯ 20 ಅಡಿ ಸಮೀಪದಲ್ಲಿಯೇ ವೆಂಕಟರಮಣ ಸ್ವಾಮಿ ದೇವಾಲಯ ಇದೆ. ಮತಾಂಧರಾಗಿದ್ದರೆ ಈ ದೇವಾಲಯ ಉಳಿಯುತ್ತಿತ್ತೇ’ ಎಂದು ಪ್ರಶ್ನಿಸಿದರು.

ADVERTISEMENT

‘ಶ್ರೀರಂಗಪಟ್ಟಣದ ರಂಗಸ್ವಾಮಿ ದೇವಾಲಯಕ್ಕೆ ಬೆಂಗಳೂರಿನಲ್ಲಿ ಟಿಪ್ಪು ಒಂದು ಸಾವಿರ ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. 250ಕ್ಕೂ ಹೆಚ್ಚು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿಸಿದ್ದರು’ ಎಂದರು. ‘ಶೃಂಗೇರಿ ಮಠ ಮತ್ತು ಟಿಪ್ಪು ಅವರ ನಡುವೆ 30ಕ್ಕೂ ಹೆಚ್ಚು ಬಾರಿ ಪತ್ರ ವ್ಯವಹಾರಗಳು ನಡೆದಿವೆ. ಆ ಪತ್ರಗಳನ್ನೇ ಸಂಶೋಧಕರು ನೋಡಿದರೆ ಅವರ ಧರ್ಮ ಸಹಿಷ್ಣುತೆ ಅರಿವಾಗುತ್ತದೆ’ ಎಂದು ವಿವರಿಸಿದರು.

‘ಟಿಪ್ಪುವನ್ನು ವಿರೋಧಿಸುತ್ತಿರುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಛಿದ್ರ ಮಾಡುತ್ತಿದ್ದಾರೆ. ಸತ್ಯವನ್ನು ಮರೆಮಾಚುತ್ತಿದ್ದಾರೆ’ ಎಂದು ದೂರಿದರು. ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ಮಾತನಾಡಿ, ‘ಸರ್ಕಾರ ಯಾವುದೇ ಜಯಂತಿಗಳನ್ನು ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸಬಾರದು. ಜಯಂತಿಗಳಲ್ಲಿ ಎಲ್ಲ ಸಮುದಾಯದ ಜನರು ಪಾಲ್ಗೊಳ್ಳುವಂತೆ ಮಾಡಬೇಕು’ ಎಂದರು.

ನಗರದ ಯಾವುದಾದರೂ ಒಂದು ವೃತ್ತಕ್ಕೆ ಹಾಗೂ ಬೆಂಗಳೂರಿನ ಒಂದು ಮೆಟ್ರೊ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಮಾ.ಝಡ್ ಎ.ಮೊಹಮ್ಮದ್ ಅರ್‌ಫಾತ್ ಆಲಂ ಅವರು ಟಿಪ್ಪು ಸುಲ್ತಾನ್ ಕುರಿತು ಉಪನ್ಯಾಸ ನೀಡಿದರು. ವೇದಿಕೆಯ ಟಿಪ್ಪು ಸುಲ್ತಾನ್ ಭಾವಚಿತ್ರದ ಬಳಿ ಕುಳಿತ್ತಿದ್ದ ಟಿಪ್ಪು ವೇಷಧಾರಿ ಬಾಲಕ ಎಲ್ಲರ ಗಮನಸೆಳೆದ.

ಶಾಸಕ ಡಾ.ಎಸ್.ರಫೀಕ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಫರ್ಜನಾಖಾನಂ, ಸಮಾಜದ ಮುಖಂಡ ಎಸ್‌.ಷಫಿ ಅಹಮ್ಮದ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್, ಮಹಾನಗರ ಪಾಲಿಕೆ ಆಯುಕ್ತ ಎಲ್.ಮಂಜುನಾಥ ಸ್ವಾಮಿ, ಸಾಹಿತಿ ಕೆ.ಬಿ.ಸಿದ್ದಯ್ಯ ಹಾಗೂ ಸಮುದಾಯದ ಮುಖಂಡರು ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.