ADVERTISEMENT

ತಿಪಟೂರು: ನಾಮಪತ್ರ ಸಲ್ಲಿಸಿದ ಶಾಸಕ ಷಡಕ್ಷರಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 11:36 IST
Last Updated 21 ಏಪ್ರಿಲ್ 2018, 11:36 IST

ತಿಪಟೂರು: ಐದಾರು ದಿನಗಳಿಂದ ಅತಂತ್ರವಾಗಿದ್ದ ಕಾಂಗ್ರೆಸ್ ಬಿ ಫಾರಂ ಖಚಿತವಾದ ಕಾರಣ ಶಾಸಕ ಕೆ.ಷಡಕ್ಷರಿ ಶುಕ್ರವಾರ ಬೆಂಗಳೂರಿನಿಂದ ಬಂದ ಸರಳವಾಗಿ ಬೆಂಬಲಿಗರೊಂದಿಗೆ  ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.

ಬಿ ಫಾರಂಗಾಗಿ ಐದಾರು ದಿನಗಳಿಂದ ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದ ಷಡಕ್ಷರಿ ನಗರದ ನಿವಾಸಕ್ಕೆ ಶುಕ್ರವಾರ ಬರುತ್ತಿದ್ದಂತೆ ಅಪಾರ ಕಾರ್ಯಕರ್ತರು ಮತ್ತು ಬೆಂಬಲಿಗರು ನೆರೆದು ಹರ್ಷ ವ್ಯಕ್ತಪಡಿಸಿದರು. ತಕ್ಷಣ ಅವರು ನಾಮಪತ್ರಕ್ಕೆ ಸಂಬಂಧಿಸಿದ ಸಿದ್ಧತೆ ಮಾಡಿಕೊಂಡು ಮನೆಯ ಬಳಿ ನೆರೆದಿದ್ದ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

’ಪಕ್ಷದ ವರಿಷ್ಠರ ಮಟ್ಟದಲ್ಲಿ ತಪ್ಪು ಮಾಹಿತಿಯಿಂದ ತಮಗೆ ಟಿಕೆಟ್ ಕೈ ತಪ್ಪಿತ್ತು. ಅನಾರೋಗ್ಯದ ನೆಪ ಹೇಳಿ ಟಿಕೆಟ್ ನಿರಾಕರಿಸಲಾಗಿತ್ತು ಎಂಬ ಮಾಹಿತಿ ನಂತರ ತಿಳಿಯಿತು. ಆದರೆ ತಾವು ಆರೋಗ್ಯದಲ್ಲಿ ಸದೃಢವಾಗಿರುವುದನ್ನು ಮನವರಿಕೆ ಮಾಡಿದ ನಂತರ ವರಿಷ್ಠರು ತೀರ್ಮಾನ ಬದಲಿಸಿದರು’ ಎಂದು ಕಾರ್ಯಕರ್ತರಿಗೆ ತಿಳಿಸಿದರು.  ಪಕ್ಷಕ್ಕಾಗಿ ದುಡಿಯದ ವ್ಯಕ್ತಿಗೆ ಟಿಕೆಟ್ ಘೋಷಣೆಯಾಗಿದ್ದು, ಮನಸ್ಸಿಗೆ ಬೇಸರ ಉಂಟು ಮಾಡಿತ್ತು. ಸುಮಾರು 40 ವರ್ಷದಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿದು ಕ್ಷೇತ್ರಕ್ಕೆ ಅಪಾರ ಅಭಿವೃದ್ಧಿ ಕಾಮಗಾರಿಗಳನ್ನು ತಂದು ಕೆಲಸ ಮಾಡಿದ್ದರೂ ಹೀಗಾಯಿತಲ್ಲ ಎಂಬ ಬೇಸರವಿತ್ತು. ಆದರೆ ವರಿಷ್ಠರಿಗೆ ಇದೆಲ್ಲ ಮನವರಿಕೆಯಾದ ನಂತರ ಟಿಕೆಟ್ ಖಚಿತ ಪಡಿಸಿದರು ಎಂದರು.

ADVERTISEMENT

ಏ.24ರಂದು ಬಿ ಫಾರಂ ಜತೆಗೆ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರಿನಿಂದ ಬರುವಾಗಲೇ ಬಿ ಫಾರಂನೊಂದಿಗೆ ಬಂದಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಿ.ಪರಮೇಶ್ವರ್ ಬಿ ಫಾರಂ ಕೊಟ್ಟು ಕಳುಹಿಸಿದ್ದಾರೆ. ಆದರೆ ಮೊದಲು ಪ್ರಕಟಿಸಿದ್ದನ್ನು ಬದಲಿಸಿ ಬಿ ಫಾರಂ ನೀಡುತ್ತಿರುವುದರಿಂದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಗಮನಕ್ಕೆ ತರಬೇಕಾದ್ದರಿಂದ ಗುಟ್ಟಾಗಿ ಇಡಲಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.