ADVERTISEMENT

ತೆಂಗು ಬೆಳೆ: ಕೊನೆಗೂ ಸಿಕ್ಕಿತು ನೀರಾ ಭಾಗ್ಯ

ಕೃಷಿಕರ ದಶಕಗಳ ಹೋರಾಟಕ್ಕೆ ಸಂದ ಜಯ, ರಫ್ತು ಉದ್ಯಮಕ್ಕೂ ಅವಕಾಶ

ಸಿ.ಕೆ.ಮಹೇಂದ್ರ
Published 7 ಡಿಸೆಂಬರ್ 2017, 9:07 IST
Last Updated 7 ಡಿಸೆಂಬರ್ 2017, 9:07 IST
ತೆಂಗು ಬೆಳೆ: ಕೊನೆಗೂ ಸಿಕ್ಕಿತು ನೀರಾ ಭಾಗ್ಯ
ತೆಂಗು ಬೆಳೆ: ಕೊನೆಗೂ ಸಿಕ್ಕಿತು ನೀರಾ ಭಾಗ್ಯ   

ತುಮಕೂರು: ಬೆಲೆ ಇಳಿಕೆ, ಬರ, ಕೀಟ ಬಾಧೆಯಿಂದ ತೀರಾ ಸಂಕಷ್ಟ ಸ್ಥಿತಿಯಲ್ಲಿದ್ದ ರಾಜ್ಯದ ತೆಂಗು ಬೆಳೆಗಾರರಿಗೆ ರಾಜ್ಯ ಸರ್ಕಾರ ಕೊನೆಗೂ ಸಿಹಿ ಸುದ್ದಿ ನೀಡಿದೆ. ನೀರಾ ನೀತಿಯ ಅಂತಿಮ ಗೆಜೆಟ್‌ ಅಧಿಸೂಚನೆಯನ್ನು ಹೊರಡಿಸಿದೆ.

ಈವರೆಗೂ ನೀರಾ ಇಳಿಸಲು, ಮಾರಾಟ ಮಾಡಲು ಇದ್ದ ಎಲ್ಲ ಅಡೆತಡೆಗಳು ಇನ್ನೂ ನಿವಾರಣೆಯಾಗಲಿವೆ. ನೀರಾವನ್ನು ಇಳಿಸಲು, ಮಾರಾಟ ಮಾಡಲು ತೆಂಗು ಬೆಳೆಗಾರರ ಕಂಪೆನಿಗಳಿಗೆ ಅವಕಾಶ ಸಿಗಲಿದೆ. ರಾಜ್ಯದ ಎಲ್ಲ ಕಡೆಯೂ ನೀರಾ ಪಾರ್ಲರ್‌ಗಳನ್ನು ತೆರೆಯಬಹುದಾಗಿದೆ.

ಎರಡು ದಶಕಗಳಿಂದ ನೀರಾ ನೀತಿಗಾಗಿ ರೈತರು ಹೋರಾಟ ನಡೆಸುತ್ತಿದ್ದರು. ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರ ನೀರಾ ನೀತಿ ಜಾರಿಗೆ ತರುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಿತ್ತು. ಆದರೂ ನೀತಿ ಜಾರಿಗೆ ಮೀನಮೇಷ ಎಣಿಸುತ್ತಿತ್ತು.

ADVERTISEMENT

ನೀರಾ ಇಳಿಸಲು ಸರ್ಕಾರ ಅನುಮತಿ ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಈಗಾಗಲೇ ಕೇಂದ್ರೀಯ ತೆಂಗು ಅಭಿವೃದ್ಧಿ ಮಂಡಳಿಯ ನೇತೃತ್ವದಲ್ಲಿ ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ತೆಂಗು ಬೆಳೆಗಾರರು ಒಟ್ಟು 19 ತೆಂಗು ಬೆಳೆಗಾರರ ಕಂಪೆನಿಗಳನ್ನು ಸ್ಥಾಪಿಸಿಕೊಂಡಿದ್ದಾರೆ.

ರಾಜ್ಯದಲ್ಲಿ 5.17 ಲಕ್ಷ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ಹದಿನಾಲ್ಕು ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿದೆ. ಬೆಳೆಯ ವಿಸ್ತೀರ್ಣ ಹಾಗೂ ಉತ್ಪಾದನೆಯ ಲೆಕ್ಕದಲ್ಲಿ ರಾಜ್ಯವು ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ತುಮಕೂರು ಜಿಲ್ಲೆಯೂ ದೇಶದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ಎರಡನೇ ಜಿಲ್ಲೆಯಾಗಿದೆ. ನೀರಾ ನೀತಿ ಜಾರಿಯಿಂದ ಈ ಜಿಲ್ಲೆಗೆ ಹೆಚ್ಚು ಅನುಕೂಲ ಸಿಗಲಿದೆ ಎಂದು ಬೆಳೆಗಾರರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತೆಂಗು ಬೆಳೆಯುವ ದೇಶದ ಪ್ರಮುಖ ರಾಜ್ಯವಾದ ಕೇರಳದಲ್ಲಿ ನೀರಾ ಇಳಿಸಲಾಗುತ್ತದೆ. ನೀರಾದ ಉಪ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯೂ ಸಿಕ್ಕಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ನೀರಾ ನೀತಿ ಜಾರಿಗೆ ತರಬಹುದಾಗಿದೆ ಎಂದು ಕೇಂದ್ರೀಯ ತೆಂಗು ಅಭಿವೃದ್ಧಿ ಮಂಡಳಿ ನಾಲ್ಕು ವರ್ಷಗಳ ಹಿಂದೆಯೇ ರಾಜ್ಯ ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿತ್ತು. ಆದರೂ ರೈತರ ಹೋರಾಟ ಜೋರು ಪಡೆಯುವವರೆಗೂ ಈ ಬಗ್ಗೆ ಸರ್ಕಾರ ಆಸಕ್ತಿ ತಾಳಿರಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.

‘ತೆಂಗನ್ನು ಹುಳಿ ಬರಿಸುವ ಮರಗಳ ಪಟ್ಟಿಯಿಂದ ಹೊರಗಿಟ್ಟು ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಮೂರು ತಿಂಗಳ ಹಿಂದೆಯೇ ನೀರಾ ನೀತಿಯನ್ನು ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಸಹ ಪಡೆಯಲಾಗಿತ್ತು. ಇಷ್ಟಾಗಿಯೂ ಅಂತಿಮ ಗೆಜೆಟ್ ಅಧಿಸೂಚನೆ ಹೊರಡಿಸಲು ನಿಧಾನ ಮಾಡಲಾಗುತ್ತಿದೆ’ ಎಂದು ರೈತರು ಆರೋಪಿಸುತ್ತಿದ್ದರು.

‘ನಮ್ಮ ಕಂಪೆನಿಯ ನಿರ್ವಹಣೆಗಾಗಿ ಪ್ರತಿ ತಿಂಗಳು ₹40 ಸಾವಿರ ವೆಚ್ಚ ಮಾಡುತ್ತಿದ್ದೆವು. ಪ್ರಾಯೋಗಿಕವಾಗಿ ನೀರಾವನ್ನು ಇಳಿಸುತ್ತಿದ್ದೆವು. ಸಕ್ಕರೆ ಸಹ ಉತ್ಪಾದಿಸಿದ್ದೆವು. ಸರ್ಕಾರದ ನಿರ್ಧಾರ ಖುಷಿ ತಂದಿದೆ’ ಎಂದು ಕುಣಿಗಲ್‌ ತೆಂಗು ಬೆಳೆಗಾರರ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುಲಿವಾನ್ ಗಂಗಾಧರಯ್ಯ ತಿಳಿಸಿದರು.

ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ನೇಮಕ ಮಾಡಲಾಗುವುದು. ಈ ಸಮಿತಿ ನೀರಾ ಉತ್ಪಾದನಾ ಕಂಪೆನಿಗಳಿಗೆ ಪರವಾನಗಿ ನೀಡಲಿದೆ. ನೀರಾ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಹಾಗೂ ನೀರಾ ಘಟಕಗಳಿಗೆ ಸಹಾಯಧನ ನೀಡಲು ಈ ವರ್ಷದ ಬಜೆಟ್‌ನಲ್ಲಿ ಸರ್ಕಾರ ₹ 3 ಕೋಟಿ ಮೀಸಲಿರಿಸಿತ್ತು. ಈ ಹಣ ಕೂಡ ತೋಟಗಾರಿಕೆ ಇಲಾಖೆಗೆ ಬಿಡುಗೆಯಾಗಿದೆ. ಸಹಾಯಧನ ನೀಡಲು  ಕಂಪೆನಿಗಳಿಂದ ಅರ್ಜಿಗಳನ್ನು ಸಹ ಕರೆಯಲಾಗಿದೆ.

ಐದು ತೆಂಗಿನ ಮರ ಇರುವ ರೈತನು ಸಹ ತೆಂಗು ಬೆಳೆಗಾರರ ಕಂಪೆನಿಗಳ ಸದಸ್ಯತ್ವನ್ನು ಪಡೆಯಬಹುದಾಗಿದೆ. ಕೇಂದ್ರೀಯ ತೆಂಗು ಅಭಿವೃದ್ಧಿ ಮಂಡಳಿ ಅಥವಾ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ನೇತೃತ್ವದಲ್ಲಿ ರಚಿಸುವ ರೈತ ಉತ್ಪಾದಕ ಸಂಘಗಳಿಗೆ ಮಾತ್ರ ನೀರಾ ಇಳಿಸಲು, ಉಪ ಉತ್ಪನ್ನಗಳನ್ನು ತಯಾರಿಸಲು ಅನುಮತಿ ನೀಡಲಾಗುವುದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

ನೀರಾ ಇಳಿಸಲು, ಪರಿಷ್ಕರಿಸಲು, ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಅಬಕಾರಿ ಇಲಾಖೆಯಿಂದ ಲೈಸೆನ್ಸ್ ಪಡೆಯಬೇಕು. ನೀರಾದಿಂದ ಸಕ್ಕರೆ, ಬೆಲ್ಲ, ಜೇನು ತುಪ್ಪ ಮತ್ತಿತರ ಉಪ ಉತ್ಪನ್ನಗಳನ್ನು ಮಾಡಬೇಕಾದರೆ ಅದಕ್ಕೆ ಪ್ರತ್ಯೇಕವಾಗಿ ಅಬಕಾರಿ ಇಲಾಖೆಯಿಂದ ಲೈಸೆನ್ಸ್ ಪಡೆಯಬೇಕಾಗಿದೆ.

ಅಂಗಡಿಗಳಲ್ಲಿ, ಪಾರ್ಲರ್‌ಗಳಲ್ಲಿ ನೀರಾ ಮಾರಾಟ ಮಾಡಲು ಅಂಗಡಿ, ಪಾರ್ಲರ್‌ ಮಾಲೀಕರು ಯಾವುದೇ ಇಲಾಖೆಯಿಂದ ಅನುಮತಿ ಅಥವಾ ಲೈಸೆನ್ಸ್ ಪಡೆಯುವ ಅಗತ್ಯ ಇರುವುದಿಲ್ಲ.

‘ತೆಂಗು ಬೆಳೆಗಾರರು ಸಂಭ್ರಮ ಪಡುವಂಥ ದಿನವಾಗಿದೆ. ಎರಡು ದಶಕಗಳ ನೀರಾ ಹೋರಾಟಕ್ಕೆ ಸಿಕ್ಕ ಪ್ರತಿಫಲ. ವಿದೇಶಿ ತಂಪು ಪಾನಿಯಗಳ ಬದಲಿಗೆ ದೇಸಿಯ ತೆಂಗಿನ ನೀರಾ ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಸಂಕಷ್ಟದಲ್ಲಿರುವ ರೈತರಿಗೂ ಲಾಭದಾಯಕವಾಗಲಿದೆ’ ಎಂದು ಬೆಲೆ ಕಾವಲು ಸಮಿತಿ ರಾಜ್ಯ ಘಟಕದ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ  ತಿಳಿಸಿದರು.

––––––––––

ಅಂಕಿ–ಅಂಶ

ತೆಂಗು ಬೆಳೆಯುವ ಜಿಲ್ಲೆ  ತೆಂಗು ಬೆಳೆ ವಿಸ್ತೀರ್ಣ (ಹೆಕ್ಟೇರ್‌ಗಳಲ್ಲಿ)

ತುಮಕೂರು  1.45 ಲಕ್ಷ

ಹಾಸನ   61,348

ಚಿಕ್ಕಮಗಳೂರು  41,229

ಚಿತ್ರದುರ್ಗ  38,301

ಮೈಸೂರು  22,417

ಮಂಡ್ಯ  20,872

ಉಡುಪಿ  17,771

ದಕ್ಷಿಣ ಕನ್ನಡ 16,296

ರಾಮನಗರ  13,637

ದಾವಣಗೆರೆ  11,022

ಚಾಮರಾಜನಗರ 9,299

ಉತ್ತರ ಕನ್ನಡ 7,768

ಶಿವಮೊಗ್ಗ 5,419

(ಆಧಾರ: ಕೇಂದ್ರೀಯ ತೆಂಗು ಅಭಿವೃದ್ಧಿ ಮಂಡಳಿ)

***

10 ಮರಗಳಿಂದ 1.8 ಲಕ್ಷ  ಆದಾಯ

10 ತೆಂಗಿನ ಮರಗಳಿಂದ ನೀರಾ ಇಳಿಸಿದರೆ ವರ್ಷಕ್ಕೆ ₹ 1.8 ಲಕ್ಷ ಆದಾಯ ಗಳಿಸಬಹುದು ಎಂದು ಕುಣಿಗಲ್‌ ತೆಂಗು ಬೆಳೆಗಾರರ ಕಂಪೆನಿ ಲೆಕ್ಕಾಚಾರ ಹಾಕಿದೆ.

ಕಂಪೆನಿ ಈಗಾಗಲೇ ಪ್ರಾಯೋಗಿಕವಾಗಿ ನೀರಾ ಇಳಿಸುತ್ತಿದೆ. ಒಂದು ಮರದಲ್ಲಿ ಪ್ರತಿ ದಿನ ಕನಿಷ್ಠ 2 ಲೀಟರ್‌ ನೀರಾ ಸಿಗುತ್ತಿದೆ. ಕೆಲವು ಮರಗಳಲ್ಲಿ 4 ಲೀಟರ್‌ವರೆಗೂ ಸಿಗುತ್ತಿದೆ. ಅಂದರೆ 10 ಮರಗಳಿಗೆ ಕನಿಷ್ಠ 20 ಲೀಟರ್ ಇಳಿಸಬಹುದಾಗಿದೆ.

‘ಕಂಪೆನಿಯು ಪ‍್ರತಿ ಲೀಟರ್‌ಗೆ ರೈತರಿಗೆ ₹ 15 ನೀಡುತ್ತದೆ. ಅಂದರೆ ಪ್ರತಿ ದಿನ 10 ಮರಗಳಿಂದ ₹ 300  ಸಂಪಾದಿಸಬಹುದು. ಇದು ತಿಂಗಳಿಗೆ ₹ 9000 ಆಗಲಿದೆ. ವರ್ಷಕ್ಕೆ ₹ 1.8 ಲಕ್ಷ ಆಗಲಿದೆ’ ಎಂದು ಹುಲಿವಾನ್ ಗಂಗಾಧರಯ್ಯ ಲೆಕ್ಕಚಾರ ಮಂಡಿಸಿದರು.

***

ಚಿತ್ರ ಇದೆ–ಮುದ್ದಹನುಮೇಗೌಡ ಪ್ರಯತ್ನಕ್ಕೆ ಫಲ ಸಿಕ್ಕಿದೆ

’ಜಿಲ್ಲೆಯ ತೆಂಗು ಬೆಳೆಗಾರರ ಹೋರಾಟಕ್ಕೆ ಮೊದಲಿನಿಂದಲೂ ಬೆಂಬಲ ಕೊಡುತ್ತಾ ಬಂದಿದ್ದೇನೆ. ನೀರಾ ನೀತಿ ಜಾರಿಗೆ ತರಬೇಕೆಂದು ರೈತರೊಂದಿಗೆ ಸರ್ಕಾರವನ್ನು ಒತ್ತಾಯಿಸಿದ್ದೆನು. ಮುಖ್ಯಮಂತ್ರಿ ಮೇಲೆ ಸತತ ಒತ್ತಡ ಹಾಕುವ ಕೆಲಸ ಮಾಡಿದ್ದೆ. ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ. ರಾಜ್ಯ ಸರ್ಕಾರ ತೆಂಗು ಬೆಳೆಗಾರರ ಪರವಾಗಿದೆ ಎಂಬುದನ್ನು ಮುಖ್ಯಮಂತ್ರಿ ತೋರಿಸಿದ್ದಾರೆ’ ಎಂದು ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಪ್ರತಿಕ್ರಿಯಿಸಿದರು.

’ನೀರಾ ಮೌಲ್ಯವರ್ಧನೆಯಿಂದ ರೈತರಿಗೆ ಸಾಕಷ್ಟು ಲಾಭವಾಗಲಿದೆ. ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕೇಂದ್ರ, ರಾಜ್ಯ ಸರ್ಕಾರದಿಂದ ಸಿಗುವ ಎಲ್ಲ ರೀತಿಯ ನೆರವನ್ನು ತೆಂಗು ಬೆಳೆಗಾರರಿಗೆ ಕೊಡಿಸಲು ಪ್ರಯತ್ನ ಹಾಕುತ್ತೇನೆ’ ಎಂದು ತಿಳಿಸಿದರು.

’ಕೊಬ್ಬರಿಗೆ ಉತ್ತಮ ಬೆಲೆ ಸಿಗಬೇಕೆಂಬ ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದೇನೆ. ಸದನದಲ್ಲಿ ಸತತವಾಗಿ ಪ್ರಶ್ನೆ ಮಾಡುತ್ತಿದ್ದೇನೆ. ಕ್ವಿಂಟಲ್‌ ಕೊಬ್ಬರಿಗೆ ₹20 ಸಾವಿರ ಸಿಗಬೇಕು. ಈ ನನ್ನ ಪ್ರಯತ್ನಕ್ಕೂ ಎಲ್ಲೋ ಒಂದು ಕಡೆ ಫಲ ಸಿಗುವ ನಂಬಿಕೆ ಇದೆ’ ಎಂದರು.

‘ಜಿಲ್ಲೆಯ, ಕ್ಷೇತ್ರದ ತೆಂಗು ಬೆಳೆಗಾರರ ಹೋರಾಟಗಾರರಿಗೆ ಮತ್ತಷ್ಟು ಶಕ್ತಿ ನೀಡುವ ಕೆಲಸ ಮಾಡುತ್ತೇನೆ.  ತೆಂಗು ಬೆಳೆಗಾರರ ಬದುಕಿನ ಸುಧಾರಣೆಗೆ ಬೇಕಾದ ನೀತಿಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಬೆಳೆಗಾರರು ಮಾಡುವ ಹೋರಾಟದ ಜತೆಗೆ ಮುಂದೆಯೂ ನಿಲ್ಲುತ್ತೇನೆ’ ಎಂದು ತಿಳಿಸಿದರು.

**

5ಟಿಎಂ13 ಸ್ವಾಗತಾರ್ಹ ನಿರ್ಧಾರ

’ಸರ್ಕಾರದ ನಿರ್ಧಾರ ಸ್ವಾಗತಾರ್ಹ. ನೀರಾ ನೀತಿ ಜಾರಿಗೆ ರೈತ ಸಂಘಟನೆಗಳು, ಅನೇಕ ಸಂಘ–ಸಂಸ್ಥೆಗಳು, ರಾಜಕೀಯ ದುರೀಣರು, ಅನೇಕ ಜನರ ಶ್ರಮ, ಹಣ ಎಲ್ಲ ವ್ಯಯವಾಗಿ ಈಗ ಕಾರ್ಯರೂಪಕ್ಕೆ ಬಂದಿದೆ. ಇದರ ಕೀರ್ತಿ ಎಲ್ಲರಿಗೂ ಸೇರಬೇಕು. ನಾನು ಆರು ತಿಂಗಳಿಂದ ಸಿನಿಮಾ ರಂಗ ಬಿಟ್ಟು ರೈತರಿಗಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಹುಲಿವಾನ್ ಗಂಗಾಧರಯ್ಯ ಅಭಿಪ್ರಾಯಪಟ್ಟರು.

ಸರ್ಕಾರಕ್ಕೆ ಈಗಲಾದರೂ ತೆಂಗು ಬೆಳೆಗಾರರ ಪರ ಕಣ್ಣು ತೆರೆದಿದೆ. ಇನ್ನು ಮುಂದೆ ತೆಂಗು ಬೆಳೆಗಾರರ ಅದೃಷ್ಟ ಖುಲಾಯಿಸಲಿದೆ. ನೀರಾವನ್ನು ಗಂಭೀರವಾಗಿ ಪರಿಗಣಿಸಬೇಕು. ಬೋಗಸ್ ಕಂಪೆನಿಗಳ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.