ADVERTISEMENT

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 10:18 IST
Last Updated 24 ಜೂನ್ 2017, 10:18 IST

ಕುಣಿಗಲ್:  ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಹನಿ ನೀರಾವರಿ ಯೋಜನೆ ಹಾಗೂ ಪಾಲಿಹೌಸ್ ಯೋಜನೆಯಲ್ಲಿ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಸಿಬ್ಬಂದಿ ಅಕ್ರಮ ನಡೆಸಿ, ರೈತರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು, ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಆನಂದ ಪಟೇಲ್, ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್ ನೇತೃತ್ವದಲ್ಲಿ ಸಂಘದ ಕಚೇರಿಯಲ್ಲಿ ಸಂಘಟಿತರಾದ ರೈತರು, ಕೃಷಿ ಇಲಾಖೆ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಆನಂದಪಟೇಲ್ ಮಾತನಾಡಿ, ‘ತಾಲ್ಲೂಕಿನ ಕಿತ್ತನಾಗಮಂಗಲದ ವೆಂಕಟಸ್ವಾಮಿ, ಶಾರದಮ್ಮ ಮತ್ತು ಶ್ರೀನಿವಾಸ್ ಸೇರಿದಂತೆ ವಿವಿಧೆಡೆ ರೈತರ ಜಮೀನಿನಲ್ಲಿ ಪಾಲಿಹೌಸ್(ನೆರಳಿನ ಮನೆ) ನಿರ್ಮಿಸಲು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿ, ರೈತರ ಜಮೀನಿನಲ್ಲಿ ಪಾಲಿಹೌಸ್ ನಿರ್ಮಿಸಿರುವುದಾಗಿ ಎಂದು ಲಕ್ಷಾಂತರ ರೂಪಾಯಿ ಬಿಲ್‌ ಪಾವತಿಸಲಾಗಿದೆ’ ಎಂದು ಆರೋಪಿಸಿದರು. ‘ವಾಸ್ತವವಾಗಿ ಜಮೀನಿಲ್ಲಿ ಪಾಲಿಹೌಸ್ ನಿರ್ಮಿಸಿಲ್ಲ. ಇನ್ನು, ಕೆಲವೆಡೆಗಳಲ್ಲಿ ಪಾಲಿಹೌಸ್ ನಿರ್ಮಿಸಲಾಗಿದೆ.

ADVERTISEMENT

ಆದರೆ, ನಿರ್ಮಾಣ ಮಾಡಿದ ಕೆಲವೇ ದಿನಗಳಲ್ಲಿ ಗಾಳಿ ಮಳೆಗೆ ಹಾಳಾಗಿದೆ ಎಂಬ ಕಾರಣ ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ, ಸಮರ್ಪಕ ಉತ್ತರ ನೀಡದೆ ಜಾರಿ ಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಹನಿ ನೀರಾವರಿ ಅಳವಡಿಸುವ ಖಾಸಗಿ ಕಂಪೆನಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿ, ರೈತರ ಎರಡೂವರೆ ಎಕರೆಗೆ ಹನಿ ನೀರಾವರಿ ಅಳವಡಿಸಿ, ಐದು ಎಕರೆ ಲೆಕ್ಕ ತೋರಿಸಿ ಲಕ್ಷಾಂತರ ರೂಪಾಯಿ ಕೊಳ್ಳೆಹೊಡೆದಿದ್ದಾರೆ. ಅಂಚಿಪುರ, ಚಿನ್ನಹಳ್ಳಿ, ಹೊಸಪುರ, ಕಾಡುಮತ್ತೀಕೆರೆ ಸೇರಿದಂತೆ ಬಹುತೇಕ ಕಡೆಗಳಲ್ಲಿ 40 ರೈತರ ಜಮೀನಿಗೆ ಹನಿ ನೀರಾವರಿ ಯೋಜನೆಯಲ್ಲಿ 5 ಎಕರೆ ಪ್ರದೇಶಕ್ಕೆ ಸೌಲಭ್ಯ ಅಳವಡಿಸಲಾಗಿದೆ ಎಂದು ಪ್ರತಿ ಪ್ರಕರಣದಲ್ಲಿ ₹2.24 ಲಕ್ಷ ಡ್ರಾ ಮಾಡಿದ್ದಾರೆ.

ಇನ್ನು ಹಲವು ಯೋಜನೆಗಳಲ್ಲಿ ಕೃಷಿ ಅಧಿಕಾರಿಗಳು ರೈತರ ಜಮೀನಿನಲ್ಲಿ ಕಾಮಗಾರಿ ನಿರ್ವಹಿಸದೆ, ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಹಗರಣ ನಡೆಸಿದ್ದಾರೆ. ಈ ಎಲ್ಲ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ರೈತರ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ತಹಶೀಲ್ದಾರ್ ನಾಗರಾಜ್, ಅಕ್ರಮಗಳ ಬಗ್ಗೆ ದಾಖಲೆ ನೀಡಿದಲ್ಲಿ ವಿಚಾರಣೆ ನಡೆಸುವಂತೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ನಂತರ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು. ಪ್ರಮುಖರಾದ ಕುಮಾರ, ಸಾವಂದಯ್ಯ, ಲೋಕೇಶ, ರೂಪಾ, ಶೈಲಜಾ, ಕೃಷ್ಣಪ್ಪ, ವೆಂಕಟೇಶ್ ಇತರರು

ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.